ಯಡಿಯೂರಪ್ಪ ಕುಟಂಬದ ವಿರುದ್ಧ ಯತ್ನಾಳ್ ಹೊಸ ಬಾಂಬ್: ಬ್ಲ್ಯಾಕ್‌ಮೇಲ್ ಮಾಡಿ ಅಧ್ಯಕ್ಷ ಪಟ್ಟ ಪಡೆದಿದ್ದಾರಂತೆ ಬಿ.ವೈ.ವಿಜಯೇಂದ್ರ?
ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಮಾತಿನ ಬಾಂಬ್ ಸ್ಫೋಟಿಸಿದ್ದು. ಬಿಎಸ್‌ವೈ ಅಂದರೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಮತ್ತೆ ಸಿಡಿದೆದ್ದಿದ್ದು, ನೂತನ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾಪ ಮಾಡದೆ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದರೆ, ಮಾಜಿ ಸಿಎಂ ಯಡಿಯೂರಪ್ಪ & ಮತ್ತವರ ಪುತ್ರ ವಿಜಯೇಂದ್ರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಆರೋಪಗಳು ಏನು?
ಕರ್ನಾಟಕದಲ್ಲಿ ಯಡಿಯೂರಪ್ಪ ಹೊರತು ಬಿಜೆಪಿ ಬಲವಾಗಿ ನಿಲ್ಲಲು ಆಗುವುದಿಲ್ಲ ಎಂಬ ಸತ್ಯ ಕೇಂದ್ರ ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಅರಿವಾಗಿದೆ. ಈ ಹಿನ್ನೆಲೆ ಪಕ್ಷದಲ್ಲಿ ಕೆಲವರ ವಿರೋಧ ಇದ್ದರೂ, ಯಡಿಯೂರಪ್ಪ ಅವರ ಪುತ್ರನಿಗೆ ಕರ್ನಾಟಕದ ಬಿಜೆಪಿ ಅಧ್ಯಕ್ಷ ಸ್ಥಾನ ನಿಡಿದ್ದಾರೆ. ಯಾಕಂದ್ರೆ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ್ದ ಯಡಿಯೂರಪ್ಪ ಅವರಿಗೆ ಇಲ್ಲಿನ ರಾಜಕೀಯ ಏರಿಳಿತದ ಸ್ಪಷ್ಟ ಚಿತ್ರಣ ಗೊತ್ತಿರುತ್ತದೆ. ಭವಿಷ್ಯದಲ್ಲಿ ತಮ್ಮ ಪುತ್ರನ ಜೊತೆಗೆ ಯಡಿಯೂರಪ್ಪ ಸಂಪೂರ್ಣ ಕೈಜೋಡಿಸಿ ಪಕ್ಷ ಕಟ್ಟಲಿದ್ದಾರೆ ಎಂಬ ನಿರೀಕ್ಷೆ ಕೂಡ ಇದೆ. ಆದರೆ ಇದೇ ಸಮಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕೆ ಅಧ್ಯಕ್ಷ ಪಟ್ಟ?
ಇದೇ ವೇಳೆ ತಮ್ಮ ಆರೋಪದ ಸರಪಳಿ ಮುಂದುವರಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು. ಬ್ಲ್ಯಾಕ್‌ಮೇಲ್ ಮಾಡುವವರಿಗೆಲ್ಲ ನಾವು ಕೇರ್ ಮಾಡುವುದಿಲ್ಲ, ಬ್ಲ್ಯಾಕ್‌ಮೇಲ್ ಮಾಡುವುದಕ್ಕೂ ಯತ್ನ ಮಾಡುತ್ತಾರೆ ಕೆಲ ಜನ. ಅದಕ್ಕೆಲ್ಲಾ ನಾವು ಕೇರ್ ಮಾಡೋದಿಲ್ಲ, ನಾವು ಸತ್ಯದ ಪರ ಇರುವ ಜನ. ನಾನು ಗಟ್ಟಿಯಾಗಿ ಮಾತನಾಡುವವ, ನನ್ನ ಗಟ್ಟಿತನದಲ್ಲಿ ಯಾವುದೇ ರಾಜಿ ಕೂಡ ಇರುವುದಿಲ್ಲ ಎಂದಿದ್ದಾರೆ. ಹೀಗೆ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷ ಯುದ್ಧ ಸಾರಿದ್ದಾರೆ.
ವಿಪಕ್ಷ ನಾಯಕನ ಸ್ಥಾನಕ್ಕೆ ಡಿಮ್ಯಾಂಡ್?
ಹಾಗೇ ಇದೇ ವೇಳೆ ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕ ಮೂಲದ ನಾಯಕರಿಗೆ ಮೀಸಲಾಗಿ ಇಡಬೇಕು. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಮಾತಿಲ್ಲ ಅಂತಾ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಕೇಂದ್ರ ನಾಯಕರ ವಿರುದ್ಧವೂ ತೊಡೆತಟ್ಟಿದ್ದಾರೆ. ಹಾಗೆ ಉತ್ತರ ಕರ್ನಾಟಕಕ್ಕೆ ವಿಪಕ್ಷ ನಾಯಕನ ಸ್ಥಾನ ಕೊಡಬೇಕು ದಕ್ಷಿಣ ಕರ್ನಾಟಕದವರೆ ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರು ಇದ್ದಾರೆ? ಅಂತ ಈ ವೇಳೆ ಯತ್ನಾಳ್ ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ನಾಯಕರ ಕುರಿತು ಈ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರದ ನಾಯಕರ ಬಳಿ ದೂರಿನ ಸುರಿಮಳೆ ಸುರಿಸಿದ್ದಾರೆ.

ಕೇಂದ್ರದಿಂದ ಬಂದ ವೀಕ್ಷಕರು
ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ ಹೀನಾಯವಾಗಿ ಸೋತ ಹಿನ್ನೆಲೆ ಹೊಸ ಸರ್ಕಾರ ರಚಿಸಿ ಆರು ತಿಂಗಳೇ ಕಳೆದರೂ ಹೊಸ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಹೀಗಾಗಿ ಈಗ ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಠರು ಕಸರತ್ತು ಆರಂಭಿಸಿದ್ದಾರೆ. ಇದೇ ಹಿನ್ನೆಲೆ ಕೇಂದ್ರದ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದು ಕೆಲ ಹೊತ್ತಲ್ಲೇ ನಡೆಯಲಿರುವ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಹೀಗೆ ಕರ್ನಾಟಕ ಬಿಜೆಪಿ ತಿಕ್ಕಾಟ ಈಗಲಾದರೂ ನಿಂತು ಹೋಗಬಹುದು ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿ ಆಟವೇ ಈಗ ಶುರುವಾದಂತೆ ಕಾಣುತ್ತಿದೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪದೇ ಪದೆ ಗರಂ ಆಗುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ಬಾಂಬ್ ಸಿಡಿಸುವ ಮೂಲಕ, ಬಿಎಸ್‌ವೈ ಮಗನಿಗೆ ಪಟ್ಟ ಸಿಕ್ಕರೂ ಆಕ್ರೋಶಗೊಂಡಿದ್ದಾರೆ.












Click it and Unblock the Notifications