ಬೆಳೆ ವಿಮೆ ಸ್ವಯಂ ಘೋಷಣಾ ಪತ್ರಕ್ಕೆ ಆಕ್ಷೇಪ: ನಿಯಮ ಸಡಿಲಿಸಿ, ನೋಂದಣಿ ಗಡುವು ವಿಸ್ತರಿಸಲು ಕೇಂದ್ರಕ್ಕೆ ಬೊಮ್ಮಾಯಿ ಪತ್ರ
ಹಾವೇರಿ/ಗದಗ: ರಾಜ್ಯದಲ್ಲಿ ಜನರು ಬರಗಾಲದಿಂದ ತತ್ತರಿಸುತ್ತಿದ್ದಾರೆ. ಬೆಳೆದ ಬೆಳೆ ಕೈಗೆ ಬರುವುದೇ ಅನುಮಾನ ಎನ್ನಲಾಗಿದೆ. ಈನಡುವೆ ಬೆಳೆ ವಿಮೆ ಕಡ್ಡಾಯ ಸ್ವಯಂ ಘೋಷಣಾ ಪತ್ರ ಹೊಂದುವಂತೆ ಸರ್ಕಾರ ಮಾಡಿದ ಆದೇಶಕ್ಕೆ ಜಿಲ್ಲೆ ರೈತರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೊಂದಾಯಿಸಿಕೊಳ್ಳಲು ಗಡುವು ವಿಸ್ತರಣೆಗೆ ಕೇಂದ್ರ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬುಧವಾರ ಮಾತನಾಡಿದ ಅವರು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS) ಅಡಿಯಲ್ಲಿ ಸಾಲ ಪಡೆಯದ ರೈತರಿಗೆ (Non-Loanee Farmers) ಕಡ್ಡಾಯಗೊಳಿಸಲಾಗಿರುವ 'ಸ್ವಯಂ ಘೋಷಣಾ ಪತ್ರ' ಸಲ್ಲಿಕೆಗೆ ಆದೇಶಿಸಲಾಗಿದೆ. ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಸಡಿಲಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ವಿಮಾ ವಿಭಾಗದ ಹೆಚ್ಚುವರಿ ಆಯುಕ್ತರು 2025 ಡಿಸೆಂಬರ್ 30ರಂದು ಈ ಕುರಿತು ಆದೇಶದ ಹೊರಡಿಸಿದ್ದಾರೆ. ಅದರ ಪ್ರಕಾರ, ಸಾಲ ಪಡೆಯದ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವಾಗ ತಮ್ಮ ಜಮೀನಿಗೆ ಯಾವುದೇ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅಥವಾ ಯಾವುದೇ ಹಣಕಾಸು ಸಂಸ್ಥೆಗಳಿಂದ (ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಸಕ್ರಿಯ ಕೃಷಿ ಸಾಲ ಪಡೆದಿಲ್ಲ ಎಂಬುದನ್ನು ಖಚಿತಪಡಿಸಲು ಕಡ್ಡಾಯವಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡಬೇಕಾಗಿದೆ.
ಈ ಆದೇಶದನ್ವಯ ಸಾಮಾನ್ಯ ಸೇವಾ ಕೇಂದ್ರಗಳು (CSCs) ಮತ್ತು ಗ್ರಾಮ್ ಒನ್ ಕೇಂದ್ರಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಈ ಹೊಸ ನಿಯಮದಿಂದಾಗಿ ಹಾವೇರಿ ಜಿಲ್ಲೆಯ ರೈತರು ತೀವ್ರ ತೊಂದರೆ ಹಾಗೂ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ರೈತರಿಂದ ಮನವಿಗಳು ಸಲ್ಲಿಕೆಯಾಗಿವೆ. ರೈತರು ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಮನಗಂಡು, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ನಿಯಮವನ್ನು ಸಡಿಲಗೊಳಿಸಬೇಕು ಮತ್ತು ರೈತರಿಗೆ ನೆರವಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರನ್ನು ಪತ್ರದ ಮೂಲಕ ಮನವಿ ಮಾಡಿದ್ದಾರೆ.
PMFBY ನೋಂದಣಿ ಅವಧಿ ವಿಸ್ತರಿಸಲು ಮನವಿ
2026-27ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಡಿ (PMFBY) ಹೆಸರುಕಾಳು ಮತ್ತು ಹತ್ತಿ ಬೆಳೆಗಳಿಗೆ ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆದ ಅವರು, ಗದಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸ್ವೀಕರಿಸಲಾದ ಮನವಿಯ ಮೇರೆಗೆ 2026-27ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಡಿ ಹೆಸರುಕಾಳು ಮತ್ತು ಹತ್ತಿ ಬೆಳೆಗಳಿಗೆ ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಿಸುವಂತೆ ಅವರು ಕೋರಿದ್ದಾರೆ.
ಒಣಗಿದ ಹತ್ತಿ, ಹೆಸರು ಇನ್ನಿತರ ಬೆಳೆಗಳು
ಗದಗ ಭಾಗದ ರೈತರು ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಪ್ರಮಾಣದಲ್ಲಿ ಹೆಸರುಕಾಳು ಮತ್ತು ಹತ್ತಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದ್ದು, ಹೊಲದಲ್ಲಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಇದರಿಂದ ಆತಂಕಗೊಂಡಿರುವ ರೈತರು ತಮ್ಮ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆಗೊಳಪಡಿಸಲು ಮುಂದಾಗಿದ್ದಾರೆ.














Click it and Unblock the Notifications