ಸೋನಿಯಾಗಾಂಧಿ ವಿಷಕನ್ಯೆ ಹೇಳಿಕೆ: ರಾಜೀನಾಮೆ ಬೇಕಾದ್ರೆ ಕೊಡ್ತೇನೆ ಆದ್ರೆ ಕ್ಷಮೆ ಕೇಳಲ್ಲ ಎಂದ ಯತ್ನಾಳ್
ಹುಬ್ಬಳ್ಳಿ, ಮೇ 01: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ವಿಷಕನ್ಯೆ ಅಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಮುಖಂಡರು ಯತ್ನಾಳ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, "ದೊರೆಸ್ವಾಮಿ ನಾಟಕ ಕಂಪೆನಿಗೆ ಕಾಂಗ್ರೆಸ್ ಏಜೆಂಟ್ ಅಂದಿದ್ದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ನವರು 91 ಸಾರಿ ಬೈದಿದ್ದಾರೆ, ಅವರನ್ನು ವಿಷಸರ್ಪ ಎಂದಿದ್ದಕ್ಕೆ ನಾನು ವಿಷಕನ್ಯೆ ಎಂದು ಹೇಳಿದ್ದೇನೆ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ, ಬೇಕಾದರೆ ರಾಜೀನಾಮೆ ಕೊಡುತ್ತೇನೆ" ಎಂದು ಹೇಳಿದರು.

ಮುಖ್ಯಮಂತ್ರಿಯಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬೊಮ್ಮಾಯಿಯವರನ್ನಾದರೂ ಸಿಎಂ ಮಾಡಲಿ ಅಥವಾ ನನ್ನನ್ನಾದರೂ ಮಾಡಲಿ ಎನ್ನುವ ಮೂಲಕ ಪರೋಕ್ಷವಾಗಿ ತಾನು ಸಿಎಂ ರೇಸ್‌ನಲ್ಲಿದ್ದೇನೆ ಎಂದು ಸಂದೇಶ ನೀಡಿದ್ದಾರೆ. ಸಿಎಂ ಬೊಮ್ಮಾಯಿಯವರದ್ದು ನಮ್ಮ ತರಹ ಬಲವಾದ ಹಿಂದುತ್ವ ಅಲ್ಲ, ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಕನಸು ಕಂಡಿಲ್ಲ ಎಂದು ಹೇಳಿದರು.
ಕುಟುಂಬ ರಾಜಕಾರಣ ವಿರೋಧಿ ಎಂದ ಯತ್ನಾಳ್
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸ್ತಿದ್ಯಾ ಎನ್ನುವ ಬಗ್ಗೆ ಉತ್ತರ ನೀಡಿದ ಯತ್ನಾಳ್, ಅವರ ಹತ್ತಿರವೇ ಅಧಿಕಾರ ಇದೆ ಅಲ್ಲವಾ, ಕೆಲವೊಮ್ಮ ಅಧಿಕಾರ ಹೋಗುತ್ತೆ. ನಾನು ನೇರವಾಗಿ ಮಾತನಾಡುವ ವ್ಯಕ್ತಿ, ಕುಟುಂಬ ರಾಜಕಾರಣವನ್ನು ನಾನು ವಿರೋಧಿಸುತ್ತೇನೆ. ಈಗ ನನ್ನ ಹತ್ತಿರವೂ ಅಧಿಕಾರ ಇಲ್ಲ, ನನ್ನನ್ನು ಸಿಎಂ ಅಭ್ಯರ್ಥಿ ಅಂತೀರಿ, ನಾನು ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ, ನಾನು ಗೆಲ್ಲುತ್ತೇನೆ, ಮುನ್ನಡೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ" ಎಂದು ಹೇಳಿದರು.
ನಾಲ್ಕು ಜನರನ್ನು ಎನ್‌ಕೌಂಟರ್ ಮಾಡ್ಬೇಕಿತ್ತು
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಯಾವತ್ತೂ ಹಿಂದುತ್ವದ ಪರವಾಗಿ ಮಾತನಾಡಿಲ್ಲ ಎಂದು ಯತ್ನಾಳ್ ಹೇಳಿದರು. ಹುಬ್ಬಳ್ಳಿಯಲ್ಲಿ ಕೋಮು ಗಲಭೆಯಾದಾಗ 4 ಜನರನ್ನು ಎನ್‌ಕೌಂಟರ್ ಮಾಡ್ಬೇಕಿತ್ತು, ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಆದಾಗ ಶೆಟ್ಟರ್ ಅವರೇ ಅಧಿಕಾರದಲ್ಲಿ ಇದ್ದದ್ದು, ಪೊಲೀಸ್ ಠಾಣೆಗೆ ಹೋಗಿದ್ದ ನಾಲ್ವರನ್ನು ಎನ್‌ಕೌಂಟರ್ ಮಾಡ್ಬೇಕಿತ್ತು ಎಂದು ಹೇಳಿದರು.
ಕಾಂಗ್ರೆಸ್‌ನವರಿಗೆ ಈಗ ಲಿಂಗಾಯತ ಸಮುದಾಯದ ಜಪ ಮಾಡ್ತಿದ್ದಾರೆ. ಶೆಟ್ಟರ್ ಬಿಟ್ಟುಹೋಗಿದ್ದರ ಪರಿಣಾಮದ ಚರ್ಚೆ ಮಾಡಲು ನಾವು ಸಭೆ ಮಾಡಿದ್ದು ನಿಜ, ಲಿಂಗಾಯತ ಮುಖ್ಯಮಂತ್ರಿ ಅನ್ನೋ ಪ್ರಶ್ನೆ ಈಗ ಇಲ್ಲ, ಕಾಂಗ್ರೆಸ್‌ಗೆ ಧೈರ್ಯ ಇದ್ದರೆ ಲಿಂಗಾಯತರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದರು.
ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿರುವ ಬಗ್ಗೆ ಮಾತನಾಡಿದ ಯತ್ನಾಳ್, ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಎಲೆಕ್ಷನ್ ನಡೀತಿದೆ, ಯಾರಾದರೂ ವಾಪಸ್ ಪಡೆಯಲಿ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.












Click it and Unblock the Notifications