ಸಿದ್ದು,ಯತ್ನಾಳ್ ಟಾಕ್ ವಾರ್; ಈ ಬಾರಿಚುನಾವಣೆಯಲ್ಲಿ ಯತ್ನಾಳ್ ಗೆಲ್ಲುವುದಿಲ್ಲ: ಸಿದ್ದರಾಮಯ್ಯ ಭವಿಷ್ಯ
ಮುಸ್ಲಿಂರಿಗೆ ಮತ ಹಾಕಬೇಡಿ ಎಂದು ಹೇಳಿಕೆ ನೀಡಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು,ಫೆಬ್ರವರಿ27: ಚುನಾವಣೆ ಹತ್ತಿರಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ ಹಾಗೂ ಪ್ರತ್ಯಾರೋಪದ ನಡುವೆ ಹಿಂದುತ್ವ ಹಾಗೂ ಮುಸ್ಲಿಂರಿಗೆ ಮತ ಹಾಕಬೇಡಿ ಎನ್ನುವ ಚರ್ಚೆ ಜೋರಾಗಿದೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮುಸ್ಲಿಂರಿಗೆ ಮತ ಹಾಕಬೇಡಿ ಎಂದು ಹೇಳಿಕೆ ನೀಡಿದ್ದು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಯತ್ನಾಳ್ ವಿರುದ್ದ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವೋಟ್ ಏನು ಅವರ ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ.? ಈ ಬಾರಿ ಬಸವನಗೌಡ ಪಾಟೀಲ್ ಯತ್ನಾಳ್ ಗೆಲ್ಲಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ರಾಜ್ಯಕ್ಕೆ ಮೋದಿ ಆಗಮಿಸಿರುವ ವಿಚಾರವಾಗಿ ಮಾತನಾಡಿದ ಅವರು, ಪ್ರವಾಹ ಬಂದು ಜನ ಸತ್ತಾಗ ಬರಲಿಲ್ಲ, ಈಗ ಬರಲು ಶುರು ಮಾಡಿದ್ದಾರೆ. ಯಾಕೆಂದರೆ ಬಿಜೆಪಿ ಅವರಿಗೆ ಲೀಡರ್ ಶಿಪ್ ಇಲ್ಲ
ಅದಕ್ಕೆ ಮೋದಿ ಮುಖ ಇಟ್ಟಕೊಂಡು ವೋಟ್ ಕೇಳ್ತಾರೆ ಎಂದು ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ಕುಟುಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಚರಂಡಿ, ರಸ್ತೆ, ಸೇತುವೆ ಮುಂತಾದ ಅಭಿವೃದ್ಧಿ ವಿಚಾರಗಳನ್ನು ಪ್ರಶ್ನೆ ಮಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡಿ ಎಂದಿದ್ದಾರೆ. ಅಮಿತ್ ಶಾ ಅವರು ಮಂಗಳೂರಿಗೆ ಬಂದು ಮುಂದಿನ ಚುನಾವಣೆ ಅಬ್ಬಕ್ಕ ವರ್ಸಸ್ ಟಿಪ್ಪು ಸುಲ್ತಾನ್ ನಡುವೆ ನಡೆಯುವುದು ಎಂದಿದ್ದಾರೆ. ಇವೆಲ್ಲವನ್ನು ಬಿಟ್ಟು ಜನರ ಬಳಿ ಹೋಗಿ ಏನು ಮಾಡಿದ್ದೇವೆ, ಮುಂದೆ ಏನು ಮಾಡುತ್ತೇವೆ ಎಂದು ಹೇಳಿ, ನೀವು ಮಾತನಾಡುತ್ತಿರುವ ಯಾವ ವಿಚಾರಗಳು ಜನರ ಬದುಕಿಗೆ ಸಂಬಂಧಿಸಿದವಲ್ಲ ಎಂದು ಹೇಳಿದ್ದೇನೆ. ಈಗ ಚರ್ಚೆ ಆಗಬೇಕಿರುವುದು ನಾಡಿನ ರೈತರು, ಹಿಂದುಳಿದವರು, ದಲಿತರು, ಮಹಿಳೆಯರು, ಮಕ್ಕಳು, ಯುವ ಜನರ ಸಮಸ್ಯೆಗಳ ಬಗ್ಗೆ, ಲವ್ ಜಿಹಾದ್ ಬಗ್ಗೆ ಅಲ್ಲ, ಟಿಪ್ಪು ಬಗ್ಗೆ ಅಲ್ಲ.

ನಾನು ಮುಖ್ಯಮಂತ್ರಿಯಾದ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡುತ್ತಿದ್ದ ಅನುದಾನ 400 ಕೋಟಿ ರೂ. ಇತ್ತು, ನಮ್ಮ ಸರ್ಕಾರದ ಕೊನೆ ಬಜೆಟ್ ನಲ್ಲಿ ಈ ಅನುದಾದ 3150 ಕೋಟಿಗೆ ಹೆಚ್ಚಾಗಿತ್ತು. ಮತ್ತೆ ನಾವು ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಜೆಟ್ ನಲ್ಲೇ ಈ ಅನುದಾನವನ್ನು 5000 ಕೋಟಿಗೆ ಏರಿಕೆ ಮಾಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್,ಸಿ,ಪಿ/ಟಿ,ಎಸ್,ಪಿ ಕಾನೂನನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ.
ನನ್ನ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ ಇತ್ತು, 5 ವರ್ಷಗಳ ನಂತರ ಕೂಡ ಈ ಯೋಜನೆಗೆ ನೀಡಿರುವ ಅನುದಾನ 30,000 ಕೋಟಿಯಲ್ಲೇ ನಿಂತಿದೆ. ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ, ಈಗಿನ ಬಜೆಟ್ ಗಾತ್ರ 3.09 ಲಕ್ಷ ಕೋಟಿ. ಬಜೆಟ್ ಗಾತ್ರ ಹೆಚ್ಚಾದರೂ ಶೋಷಿತ ಜನರಿಗೆ ನೀಡುವ ಅನುದಾನ ಹೆಚ್ಚಾಗಿಲ್ಲ.
ಇದು ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ. ನಾವು ನುಡಿದಂತೆ ನಡೆಯುವವರು, ಬಿಜೆಪಿಯವರು ಕೊಟ್ಟ ಮಾತಿಗೆ ಬೆಲೆಕೊಡದ ವಚನ ಭ್ರಷ್ಟರು. ಇಂಥವರನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ನೀಡುವ ಮೂಲಕ ರಾಜ್ಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ.
ಬಿಜೆಪಿಯವರು ಜನರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳುತ್ತಾರೆ, ನಾವು ಹಿಂದುಗಳಲ್ವಾ? ನಮಗೂ ಹಿಂದೂ ಧರ್ಮ, ಬಸವ ಧರ್ಮದ ಮೇಲೆ ನಂಬಿಕೆ, ಗೌರವ ಇದೆ. ಅವನ್ಯಾರೋ ಕೆಲಸಕ್ಕೆ ಬಾರದವನು ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಾನೆ, ಇಂಥವರಿಗೆ ಜನರೇ ಬುದ್ದಿ ಕಲಿಸಬೇಕು ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.












Click it and Unblock the Notifications