ರಾಜೀನಾಮೆಗೂ ಮುನ್ನ ಈಶ್ವರಪ್ಪ ಶಕ್ತಿ ಪ್ರದರ್ಶನ: ಪಿಚ್ಚರ್ ಅಭಿ ಬಾಕೀ ಹೇ?
ಕಟ್ಟಾ ಸಂಘವಾದಿ, ಪಕ್ಷ ನಿಷ್ಠೆಗೆ ಹೆಸರಾಗಿರುವ ಕೆ.ಎಸ್.ಈಶ್ವರಪ್ಪನವರು ಬೊಮ್ಮಾಯಿ ಸರಕಾರದ ಆಯಕಟ್ಟಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾನ್ಯಾಕೆ ರಾಜೀನಾಮೆ ನೀಡಲಿ ಎಂದಿದ್ದ ಈಶ್ವರಪ್ಪನವರು ಯುಟರ್ನ್ ಹೊಡೆಯುವ ಅನಿವಾರ್ಯತೆಯನ್ನು ಹೈಕಮಾಂಡ್ ಸೃಷ್ಟಿಸಿತ್ತು.
ಈಶ್ವರಪ್ಪನವರ ರಾಜೀನಾಮೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಬಿಜೆಪಿಯ ಇಬ್ಬರು ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಗುರುತರ ಆರೋಪವನ್ನು ಮಾಡಿದ್ದರು. ಮುಂದಿನ ದಿನಗಳಲ್ಲಿ ಆ ಕಾಣದ ಕೈಯಾವುದು ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕರೂ ಸಿಗಬಹುದು.
ಶುಕ್ರವಾರ (ಏಪ್ರಿಲ್ 15) ಮತ್ತು ಸೌರಮಾನ ಯುಗಾದಿಯ ದಿನದಂದು ಈಶ್ವರಪ್ಪ, ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ನೀಡುವ ಮೊದಲು ಈಶ್ವರಪ್ಪ ಭರ್ಜರಿ ಶಕ್ತಿ ಪ್ರದರ್ಶನವನ್ನು ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಸಂಬಂಧ ಈಶ್ವರಪ್ಪನವರ ವಿರುದ್ದ ಉಡುಪಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಮೊದಲು ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಅದಾದ ನಂತರ ಬಂಧಿಸಬೇಕೆಂದು ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದೆ.

ಶಿವಮೊಗ್ಗದಿಂದ ಬೆಂಗಳೂರಿನವರೆಗೆ ರೋಡ್ ಶೋ
ರಾಜೀನಾಮೆ ನೀಡುವ ಮೊದಲು ಶಿವಮೊಗ್ಗದಿಂದ ಬೆಂಗಳೂರಿನವರೆಗೆ ರೋಡ್ ಶೋ ರೀತಿಯಲ್ಲಿ ಅಸಂಖ್ಯಾತ ಅಭಿಮಾನಿಗಳೊಂದಿಗೆ ಈಶ್ವರಪ್ಪ ಶಕ್ತಿ ಪ್ರದರ್ಶನ ಮಾಡಿದರು. ಮಾಡದ ತಪ್ಪಿಗೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವ ಸಂದೇಶವನ್ನು ಈಶ್ವರಪ್ಪ ಸಾರುತ್ತಾ ಬಂದರು. ಇನ್ನೊಂದು ಕಡೆ, ಸಿಎಂ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದರು. ಇದು, ಈಶ್ವರಪ್ಪನವರಿಗೆ ಪಕ್ಷದಲ್ಲಿರುವ ಶಕ್ತಿಯನ್ನು ತೋರಿಸುವಂತಿತ್ತು.

