SIR: 20 ವರ್ಷದಿಂದ ನಕಲಿ ಮತ ಹಾಕಿಸಿಕೊಂಡು ಗೆದ್ದ ಕಾಂಗ್ರೆಸ್: ಫೇಕ್ ಮತಗಳಿಗಾಗಿ ಧರಣಿ: ಬೊಮ್ಮಾಯಿ ಗಂಭೀರ ಆರೋಪ
ಹಾವೇರಿ: ಕಾಂಗ್ರೆಸ್ ನಾಯಕರು 20 ವರ್ಷಗಳಿಂದ ನಕಲಿ ಮತಗಳನ್ನು ಹಾಕಿಸಿಕೊಂಡು, ಒಂದೇ ವ್ಯಕ್ತಿ ಎರಡು ಕಡೆ ಮತಗಳನ್ನು ಹಾಕಿಸುವುದು ಅಥವಾ ಸತ್ತವರ ಹೆಸರಿನಲ್ಲಿ ಮತಗಳನ್ನು ಹಾಕಿಸಿಕೊಂಡು ಆಯ್ಕೆಯಾಗುತ್ತಿದ್ದರು. ಈಗ ಅವರಿಗೆ ತೊಂದರೆಯಾಗಿದೆ. ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಫೇಕ್ ಮತಗಳ ರಕ್ಷಣೆಗಾಗಿ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಾಟಕವಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾರರು ಪಟ್ಟಿ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭದಿಂದಲೂ ಬಹಳ ಸರಳವಾಗಿ ನಡೆದುಕೊಂಡು ಬರುತ್ತಿತ್ತು. ಪ್ರಾರಂಭದಲ್ಲಿ ಕಾಂಗ್ರೆಸ್‌ನವರು ಅಲ್ಲಲ್ಲಿ ಮಸೀದಿಯಲ್ಲಿ ಅರ್ಜಿ ತುಂಬಿಸುವುದಕ್ಕೆ ನಾವು ವಿರೋಧಿಸಿದ್ದೇವು. ಆದರೆ ನಂತರದ ಕ್ರಮಗಳ ಪ್ರಕಾರ ಇದು ಸರಳವಾಗಿ ಮುಗಿಯಬೇಕಿತ್ತು, ಅಕ್ಟೋಬರ್ 8 ರಂದು ಕರಡು ಮತ ಪಟ್ಟಿಯನ್ನು ಕೊಡಬೇಕಾಗಿತ್ತು. ಇಂತ ಸಂದರ್ಭದಲ್ಲಿ ಕಾಂಗ್ರೆಸ್ ನವರು ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.

ನಮ್ಮ ಪಕ್ಷದ ಪ್ರಮುಖರು ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈಗ ಕಾನೂನು ಪ್ರಕಾರ ಎಲ್ಲವೂ ಹೊರಬರುತ್ತಿದೆ ಎಂದಿರುವ ಅವರು, ರಾಜ್ಯ ಸರ್ಕಾರಕ್ಕೆ ನೇರವಾಗಿ ಇದರ ವಿರುದ್ಧ ಕೇಸ್ ಹಾಕುವ ಯಾವುದೇ ಅಧಿಕಾರವಿಲ್ಲ, ಇದು ಸಂಪೂರ್ಣವಾಗಿ ಚುನಾವಣಾ ಅಧಿಕಾರಿಗಳು ಮಾಡಬೇಕಾದ ಕೆಲಸ. ಕಾನೂನಿನ ಪ್ರಕಾರ ಅರ್ಹರ ಮತಗಳು ಮಾತ್ರ ರಕ್ಷಿಸಲ್ಪಡಬೇಕು ಮತ್ತು ಅನರ್ಹರ ಮತಗಳನ್ನು ತೆಗೆದುಹಾಕಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಡಿಲಿಮಿಟೇಷನ್ ಆಗಬೇಕು
ಸವಣೂರು ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಆಗಬೇಕು ಎನ್ನುವ ಬೇಡಿಕೆ ಕುರಿತು ಕೇಳಿದ್ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ಡಿಲಿಮಿಟೇಶನ್ (ಗಡಿ ನಿರ್ಣಯ) ಪ್ರಕ್ರಿಯೆ ನಡೆಯಬೇಕು, ಅದಾದ ಬಳಿಕ ಕೇಂದ್ರ ಮತ್ತು ರಾಜ್ಯ ಸಮಿತಿಗಳು ರಚನೆಯಾಗುತ್ತವೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಜನಸಂಖ್ಯೆ ಇರಬೇಕು ಎಂದು ನಿರ್ಧಾರ ಆಗುತ್ತದೆ. ಆ ಸಂದರ್ಭದಲ್ಲಿ ಅವರ ಮನವಿಯನ್ನು ಪರಿಗಣಿಸಲಾಗುತ್ತದೆ ಎಂದರು.
ಕಾಂಗ್ರೆಸ್ ಸೋಲು: ಆತ್ಮಾವಲೋಕನ ಮಾಡಿಕೊಳ್ಳಿ
SIR ಪ್ರಕ್ರಿಯೆ ಶುರುವಾದ ನಂತರ ನಡೆದ ಎಲ್ಲ ಚುನಾವಣೆಗಳನ್ನು ರದ್ದು ಪಡಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಎಲ್ಲ ಕಡೆ ಸೋತಿದ್ದಾರೆ. ಅದಕ್ಕಾಗಿ ಕುಂಟು ನೆಪ ಹೇಳುತ್ತಿದ್ದಾರೆ. ಅವರ ಪಕ್ಷ ಯಾಕೆ ಸೋತಿದೆ ಅನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕೆಂಬ ಬೇಡಿಕೆ ಶುರುವಾಗಿದೆ. ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷದವರಿಗೆ ದೇಶದ ಅಭಿವೃದ್ಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ದೇಶದಲ್ಲಿ ಹೇಗಾದರೂ ಮಾಡಿ ದಂಗೆ ಎಬ್ಬಿಸಬೇಕೆಂದು ಬಯಸುತ್ತಿದ್ದಾರೆ. ಅದಕ್ಕೆ ದೇಶದ ಜನರು ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.


Click it and Unblock the Notifications
