ಸಿದ್ದರಾಮಯ್ಯರ 7 ವರ್ಷ ಅವಧಿಯ ಕ್ವಾಲಿಟಿ-ಕ್ವಾಂಟಿಟಿ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಗದಗ: ಸಿಎಂ ಸಿದ್ದರಾಮಯ್ಯ ಅವರ ದಿವಂಗತ ಡಿ.ದೇವರಾಜ ಅರಸು ಅವರ ಸಾಧನೆ ಸರಿಗಟ್ಟಿ ಸುದೀರ್ಘ ಅವಧಿವರೆಗೆ ಮುಖ್ಯಮಂತ್ರಿ ಆಗಿ ಆಡಳಿತ ನಡೆಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮತ್ತು ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಅವಧಿಯ ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಚರ್ಚೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅತ್ಯಂತ ಸುದೀರ್ಘ ಅವಧಿಗೆ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಕೆಲವರು ಮಾಡುತ್ತಿದ್ದಾರೆ. ಎಷ್ಟು ದಿನ ಮುಖ್ಯಮಂತ್ರಿ ಆಗಿದ್ದೀರಿ ಎನ್ನುವುದಕ್ಕಿಂತ ಅಷ್ಟು ದಿನಗಳಲ್ಲಿ ಏನು ಸಾಧನೆ ಮಾಡಿದ್ದೀರಿ. ರಾಜ್ಯವನ್ನು ಯಾವ ಪ್ರಗತಿಯಲ್ಲಿ ತೆಗೆದುಕೊಂಡು ಹೋಗಿದ್ದೀರಿ, ನಿಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಜನ ಬಡವರು, ಹಿಂದುಳಿದವರಿಗೆ ಒಳ್ಳೆಯದಾಗಿದೆ. ಒಟ್ಟಾರೆ ರಾಜ್ಯದ ಆರ್ಥಿಕತೆ ಏನು ಸುಧಾರಣೆ ಆಗಿದೆ ಎನ್ನುವುದು ಬಹಳ ಮುಖ್ಯ ಅದು ಚರ್ಚೆ ಆಗಬೇಕಿದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಮಾತನಾಡಬೇಕಿದೆ ಎಂದರು.

ಬಳ್ಳಾರಿಯಲ್ಲಿನ ಗಲಾಟೆ ಕಪ್ಪು ಚುಕ್ಕೆ
ಬಳ್ಳಾರಿಯಲ್ಲಿನ ಗಲಾಟೆ ಕುರಿತ ಪ್ರಶ್ನೆ ಉತ್ತರಿಸಿದ ಅವರು, ರಾಜ್ಯದ ಬೀದರ್, ಬಳ್ಳಾರಿಯಲ್ಲಿ ಆಗುತ್ತಿರುವ ಬೆಳವಣಿಗೆ ಸರಿಯಾದ್ದಲ್ಲ. ಜನಪ್ರತಿನಿಧಿಗಳಿಗೆ ಶೋಭೆ ತರುವಂಥದ್ದಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ. ಅದನ್ನು ಗೌರವಯುತ ಚೌಕಟ್ಟಿನಲ್ಲಿ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ನಡೆದುಕೊಳ್ಳುವುದು ಒಳ್ಳೆಯದಲ್ಲ ಎಂದರು.
ಬಳ್ಳಾರಿ ಘಟನೆ ಕ್ರಿಮಿನಲ್ ಕೃತ್ಯವು ಈಗಾಗಲೇ ಯಾರಿಂದ ಗುಂಡು ತಗುಲಿದೆ ಎನ್ನುವುದು ಗೊತ್ತಾಗಿದೆ. ಅವನು ಯಾರ ಪ್ರೇರಣೆಯಿಂದ ಗುಂಡು ಹಾರಿಸಿದ ಎನ್ನುವುದನ್ನು ತಿಳಿದು ಅವನನ್ನು ಬಂಧಿಸುವುದು ಮುಖ್ಯ. ಅಂದಾಗ ಮಾತ್ರ ಇದರ ಹಿಂದಿರುವ ಷಡ್ಯಂತ್ರ ಬಯಲಾಗುತ್ತದೆ. ಒಬ್ಬರ ಮನೆ ಮುಂದೆ ಬಂದು ಗಲಾಟೆ ಮಾಡಿ ಗುಂಡು ಹಾರಿಸುವ ಮಟ್ಟಕ್ಕೆ ಹೋಗುತ್ತಿದೆ ಅಂದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಪೊಲಿಸರ ಭಯ ಇಲ್ಲದಂತಾಗಿದೆ. ಪೊಲೀಸರೆ ಹಲವಾರು ಅಪರಾಧದಲ್ಲಿ ತೊಡಗಿರುವುದು. ಹಲವಾರು ಪೊಲಿಸರು ಅಮಾನತಾಗುತ್ತಿರುವುದು ನೋಡಿದಾಗ ಇಲಾಖೆಯ ನೈತಿಕತೆ ಸಂಪೂರ್ಣ ಹಾಳಾಗಿದೆ. ಮುಖ್ಯಮಂತ್ರಿ ಗಳು ದಾಖಲೆ ಪ್ರಮಾಣದ ಆಡಳಿತ ಮಾಡುತ್ತಿರುವ ಸಂದರ್ಭದಲ್ಲಿ ಇಷ್ಟೊಂದು ಕಪ್ಪು ಚುಕ್ಕೆ ಹೊತ್ತುಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಮುಚ್ಚಿ ಹಾಕುವ ಪ್ರಯತ್ನ
ಮೃತ ಕಾಂಗ್ರೆಸ್ ಕಾರ್ಯಕರ್ತನ ದೇಹವನ್ನು ಎರಡು ಬಾರಿ ಪೋಸ್ಟ್ ಮಾರ್ಟ್ಂ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ನಡೆದಿರುವ ಘಟನೆ ಹಾಗೂ ಘಟನೆ ನಡೆದಾಗ ಪೊಲಿಸರು ನಡೆದುಕೊಂಡ ರೀತಿ ಅಲ್ಲಿ ಸಿಕ್ಕಿರುವ ಮಾಹಿತಿ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಸಿಕ್ಕಿರುವ ಬುಲೆಟ್ ಗಳು, ಬಾಂಬ್ ಗಳು ಎಲ್ಲವನ್ನೂ ನೋಡಿದರೆ ತನಿಖೆ ಯಾವ ರೀತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಮೃತರ ಪೋಸ್ಟ್ ಮಾರ್ಟ್ಂ ಎರಡು ಸಾರಿ ಮಾಡಿದ್ದಾರೆ ಎನ್ನುವುದು ಅದೇ ರೀತಿ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಅವರು ಸಹ ಸಂಶಯ ವ್ಯಕ್ತಪಡಿಸಿದರು.
ಗೃಹ ಸಚಿವರು ಹೇಳಿದ್ದೇನು?
ಮೃತರ ದೇಹ ಎರಡು ಬಾರಿ ಮರಣೋತ್ತರ ಪರೀಕ್ಷೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಾ.ಜಿ.ಪರಮೇಶ್ವರ ಅವರು, ಮೃತ ವ್ಯಕ್ತಿಯ ದೇಹವನ್ನು ಎರಡು ಸಲ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎರಡು ಬಾರಿ ಎಂದು ನಾಯಕರು ಹೇಳುತ್ತಿದ್ದಾರೆ. ಒಂದು ಬಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾಗಿ ತಿಳಿಸಿದ ವೈದ್ಯರ ಮಾತನ್ನು ನಾನು ನಂಬುತ್ತೇನೆ ಎಂದು ಹೇಳಿದರು.












Click it and Unblock the Notifications