ಸಂಕ್ರಾಂತಿ ಬಳಿಕ ಸಂಪುಟದಲ್ಲಿ ಕಾಣದ ಬದಲಾವಣೆ: ಯತ್ನಾಳ- ರೇಣುಕಾಚಾರ್ಯ ಗಂಭೀರ ಚರ್ಚೆ
ಬೆಂಗಳೂರು, ಜ.20: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಹೇವಾರಿ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಇಂದು ವಿಕಾಸಸೌಧದಲ್ಲಿ ಒಟ್ಟಿಗೆ ಕುಳಿತು ಚರ್ಚಿಸಿದರು.
ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಭಾರೀ ಬದಲಾವಣೆ ಆಗುತ್ತದೆ, ಅನೇಕ ಸಚಿವರು ಮನೆಗೆ ಹೋಗುತ್ತಾರೆ, ಹೊಸಬರಿಗೆ ಅವಕಾಶ ಸಿಗುತ್ತದೆ, ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗುತ್ತದೆ ಎಂದು ಇಬ್ಬರೂ ನಾಯಕರು ಅನೇಕ ಸಂದರ್ಭಗಳಲ್ಲಿ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದರು.
ವಿಕಾಸಸೌಧದಲ್ಲಿರುವ ರೇಣುಕಾಚಾರ್ಯ ಕಚೇರಿಯಲ್ಲಿ ಗುರುವಾರ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಇಬ್ಬರು ನಾಯಕರು ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸಿರುವುದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.

ಕೆಲವರು ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಸಚಿವರಾಗುತ್ತಲೇ ಇದ್ದಾರೆ. ಅಂತವರನ್ನು ಈಗ ಸಚಿವ ಸ್ಥಾನದಿಂದ ಕೈ ಬಿಟ್ಟು ಪಕ್ಷದ ಸಂಘಟನೆಗೆ ನಿಯೋಜಿಸಬೇಕು. ಗುಜರಾತ್ ಮಾದರೆಯಂತೆ ಮುಖ್ಯಮಂತ್ರಿ ಹೊರತುಪಡಿಸಿ ಇಡೀ ಸಂಪುಟವನ್ನೇ ಬದಲಾಯಿಸಿ ಪಕ್ಷ ನಿಷ್ಠರು ಹಾಗೂ ಹೊಸಬರಿಗೆ ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುತ್ತದೆ, ಪಕ್ಷದ ಪ್ರಮುಖರ ಗಮನಕ್ಕೆ ತರಬೇಕೆಂದು ಉಭಯ ನಾಯಕರು ಪರಸ್ಪರ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಕೆಲವು ಸಚಿವರು, ಶಾಸಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಿಲ್ಲ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕುಂಟು ನೆಪ ಹೇಳುತ್ತಿದ್ದಾರೆ. ಅಧಿಕಾರಕ್ಕಾಗಿಯೇ ಬಂದಿರುವವರನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು, ಸರ್ಕಾರಕ್ಕೂ ಮತ್ತು ಸಂಘಟನೆಗೆ ಇವರ ಕೊಡುಗೆಯೂ ಅಷ್ಟಕ್ಕಷ್ಟೇ. ಇಂತಹವರಿಗೆ ಕೊಕ್ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಬೇಕೆಂಬ ತೀರ್ಮಾನಕ್ಕೂ ಸಹ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯತ್ನಾಳ ಹೇಳಿದ್ದೇನು?
ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, "ರಾಜ್ಯದಲ್ಲಿ ಸದ್ಯ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿದ್ದು, ಮೊದಲು ಕೊರೊನಾ ಸಮರ್ಥವಾಗಿ ಎದುರಿಸಬೇಕಿದೆ. ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ಬಗ್ಗೆ ನಾನು ಏನು ಹೇಳಲು ಆಗುವುದಿಲ್ಲ'' ಎಂದು ತಿಳಿಸಿದರು.
ಸದ್ಯ ಉತ್ತರಪ್ರದೇಶ, ಪಂಜಾಬ್ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದು ಮುಗಿದ ಮೇಲೆ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲೇ ಆಗುತ್ತದೆಯೋ ಕಾದು ನೋಡೋಣ. ಆದರೆ ಒಳ್ಳೆಯ ಬೆಳವಣಿಗೆಯೇ ಆಗುತ್ತದೆ. ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತದೆ ಎಂಬುದನ್ನು ಕಾದು ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿಯೋ ಗೊತ್ತಿಲ್ಲ. ಸಚಿವ ಸಂಪುಟ ಪುನಾರಚನೆ ಇನ್ನು 15 ದಿನಗಳಲ್ಲಿ ಆದರೆ ಒಳ್ಳೆಯದು. ನಮ್ಮ ಸ್ನೇಹಿತರು ಹಾಗೂ ಆತ್ಮೀಯರು ಆಗಿರುವ ಎಂ.ಪಿ.ರೇಣುಕಾಚಾರ್ಯ ಮಂತ್ರಿಯಾಗಲಿ ಎಂದು ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು.
ಆಕಸ್ಮಿಕ ಸೌಜನ್ಯದ ಭೇಟಿ:
ಎಂ.ಪಿ. ರೇಣುಕಾಚಾರ್ಯ ಮಾತನಾಡಿ, 'ನಮ್ಮದು ಆಕಸ್ಮಿಕ ಸೌಜನ್ಯದ ಭೇಟಿ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಸದುದ್ದೇಶದಿಂದ ಮಾತುಕತೆ ನಡೆಸಿದ್ದೇವೆ' ಎಂದು ಹೇಳಿದರು.
ಸಂಪುಟ ಪುನರ್ ರಚನೆ ಕುರಿತು ಪ್ರಶ್ನಿಸಿದಾಗ, 'ಈ ಸಭೆ ಯಾರ ವಿರುದ್ಧವೂ ನಡೆಸಿಲ್ಲ, ನಮಗೆ ವೈಯಕ್ತಿಕವಾಗಿ ಯಾರ ಮೇಲೂ ಆಕ್ರೋಶವೂ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಯಾರು ಒಳ್ಳೆಯ ಕೆಲಸ ಮಾಡಿದವರೂ ಅವರನ್ನು ಮುಂದುವರೆಸುವುದು ಒಳ್ಳೆಯದು. ಆದರೆ, ಪದೇ ಪದೇ ಅಧಿಕಾರ ಪಡೆಯುವವರನ್ನು ಹಾಗೂ ಸ್ವಾರ್ಥಕೋರರನ್ನು ಕೈ ಬಿಡಬೇಕು, ನಾವು ಯಾರ ಹೆಸರನ್ನೂ ಕೂಡ ಹೇಳುವುದಿಲ್ಲ' ಎಂದು ಹೇಳಿದರು.












Click it and Unblock the Notifications