Agriculture Land: ಕೃಷಿ ಭೂಮಿ ಖರೀದಿ ವೇಳೆ ಪರಿಶೀಲನೆ ಮಾಡಬೇಕಾದ ಪ್ರಮುಖ ದಾಖಲೆಗಳಿವು
ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸೈಟುಗಳ ಬೆಲೆ ಮಾತ್ರವಲ್ಲ ಕೃಷಿ ಭೂಮಿ ಬೆಲೆ ಕೂಡ ಕಳೆದ ಕೆಲವು ವರ್ಷಗಳಲ್ಲೇ ಡಬಲ್ ಆಗಿದೆ. ಆದರೂ ಸರಿಯಾದ ಮಾಹಿತಿ ಇಲ್ಲದೆ ಭೂಮಿಯ ವ್ಯವಹಾರಕ್ಕೆ ಕೈ ಹಾಕಿದರೆ ನಷ್ಟ ಮಾಡಿಕೊಳ್ಳುವುದು ಖಂಡಿತ. ಕೃಷಿ ಭೂಮಿ ಖರೀದಿ ಮಾಡುವ ಮುನ್ನ ಹಲವು ವಿಚಾರಗಳ ಬಗ್ಗೆ ಗಮನ ಕೊಡುವುದು ಮುಖ್ಯವಾಗುತ್ತದೆ.
ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಮಾಡಲು ಇದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಿದ್ದು, ಆದರೂ ಖರೀದಿದಾರರು ಕೃಷಿ ಭೂಮಿ ಖರಿದಿಯಲ್ಲಿನ ನಿಯಮ, ಭೂಮಿಯ ವರ್ಗೀಕರಣ ಮತ್ತು ಸಮಸ್ಯೆಗಳನ್ನು ಕಡಿಮೆ ಮಾಡಲು ಕಾನೂನು ಕಾರ್ಯವಿಧಾನದ ಬಗ್ಗೆ ಮಾಹಿತಿ ತಿಳಿದಿರಬೇಕು.

ಭೂಮಿಯ ವರ್ಗೀಕರಣ
ಕೃಷಿ ಭೂಮಿ ಖರೀದಿ ಮಾಡುವವರು ಭೂಮಿಯ ವರ್ಗೀಕರಣವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಕೃಷಿ ಭೂಮಿ ಮತ್ತು ಖರಾಬು ಭೂಮಿ ಎನ್ನುವ ವಿಧಗಳಿವೆ. ಖರಾಬ್ ಭೂಮಿಯನ್ನು ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ.
ಖರಾಬ್ ಭೂಮಿಯಲ್ಲಿ ಕಲ್ಲಿನಿಂದ ಕೂಡಿರುವ ಜಾಗ ಅಥವಾ ಹಳ್ಳಗಳಂತಹ ಭೂಪ್ರದೇಶದ ಸಮಸ್ಯೆಗಳಿಂದಾಗಿ ಕೃಷಿಗೆ ಸೂಕ್ತವಲ್ಲದ ಖಾಸಗಿ ಒಡೆತನದ ಭೂಮಿಯಾಗಿರುತ್ತದೆ. ಸರ್ಕಾರಿ ತೆರಿಗೆಗಳನ್ನು ಪಾವತಿಸಿದ ನಂತರ ಈ ಭೂಮಿಯನ್ನು ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.
ರಸ್ತೆಗಳು, ಸ್ಮಶಾನಗಳು ಅಥವಾ ಒಳಚರಂಡಿ ವ್ಯವಸ್ಥೆಗಳಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಬಿ ಖರಾಬ್ ಭೂಮಿ ಎಂದು ಕರೆಯಲಾಗುತ್ತದೆ. ಇದನ್ನು ಖಾಸಗಿ ಒಡೆತನಕ್ಕೆ ತರಲು ಅಥವಾ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ಕೃಷಿ ಭೂಮಿಯನ್ನು ಖರೀದಿ ಮಾಡುವ ಮೊದಲು ಮುಂದೆ ಬರಬಹುದಾದ ಕಾನೂನು ಸಮಸ್ಯೆಗಳನ್ನು ತಪ್ಪಿಸಲು ಜಮೀನಿನಲ್ಲಿ ಖರಾಬ್ ಭೂಮಿ ಎಲ್ಲಿದೆ, ಅದರಿಂದ ಆಗುವ ಸಮಸ್ಯೆಗಳೇನು ಎನ್ನುವುದನ್ನು ಮೊದಲೇ ಪರಿಶೀಲನೆ ಮಾಡಬೇಕಾಗುತ್ತದೆ.