ರಸ್ತೆಯುದ್ದಕ್ಕೂ ಸಿಗುವ ಮಠ, ದೇವಾಲಯಗಳಿಗೂ ಈಶ್ವರಪ್ಪ ಭೇಟಿ
ರಸ್ತೆಯುದ್ದಕ್ಕೂ ಸಿಗುವ ಮಠ, ದೇವಾಲಯಗಳಿಗೂ ಈಶ್ವರಪ್ಪ ಭೇಟಿ ನೀಡಿದರು, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅವರ ಅಭಿಮಾನಿಗಳು ತಮ್ಮ ನಾಯಕನ ಗುಣಗಾನವನ್ನು ದಾರಿಯುದ್ದಕ್ಕೂ ಮಾಡಿಕೊಂಡು ಬಂದರು. ನನ್ನನ್ನು ಬೆಳೆಸಿದ ಪಕ್ಷ ಮತ್ತು ಸಂಘಟನೆಗೆ ಮುಜುಗರ ತರುವುದಿಲ್ಲ ಎಂದು ಪದೇಪದೇ ಹೇಳುತ್ತಾ, ಸಂಘ ನಿಷ್ಠೆಯನ್ನು ಈಶ್ವರಪ್ಪ ತೋರಿದರು. ರಾಜ್ಯದಲ್ಲಿ ಬಿಜೆಪಿಯನ್ನು ಈಶ್ವರಪ್ಪನವರು ಕಟ್ಟಿ ಬೆಳೆಸಿದ ರೀತಿಯನ್ನು ಮತ್ತೆ ಮತ್ತೆ ಅವರ ಅಭಿಮಾನಿಗಳು ಪುನರುಚ್ಚಿಸಿದರು.

ಹಿಂದುಳಿದ ವರ್ಗದ ನಾಯಕರಾಗಿರುವ ಈಶ್ವರಪ್ಪ
ಹಿಂದುಳಿದ ವರ್ಗದ ನಾಯಕರಾಗಿರುವ ಈಶ್ವರಪ್ಪನವರ ರೀತಿಯಲ್ಲಿ ಇದೇ ಸಮುದಾಯದ ಇಷ್ಟು ಜನಪ್ರಿಯ ನಾಯಕ ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ. ಹೆಚ್ಚುಕಮ್ಮಿ ಯಡಿಯೂರಪ್ಪನವರ ಸಮಕಾಲೀನರಾಗಿರುವ ಈಶ್ವರಪ್ಪನವರಿಗೆ ಹೈಕಮಾಂಡ್ ಮಟ್ಟದಲ್ಲೂ ಬೆಂಬಲವಿದೆ. ಇದರಿಂದಾಗಿ, ನೇರವಾಗಿ ಇವರ ರಾಜೀನಾಮೆ ಪಡೆಯಲು ವರಿಷ್ಠರೇ ಎಂಟ್ರಿ ನೀಡಬೇಕಾಯಿತು. "ನಾನು ಆರೋಪ ಮುಕ್ತನಾಗಿ ಹೊರ ಬರುತ್ತೇನೆ, ಕಣ್ಣೀರಿನ ಬೀಳ್ಕೊಡುಗೆಯನ್ನು ನೀಡಬೇಡಿ"ಎಂದು ಈಶ್ವರಪ್ಪನವರು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಶಕ್ತಿಯನ್ನು ತೋರಿಸಲು ಈಶ್ವರಪ್ಪ ರೋಡ್ ಶೋ
ಶಿವಮೊಗ್ಗ ನಗರ - ಭದ್ರಾವತಿ-ಚಿಕ್ಕಮಗಳೂರು-ಹಾಸನ-ತುಮಕೂರು ಜಿಲ್ಲೆಗಳ ಮೂಲಕ ಈಶ್ವರಪ್ಪನವರು ಬೆಂಗಳೂರಿಗೆ ಬಂದರು. ಪ್ರತಿಯೊಂದು ಪ್ರಮುಖ ನಗರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಒಟ್ಟಿನಲ್ಲಿ, ಪಕ್ಷದೊಳಗಿನ ವಿರೋಧಿಗಳಿಗೆ ಮತ್ತು ಕಾಂಗ್ರೆಸ್ಸಿಗೆ ಅದರಲ್ಲೂ ಪ್ರಮುಖವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಶಕ್ತಿಯನ್ನು ತೋರಿಸಲು ಈಶ್ವರಪ್ಪ ರೋಡ್ ಶೋ ಮಾಡಿಕೊಂಡು ಬಂದರು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿ, ಅವರ ಬಲಪ್ರದರ್ಶನ ಮಹತ್ವನ್ನು ಪಡೆದುಕೊಂಡಿದೆ.












Click it and Unblock the Notifications