Mosquitoes: ರೋಗ ಹರಡುವ ಸೊಳ್ಳೆಗಳತ್ತ ಎಚ್ಚರಿಕೆ ವಹಿಸಿ: ಯಾಕೆ ಗೊತ್ತಾ?
ಒಂದೆಡೆ ಎಡೆಬಿಡದೆ ಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ಡೆಂಗ್ಯೂ, ಚಿಕೂನ್ ಗುನ್ಯ ಸೇರಿದಂತೆ ಹಲವು ಸೀಸನಲ್ ಇನ್ ಫ್ಲ್ಯೂಯೆಂಜ಼ಾ ಕಾಡಲಾರಂಭಿಸಿದೆ. ಹೀಗಾಗಿ ರೋಗ ಬರುವ ಮುನ್ನವೇ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸದಾ ಎಚ್ಚರಿಕೆಯಿಂದ ಇರುವುದು ತುಂಬಾ ಅಗತ್ಯವಾಗಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಕಾಡುವುದು, ಜ್ವರಗಳು ಬರುವುದು ಸಾಮಾನ್ಯವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಯಾವ ಜ್ವರವನ್ನೂ ಲಘುವಾಗಿ ಪರಿಗಣಿಸದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಇದರ ಜತೆಗೆ ಕಾಯಿಲೆ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೂ ನಾವು ಮುಂದಾಗಬೇಕಾಗಿದೆ.
ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂ ಇನ್ನಿಲ್ಲದಂತೆ ಕಾಡುತ್ತಿದ್ದು ಹಲವರನ್ನು ಬಲಿಪಡೆದಿದೆ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಇದರ ಜತೆಗೆ ಚಿಕೂನ್ ಗುನ್ಯಾ, ಇನ್ಫ್ಲ್ಯೂಯೆಂಜ಼ಾ-ಎ, ಹೆಚ್1ಎನ್1, ಹೆಚ್3ಎನ್2, ಇನ್ಫ್ಲ್ಯೂಯೆಂಜ಼ಾ-ಬಿ ಹೀಗೆ ಸೀಸನಲ್ ಇನ್ ಫ್ಲ್ಯೂಯೆಂಜ಼ಾ ಕಾಡಿದರೆ ಜೀವನ ಸಂಕಷ್ಟಕ್ಕೀಡಾಗಬಹುದು. ಹೀಗಾಗಿ ಈ ರೋಗಗಳತ್ತ ನಾವು ಎಚ್ಚರಿಕೆ ವಹಿಸುವುದು ಒಳ್ಳೆಯದು. ಒಂದು ವೇಳೆ ಮಳೆಗಾಲದಲ್ಲಿ ಉಸಿರಾಟದ ಸೋಂಕು ಕಂಡು ಬಂದರೆ ಅದು ಇನ್ಫ್ಲ್ಯೂಯೆಂಜ಼ಾ ಆಗಿದ್ದರೂ ಅಚ್ಚರಿಯಿಲ್ಲ. ಈ ವೇಳೆ ವೈದ್ಯರನ್ನು ಸಂಪರ್ಕಿಸಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಇನ್ಫ್ಲ್ಯೂಯೆಂಜ಼ಾ ಸಣ್ಣ ಮಕ್ಕಳಲ್ಲಿ ಮತ್ತು ಅರವತ್ತೈದು ವರ್ಷ ಮೀರಿದ ವಯಸ್ಕರನ್ನು ಹೆಚ್ಚಾಗಿ ಬಾಧಿಸುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಆದರೆ ಅಪಾಯ ತಪ್ಪಿದಲ್ಲ. ಈಗಾಗಲೇ ರೋಗ ನಿರೋಧಕ ಶಕ್ತಿ ಕುಗ್ಗಿರುವ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಹೃದಯ, ಯಕೃತ್, ಮೂತ್ರಪಿಂಡದ ತೊಂದರೆ ಅನುಭವಿಸುತ್ತಿರುವ, ಮಧುಮೇಹದ ರೋಗಿಗಳಲ್ಲಿ ಸೋಂಕಿನ ಸಂಭಾವ್ಯತೆ ಹೆಚ್ಚಾಗಿರುವುದರಿಂದ ವೈದ್ಯರನ್ನು ಸಂಪರ್ಕಿಸಿ ಇನ್ಫ್ಲ್ಯೂಯೆಂಜ಼ಾ ನಿರೋಧಕ ಲಸಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಸೋಂಕಿತರಿಂದ ಆದಷ್ಟು ದೂರವಿರಿ
ಇನ್ನು ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ. ಆರೋಗ್ಯವಂತ ವ್ಯಕ್ತಿ ಈ ವಸ್ತುಗಳನ್ನು ಮುಟ್ಟಿದ ಅಥವಾ ಉಪಯೋಗಿಸಿದ ನಂತರ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕ ಪ್ರದೇಶದಲ್ಲಿ ಇದ್ದು ಬಂದ ನಂತರ ಸ್ವಚ್ಛವಾಗಿ ಸೋಪಿನಿಂದ ಕೈಗಳನ್ನು ತಿಕ್ಕಿ ತೊಳೆಯುವುದು ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ರೋಗಲಕ್ಷಣವುಳ್ಳ ವ್ಯಕ್ತಿಗಳಿಂದ ದೂರವಿರಬೇಕು, ರೋಗಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ವಾತಾವರಣ ಬದಲಾದಾಗಲೆಲ್ಲ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಹಾಗೆಂದು ನಿರ್ಲಕ್ಷ್ಯ ವಹಿಸುವುದು ತಪ್ಪು. ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆಗೊಳಗಾಗಿ ಔಷಧಿ ಪಡೆಯುವುದು ಒಳ್ಳೆಯದು. ಇದೆಲ್ಲದರ ನಡುವೆಯೂ ಹರಡುತ್ತಿರುವ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ತಡೆಯಲು ಮುಖ್ಯವಾಗಿ ನಾವು ಸೊಳ್ಳೆಗಳ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ನಮ್ಮ ಮನೆಗಳಿಂದಲೇ ಆರಂಭವಾಗಬೇಕಾಗಿದೆ.

