ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳನ್ನು ಮಾಜಿ ಸಿಎಂ ಬಣ್ಣಿಸಿದ್ದು ಹೀಗೆ
ಹಾವೇರಿ, ಅಕ್ಟೋಬರ್ 01: ಆರೋಗ್ಯ ಎಲ್ಲರಿಗೂ ಮುಖ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಆರೋಗ್ಯ ಕಾಪಾಡಲು, ಉಜ್ವಲ, ಆಯುಷ್ಮಾನ್ ಭಾರತದಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳ ಸದುಪಯೋಗ ಪಡೆಯಿರಿ ಜೊತೆಗೆ ನಿಮ್ಮ ನಿತ್ಯದ ಕೆಲಸದಲ್ಲಿ ನಿಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ, ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್, ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿಗ್ಗಾವಿ ಜಂಟಿಯಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಆರೋಗ್ಯ ಎಲ್ಲರಿಗೂ ಅವಶ್ಯವಾಗಿರುವಂಥದ್ದು, ಆರೋಗ್ಯ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ. ಬಹಳಷ್ಟು ಜನ ಹಗಲಿರುಳು ದುಡಿಯುತ್ತಾರೆ. ಸಣ್ಣಪುಟ್ಟ ಜ್ವರ ಬಂದಾಗ ತೋರಿಸಿಕೊಳ್ಳುವುದಿಲ್ಲ. ಆರೋಗ್ಯ ಹದಗೆಟ್ಟ ಮೇಲೆ ಚಿಕಿತ್ಸೆ ಪಡೆಯುಲು ಹೊಗಲು ಆಗುವುದಿಲ್ಲ. ಮನೆಯಲ್ಲಿ ತಾಯಂದಿರ ಆರೋಗ್ಯ ಅತ್ಯಂತ ಮುಖ್ಯ. ನಿಮ್ಮ ನಿತ್ಯದ ಕೆಲಸದಲ್ಲಿ ನಿಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ಹೇಳಿದರು.
ಆರೋಗ್ಯ ಯೋಜನೆಗಳನ್ನು ವಿವರಿಸಿದ ಬೊಮ್ಮಾಯಿ
ಕೇಂದ್ರ ಸರ್ಕಾರ ಆರೋಗ್ಯದ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಚಚ್ಚತಾ ದಿನ ಮಾಡುತ್ತಿದ್ದಾರೆ. ಮನೆ ಸುತ್ತಮುತ್ತ ಸ್ವಚ್ಚತೆ ಇದ್ದರೆ ನಮ್ಮ ಆರೋಗ್ಯ ಶುದ್ದವಾಗಿರುತ್ತದೆ. ಹೆಣ್ಣು ಮಕ್ಕಳು ಕಟ್ಟಿಗೆ ಒಲೆ ಮೂಲಕ ಅಡಿಗೆ ಮಾಡುವುದರಿಂದ ಆರೋಗ್ಯ ಹದಗೆಡುತ್ತಿತ್ತು. ಅದನ್ನು ತಪ್ಪಿಸಲು ಉಜ್ವಲ ಯೋಜನೆ ಜಾರಿಗೆ ತಂದಿದ್ದಾರೆ. ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿದ್ದಾರೆ. ಐದು ಲಕ್ಷದ ವರೆಗೂ ಎಲ್ಲಿಯೇ ಚಿಕಿತ್ಸೆ ಪಡೆದರೂ ಯಾವುದೇ ಹಣ ಖರ್ಚು ಮಾಡದೇ ಚಿಕಿತ್ಸೆ ಸಿಗಲಿದೆ ಎಂದು ವಿವರಿಸಿದರು.
ದೇಶದ 130 ಕೋಟಿ ಜನರಿಗೆ ಈ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಮೋದಿಯವರು ಜನೌಷಧಿ ಕೇಂದ್ರಗಳನ್ನು ತೆರೆದು ಬಡವರಿಗೆ ಕಡಿಮೆ ದರದಲ್ಲಿ ಔಷಧ ದೊರೆಯುವಂತೆ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ ಸ್ವಚ್ಚ ನೀರು ಕೊಡುವ ಜಲ ಜೀವನ್ ಮಿಷನ್ ಯೋಜನೆ ಕೊಟ್ಟಿದ್ದಾರೆ. ಕಳೆದ 75 ವರ್ಷದಲ್ಲಿ 25 ಲಕ್ಷಮನೆಗಳಿಗೆ ಮಾತ್ರ ನಲ್ಲಿ ಮೂಲಕ ನೀರು ಸರಬರಾಜಾಗುತ್ತಿತ್ತು. ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ.

ಗ್ರಾಮದ ಜನರಿಗೆ ಮಾಜಿ ಸಿಎಂ ಭರವಸೆ
ಹುರುಳಿಕುಪ್ಪೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒಂದು ವಾರದಲ್ಲಿ ಬೋರ್ ವೆಲ್ ಹಾಕಿಸಿಕೊಡಲಾಗುವುದು. ಸವಣೂರು ಡ್ರೈನೇಜ್ ನೀರು ಹುರುಳಿಕುಪ್ಪೆ ಗ್ರಾಮದ ಕೆರೆಗೆ ಬರುತ್ತಿದೆ ಎಂಬ ಆರೋಪ ಇದೆ. ಅದನ್ನು ತಕ್ಷಣ ಅಧಿಕಾರಿಗಳಿಗೆ ಸೂಚಿಸಿ ಕೆರೆಗೆ ಕೊಳಚೆ ನೀರು ಸೇರುವುದನ್ನು ತಿರುಗಿಸಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ತಮ್ಮ ಸಂಸ್ಥೆಯ ಸಿಎಸ್ ಆರ್ ಫಂಡ್ ನಿಂದ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ಆರೋಗ್ಯ ಶಿಬಿರ ಮಾಡಲಾಗುತ್ತಿದೆ. ಎಲ್ಲರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ನನ್ನ ಅವಧಿಯಲ್ಲಿ ಶಿಗ್ಗಾವಿಯಲ್ಲಿ 250 ಬೆಡ್ ನ ಆಸ್ಪತ್ರೆ, ಸವಣೂರಿನಲ್ಲಿ 100 ಬೆಡ್ ನ ತಾಯಿ ಮಗುವಿನ ಆಸ್ಪತ್ರೆ ಮಾಡಲಾಗುತ್ತಿದೆ. ಸವಣೂರಿಗೆ ಒಂದು ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಆರಂಭವಾಗುತ್ತಿದೆ. ಮುಂದಿನ ವಾರ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.












Click it and Unblock the Notifications