CM Bommai Resigns: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದಾರೆ. ರಾತ್ರಿ ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯಲ್ಲಿದ್ದ ಅವರು ಇಂದು ಸಂಜೆ ಬೆಂಗಳೂರಿಗೆ ಆಗಮಿಸಿದ್ದರು.
2021ರ ಜುಲೈ 26ರಂದು ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಒಟ್ಟು 19 ತಿಂಗಳು, 17 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಿರ್ವಹಿಸಿದ ಬಳಿಕ ಸ್ಥಾನ ತೊರೆಯುವಂತಾಗಿದೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭಾರೀ ಅಂತರದ ಸೋಲು ಅನುಭವಿಸಿದೆ. ಅನೇಕ ಪ್ರಮುಖ ನಾಯಕರು ಕೂಡ ಸೋಲು ಕಾಣುವ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಆದರೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಭಾರೀ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಬಸವರಾಜ ಬೊಮ್ಮಾಯಿ 63,384 ಮತಗಳನ್ನು ಪಡೆದುಕೊಂಡಿದ್ದರೆ ಕಾಂಗ್ರೆಸ್‌ನ ಯಾಸೀರ್ ಖಾನ್ ಪಠಾಣ್ 44,394 ಮತಗಳನ್ನು ಪಡೆದರು.
ಕರ್ನಾಟಕಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರದ ಗೆಲುವು ಸಾಧಿಸಿದೆ. 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಬಹುಮತ ಪಡೆದುಕೊಂಡು ಸರ್ಕಾರ ರಚನೆಯ ಅವಕಾಶ ಪಡೆದುಕೊಂಡಿದೆ. ಇನ್ನು ಬಿಜೆಪಿ 65 ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದರೆ ಜೆಡಿಎಸ್ ಸ್ಥಾನ 19ಕ್ಕೆ ಕುಸಿದಿದೆ. ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದ್ದರೆ ಬಿಜೆಪಿ ಸೋಲಿನ ಪರಾಮರ್ಶೆಗೆ ಮುಂದಾಗಿದೆ.












Click it and Unblock the Notifications