ಸೊಳ್ಳೆಗಳ ನಿಯಂತ್ರಣಕ್ಕೆ ಆದ್ಯತೆ ನೀಡಿ
ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಹೀಗಾಗಿ ಮನೆಯಲ್ಲಿರುವ ಅಥವಾ ಸುತ್ತಮುತ್ತ ಇರುವ ಎಲ್ಲಾ ನೀರಿನ ಟ್ಯಾಂಕ್ ಗಳು ಮತ್ತು ನೀರಿನ ಪರಿಕರಗಳನ್ನು ಭದ್ರವಾಗಿ ಮುಚ್ಚಬೇಕು, ನಿರುಪಯುಕ್ತ ಪರಿಕರಗಳು, ಟಯರ್ ಗಳು, ತೆಂಗಿನ ಚಿಪ್ಪುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಅಥವಾ ನಾಶಪಡಿಸಬೇಕು. ವಾರಕ್ಕೊಮ್ಮೆ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ಮತ್ತು ಒಣಗಿಸಿ ನೀರನ್ನು ತುಂಬಿ ಭದ್ರವಾಗಿ ಮುಚ್ಚಬೇಕು.
ಮನೆಯಲ್ಲಿರುವ ಮತ್ತು ಹೋಟೆಲ್ ಗಳಲ್ಲಿರುವ ನೀರಿನ ಟ್ಯಾಂಕ್ ಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡುವುದು, ಸಿಮೆಂಟ್ ತೊಟ್ಟಿ ಮತ್ತು ಡ್ರಂಗಳನ್ನು ವಾರಕ್ಕೊಮ್ಮೆ ಒಂದು ದಿನ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ, ನೀರನ್ನು ತುಂಬದೇ ಒಣಗಿಸುವುದು, ಹಗಲಿನ ವೇಳೆಯಲ್ಲಿ ಮನೆಗಳಲ್ಲಿ ಮಲಗಿದ್ದಾಗ ಸೊಳ್ಳೆ ಪರದೆಗಳನ್ನು ಬಳಸುವುದು ಬಹು ಮುಖ್ಯವಾಗಿದೆ. ಇದರ ಜತೆಗೆ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಹಗಲು ವೇಳೆಯಲ್ಲಿ ತುಂಬು ತೋಳಿನ ಬಟ್ಟೆ ಧರಿಸಬೇಕು ಅಥವಾ ಸೊಳ್ಳೆ ನಿರೋಧಕಗಳನ್ನು ಬಳಸಬೇಕು, ಮನೆಯ ಒಳಗೆ ಇರುವ ಪ್ರಿಡ್ಜ್, ಕೂಲರ್ಸ್, ಬಕೆಟ್ಸ್, ಬ್ಯಾರಲ್ಸ್, ಹೂವಿನಕುಂಡಗಳು ಮತ್ತು ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಸ್ವಯಂ ಚಿಕಿತ್ಸೆಗೆ ಆದ್ಯತೆ ನೀಡಬೇಡಿ
ಮಳೆಗಾಲದಲ್ಲಿ ಒಡೆದ ಮಡಿಕೆಗಳು, ಉಪಯೋಗಿಸದೇ ಇರುವ ಬಾಟಲ್ಗಳು, ಡಬ್ಬಗಳು, ಹಳೆಯ ಟಯರ್ ಗಳನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದರಲ್ಲಿ ನೀರು ನಿಲ್ಲುತ್ತಿದ್ದು, ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಹೀಗಾಗಿ ಈ ಬಗ್ಗೆ ಗಮನಹರಿಸಬೇಕಾಗುತ್ತದೆ. ಮನೆಗಳಲ್ಲಿ ತೆರೆದ ಪರಿಕರಗಳಲ್ಲಿ ನೀರನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಸ್ವಚ್ಚಗೊಳಿಸದೇ ಇರುವುದು, ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಜ್ವರ ಬಂದಂತಹ ಸಂದರ್ಭಗಳಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು, ವೈದ್ಯರ ಸಲಹೆ, ಸೂಚನೆಗಳಿಲ್ಲದೇ ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸಬೇಡಿ.
ಹಿರಿಯ ನಾಗರಿಕರು ಮತ್ತು ಮಕ್ಕಳು ಹಗಲಿನ ವೇಳೆಯಲ್ಲಿ ಸೊಳ್ಳೆಪರದೆಗಳನ್ನು ಉಪಯೋಗಿಸದೆ ಮಲಗುವುದು, ದೇಹಕ್ಕೆ ಶ್ರಮವಾಗುವ ಕೆಲಸಗಳನ್ನು ಮಾಡುವುದನ್ನು ತಡೆಯಬೇಕಾಗಿದೆ. ಒಟ್ಟಾರೆಯಾಗಿ ಹೇಳಬೇಕಾದರೆ ಮಳೆಗಾಲದಲ್ಲಿ ಹಲವು ರೀತಿಯ ಕಾಯಿಲೆಗಳು, ಅದರಲ್ಲೂ ಶೀತ, ಜ್ವರಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಡೆಂಗ್ಯೂ ಹರಡಲು ಸೊಳ್ಳೆಗಳು ಕಾರಣವಾಗಿದ್ದು, ಅವುಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಅವುಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗ ಬೇಕಾಗಿದೆ.












Click it and Unblock the Notifications