ಈ ದಾಖಲೆಗಳನ್ನು ಪರಿಶೀಲನೆ ಮಾಡಿ
ಕೃಷಿ ಭೂಮಿ ಖರೀದಿ ಮಾಡುವ ಮೊದಲು ಈ ಕೆಳಗೆ ನೀಡಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವುದನ್ನು ಮರೆಯಬೇಡಿ.
- ಮಾರಾಟ ಪತ್ರ: ಕೃಷಿ ಭೂಮಿಯ ಮಾಲೀಕತ್ವದ ಇತಿಹಾಸವನ್ನು ಇದರಲ್ಲಿ ತಿಳಿಯಬಹುದು.
- ಎನ್ಕಂಬರೆನ್ಸ್ ಪ್ರಮಾಣಪತ್ರ (EC) : ಕೃಷಿ ಭೂಮಿಯ ಮೇಲಿನ ಯಾವುದೇ ಸಾಲಗಳು, ಕಾನೂನು ತೊಡಕುಗಳು ಇದ್ದರೆ ಅದನ್ನು ಇಸಿ ಪರಿಶೀಲನೆ ಮಾಡುವ ಮೂಲಕ ತಿಳಿಯಬಹುದು. 30 ರಿಂದ 35 ವರ್ಷಗಳ ಹಿಂದಿನವರೆಗೂ ಇಸಿ ಪರಿಶೀಲನೆ ಮಾಡುವುದು ಒಳ್ಳೆಯದು.
- ಆರ್ ಟಿಸಿ (ಹಕ್ಕುಗಳು, ಬಾಡಿಗೆ ಮತ್ತು ಬೆಳೆಗಳ ದಾಖಲೆ) ಅಥವಾ ಪಹಣಿ; ಇದು ಭೂಮಿಯ ಹಂಚಿಕೆ, ಮಾಲೀಕತ್ವದ ಮಾಹಿತಿಯನ್ನು ತಿಳಿಸುತ್ತದೆ.
- ಆಕರ್ಬಂದ್ ಮತ್ತು ಟಿಪ್ಪಣಿ; ಇದು ಭೂಮಿಯ ಅಳತೆ ಮತ್ತು ಗಡಿಗಳ ಬಗ್ಗೆ ಮಾಹಿತಿ ನೀಡುತ್ತದೆ.
- ಗ್ರಾಮ ನಕ್ಷೆ: ಆಸ್ತಿಯ ಸ್ಥಳದ ಭೌಗೋಳಿಕ ಉಲ್ಲೇಖವನ್ನು ನೀಡುತ್ತದೆ.
- ಪವರ್ ಆಫ್ ಅಟಾರ್ನಿ: ಬೇರೆಯವರಿಗೆ ಭೂಮಿಯನ್ನು ಮಾರಾಟ ಮಾಡಲು ಕಾನೂನುಬದ್ಧ ಹಕ್ಕುಗಳಿವೆಯೇ ಎನ್ನುವ ಬಗ್ಗೆ ತಿಳಿಸುತ್ತದೆ.
- ಆಕ್ಷೇಪಣೆ ರಹಿತ ಪ್ರಮಾಣಪತ್ರ (NOC) : ಭೂಮಿಯನ್ನು ಮಾರಾಟ ಮಾಡಲು ಯಾವುದೇ ಆಕ್ಷೇಪಣೆ ಇಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ.
- ಭೂಮಿಯನ್ನು ಅಡಮಾನ ಇಡಲಾಗಿದೆಯಾ ಎನ್ನುವುದನ್ನು ಕೂಡ ಪರಿಶೀಲನೆ ಮಾಡಬೇಕು. ಅಥವಾ ಭೂಮಿಯ ಮೇಲೆ ಕಾನೂನು ವ್ಯಾಜ್ಯಗಳಿವೆಯೇ ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕಾಗುತ್ತದೆ.












Click it and Unblock the Notifications