CT Ravi: ಸರ್ಕಾರದಿಮದ ಸಿಟಿ ರವಿಗೆ ಚಿತ್ರಹಿಂಸೆ, ಪೊಲೀಸ್ ದುರ್ಬಳಕೆ: ಬಸವರಾಜ ಬೊಮ್ಮಾಯಿ
ನವದೆಹಲಿ, ಡಿಸೆಂಬರ್ 20: ರಾಜ್ಯದ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ವೇಳೆ ಸಿಟಿ ರವಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ, ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮುತ್ತಿಗೆ ಹಾಕಿದರು. ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಿಟಿ ರವಿ ಅವರಿಗೆ ಚಿತ್ರ ಹಿಂಸೆ ನೀಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯ ಶೋಧನೆ ಆಗಬೇಕು. ಸರ್ಕಾರ ಅವರಿಗೆ ಚಿತ್ರಹಿಂಸೆ ಕೊಟ್ಟು ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಗುಡುಗಿದರು.

ಈ ವಿಚಾರದಲ್ಲಿ ಪೊಲೀಸರ ನಡವಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿಯವರು ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಬಹಳ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ನಾವು ನ್ಯಾಯಸಮರ್ಥವಾಗಿ ಮಾತನಾಡುತ್ತಿದ್ದೇವೆ. ನಾವೇನೂ ತನಿಖೆ ಬೇಡ ಎಂದು ಹೇಳಿಲ್ಲ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮ ನಿರ್ಧಾರಕ್ಜೆ ಬರುವುದು ತಪ್ಪು ಎಂದು ಅವರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ವಿಧಾನಸೌಧದಲ್ಲಿ ಈ ರೀತಿಯ ಪ್ರಕರಣಗಳು ನಡೆದಾಗ ಯಾರೂ ಪೊಲಿಸ್ ಸ್ಟೇಷನ್ ಗೆ ಹೋಗಿರಲಿಲ್ಲ. ವಿಧಾನ ಮಂಡಲದ ಸಮಿತಿ ಮಾಡಿ ಅದರ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಹೀಗಿರುವಾಗಿ ಈ ಪ್ರಕರಣದಲ್ಲಿ ಯಾಕೆ ಏಕಾಏಕಿ ಬಂಧಿಸಿ, ಪೊಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ, ರಾತ್ರಿಯೆಲ್ಲ ಊರೆಲ್ಲ ಸುತ್ತಿಸುವುದು ಯಾವ ಕಾನೂನಿನಲ್ಲಿ ಬರೆದಿದೆ ಎಂದು ಅವರು ಕಟುವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ
ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ. ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು SIT ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ಧವೇ ತನಿಖೆ ನಡೆಯುತ್ತಿದೆ. ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ ಎಂದು ಆಪಾದಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮೊದಲು ರೈತ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಸುರಿಸಿದರು. ಹಲವಾರು ಬಾರಿ ರೈತರು, ಇದೇ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ಮಾಡಿದಾಗಲೂ ಈ ರೀತಿ ನಡೆದಿರಲಿಲ್ಲ. ಒಂದು ರೀತಿಯಲ್ಲಿ ಪೊಲೀಸರ ದಬ್ಬಾಳಿಕೆಯಿಂದಲೇ ಎಲ್ಲವನ್ನು ಮಾಡಬಲ್ಲೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬಂದಂತಿದೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಬಂಧನ ಸದನದೊಳಗೆ ಆಗಿರುವ ಘಟನೆಯ ಬಗ್ಗೆ ಸಭಾಪತಿಯವರು ನಿರ್ಣಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಂಧನ ತಪ್ಪು, ಈ ಪ್ರಕ್ರಿಯೆಯೇ ಮಾಡಿಲ್ಲ
ಈ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆ ಮಾಡದೇ ದೂರು ಕೊಟ್ಟ ತಕ್ಷಣ ರವಿ ಅವರನ್ನು ಬಂಧನ ಮಾಡುವಂಥದ್ದು, ಅವರನ್ನು ನಡೆಸಿಕೊಂಡ ರೀತಿ ಸರಿಯಾಗಿಲ್ಲ. ಅವರನ್ನು ಬಂಧನ ಮಾಡಿರುವುದೇ ತಪ್ಪು ಇಂತಹ ಪ್ರಕರಣಗಳಲ್ಲಿ ಶೊಕಾಸ್ ನೊಟೀಸ್ ಕೊಟ್ಟು ಕರೆದು ವಿಚಾರಣೆ ಮಾಡಬೇಕು. ಸಾಕ್ಷ್ಯ ಆಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು. ಹಲವಾರು ಪ್ರಕರಣಗಳಲ್ಲಿ ಎಫ್ ಎಸ್ ಎಲ್ ಲ್ಯಾಬ್ ಗೆ ಕೊಟ್ಟು ವಿಡಿಯೊ, ಆಡಿಯೊಗಳನ್ನು ಪರಿಶೀಲಿಸುತ್ತಾರೆ.
ನಿಯಮ ಪಾಲನೆ ಆಗಿಲ್ಲ
ಈ ಪ್ರಕರಣದಲ್ಲಿ ಅದ್ಯಾವುದನ್ನೂ ಮಾಡದೇ ದೂರು ಕೊಟ್ಟ ಎರಡು ಗಂಟೆಯಲ್ಲಿ ಅವರನ್ನು ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದು, ಅಲ್ಲಿಂದ ಹಲವಾರು ಕಡೆ ತಿರುಗಾಡಿಸಿ ಚಿತ್ರಹಿಂಸೆ ನೀಡಲಾಗಿದೆ. ಮಾನಸಿಕ ಹಿಂಸೆ ಕೊಟ್ಟು ಅವರನ್ನು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ. ಎಲ್ಲದಕ್ಕೂ ಕಾನೂನಿದೆ. ಒಂದು ವಿಧಾನವಿದೆ. ಅದ್ಯಾವುದ ಇಲ್ಲಿ ಪಾಲನೆ ಆಗಿಲ್ಲ.
ಪೊಲಿಸರೆ ಕಾನೂನು ಉಲ್ಲಂಘನೆ ಮಾಡಿ ತನಿಖೆ ಮಾಡಲು ಯಾವ ರಾಜಕೀಯ ಶಕ್ತಿ ಪ್ರೇರಣೆ ಇದೆ. ಮುಖ್ಯಮಂತ್ರಿಗಳು ಬಹಳ ವಿಚಾರ ಮಾಡಬೇಕಿದೆ. ಈ ರೀತಿಯ ದಮನಕಾರಿ ದಬ್ಬಾಳಿಕೆ ಜನ ಶಕ್ತಿಯ ಮುಂದೆ ಬಹಳ ದಿನ ನಡೆಯುವುದಿಲ್ಲ. ಇದೇ ರೀತಿ ಮುಂದುವರೆದರೆ ಸರ್ಕಾರಕ್ಕೆ ಕೇಡುಗಾಲ ದೂರವಿಲ್ಲ ಅನಿಸುತ್ತದೆ ಎಂದು ಹೇಳಿದರು.












Click it and Unblock the Notifications