ಒಂದು ವಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಕರ್ನಾಟಕಕ್ಕೆ
ಬೆಂಗಳೂರು, ಆಗಸ್ಟ್ 8 : ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜನನ್ನು ಕರ್ನಾಟಕದ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಕರೆತರಲಿದ್ದಾರೆ. ಬನ್ನಂಜೆ ರಾಜನ ಮೇಲೆ ಕರ್ನಾಟಕದಲ್ಲಿ 44ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಆತನ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಲಾಗಿತ್ತು.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಬನ್ನಂಜೆ ರಾಜನನ್ನು ವಶಕ್ಕೆ ಪಡೆದಿರುವುದಾಗಿ ಖಚಿತ ಪಡಿಸಿದ್ದಾರೆ. ಮೊರೆಕ್ಕೊದಲ್ಲಿ ಬನ್ನಂಜೆ ರಾಜನನ್ನು 2015ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಸದ್ಯ, ಕರ್ನಾಟಕದ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಓಂ ಪ್ರಕಾಶ್ ಹೇಳಿದರು. [ಬನ್ನಂಜೆ ರಾಜಾ ಬಂಧನ]

ಬನ್ನಂಜೆ ರಾಜನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ರಾಜ್ಯದಲ್ಲಿ 44ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು. ಕೇರಳದಲ್ಲಿಯೂ ಆತನ ವಿರುದ್ಧ ಹಲವಾರು ಪ್ರಕರಣಗಳಿವೆ ಎಂದು ತಿಳಿಸಿದರು. [ಡಾನ್ ಬನ್ನಂಜೆ ರಾಜಾ ಕರ್ನಾಟಕಕ್ಕೆ?]
ಮೊರೆಕ್ಕೊದಲ್ಲಿ ಬನ್ನಂಜೆ ರಾಜಾನನ್ನು ಬಂಧಿಸಿದ ಮಾಹಿತಿ ತಿಳಿದ ನಂತರ ಕರ್ನಾಟಕದ ಪೊಲೀಸರು ಆತನನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದರು. ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಮೊರೆಕ್ಕೊ ಪೊಲೀಸರು ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅವರು ರಾಜನನ್ನು ಹಸ್ತಾಂತರಿಸಲು ಸಮ್ಮತಿ ನೀಡಿದ್ದಾರೆ ಎಂದರು.
ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬನ್ನಂಜೆ ರಾಜನನ್ನು ಮೊರೆಕ್ಕೊ ಪೊಲೀಸರು ಬಂಧಿಸಿದ್ದರು. ಭಾರತದ ವಿವಿಧ ರಾಜ್ಯಗಳಲ್ಲಿ ರಾಜನ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಬನ್ನೆಂಜೆ ರಾಜಾ ಯಾರು? : ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್ ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರ. 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.
ಮೊದಲಿಗೆ ಛೋಟಾರಾಜನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ. ಮುಂಬೈನ ಭೂಗತ ಪಾತಕಿಗಳಿಂದ ಪಳಗಿದ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಡಾನ್.












Click it and Unblock the Notifications