Bank Strike: ಸೋಮವಾರ ಬ್ಯಾಂಕಿಗೆ ಹೋಗುವ ಜನರ ಗಮನಕ್ಕೆ
ಬೆಂಗಳೂರು, ಮಾರ್ಚ್ 23: ಶನಿವಾರ, ಭಾನುವಾರದ ರಜೆ ಬಳಿಕ ಸೋಮವಾರ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳುವ ಜನರಿಗೆ ಬ್ಯಾಂಕ್ ಮುಷ್ಕರದ ಆತಂಕ ಎದುರಾಗಿತ್ತು. ಆದರೆ ಈಗ ಜನರು ನಿರಾಳರಾಗಿದ್ದು ವಾರದ ಮೊದಲ ಎರಡು ದಿನಗಳ ಕಾಲ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ. ಆದ್ದರಿಂದ ಜನರು ವಿವಿಧ ಕೆಲಸಕ್ಕೆ ಸೋಮವಾರ ಬ್ಯಾಂಕಿಗೆ ಭೇಟಿ ನೀಡಬಹುದು.
ಮಾರ್ಚ್ 24ರ ಸೋಮವಾರ ಮತ್ತು ಮಾರ್ಚ್ 25ರ ಮಂಗಳವಾರದಂದು ಕರೆ ನೀಡಲಾಗಿದ್ದ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ಬ್ಯಾಂಕ್ ಯೂನಿಯನ್‌ಗಳು ಮುಂದೂಡಿವೆ. ಆದ್ದರಿಂದ ಸೋಮವಾರ ಮತ್ತು ಮಂಗಳವಾರ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ. ಜನರಿಗೂ ಅನುಕೂಲವಾಗಿದೆ.

ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಭರವಸೆ ದೊರೆತ ಹಿನ್ನೆಲೆಯಲ್ಲಿ ಮಾರ್ಚ್ 24 ಮತ್ತು 25ರಂದು ಕರೆ ನೀಡಲಾಗಿದ್ದ ಬ್ಯಾಂಕ್ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಬ್ಯಾಂಕ್ ಯೂನಿಯನ್‌ಗಳು ಏಪ್ರಿಲ್ 24ರಂದು ಮುಂದಿನ ಸಭೆಯನ್ನು ಕರೆದಿದ್ದು, ಆಗ ಬೇಡಿಕೆ ಈಡೇರಿಕೆ ಮಾಡದಿದ್ದರೆ ಮುಂದಿನ ಹೋರಾಟದ ಕುರಿತು ತೀರ್ಮಾನ ಮಾಡಲಿವೆ.
ಯಾವ-ಯಾವ ಬೇಡಿಕೆಗಳು: ಬ್ಯಾಂಕ್ ಯೂನಿಯನ್‌ಗಳು 5 ದಿನದ ಬ್ಯಾಂಕ್ ಕೆಲಸ, ನೇಮಕಾತಿ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದವು. ಆದ್ದರಿಂದ ದೇಶಾದ್ಯಂತ ಮಾರ್ಚ್ 24, 25ರಂದು ಬ್ಯಾಂಕ್ ಚಟುವಟಿಕೆ ಸ್ಥಗಿತಗೊಳ್ಳುವ ಆತಂಕ ಎದುರಾಗಿತ್ತು.
ಕೇಂದ್ರ ವಿತ್ತ ಸಚಿವಾಲಯ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಬ್ಯಾಂಕ್ ಯೂನಿಯನ್‌ಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಬ್ಯಾಂಕ್ ಮುಷ್ಕರವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.
9 ಬ್ಯಾಂಕ್ ನೌಕರರ ಸಂಘಗಳ ಒಕ್ಕೂವಾದ ಬ್ಯಾಂಕ್ ನೌಕರರ ಒಕ್ಕೂಟಗಳ ಸಂಯುಕ್ತ ವೇದಿಕೆ 2 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿತ್ತು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಈ ಒಕ್ಕೂಟದಲ್ಲಿ ಸದಸ್ಯರಾಗಿದ್ದು, ಬ್ಯಾಂಕ್ ಮುಷ್ಕರದ ಕಾರಣ ಬ್ಯಾಂಕ್ ಸೇವೆ ಸ್ಥಗಿತಗೊಳಿಸಿ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿತ್ತು.
ಒಕ್ಕೂಟದ ಪದಾಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳು, ಬ್ಯಾಂಕ್ ಆಡಳಿತ ಮಂಡಳಿಗಳ ಸಮಾಲೋಚನಾ ಸಭೆಯಲ್ಲಿ ಮಾರ್ಚ್ 24, 25ರ ಮುಷ್ಕರನ್ನು ಮುಂದೂಡಿಕೆ ಮಾಡಲು ಸಲಹೆ ನೀಡಲಾಗಿತ್ತು. ಬೇಡಿಕೆಗಳ ಕುರಿತು ವಿವರವಾಗಿ ಚರ್ಚಿಸೋಣ ಮುಷ್ಕರ ನಡೆಸುವುದು ಬೇಡ ಎಂದು ಮನವಿ ಮಾಡಲಾಗಿತ್ತು.
ಮುಖ್ಯ ಕಾರ್ಮಿಕ ಆಯುಕ್ತರು ಏಪ್ರಿಲ್‌ನಲ್ಲಿ ಬ್ಯಾಂಕ್ ಒಕ್ಕೂಟದ ನೌಕರರ ಜೊತೆ ಸಭೆಯನ್ನು ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಒಕ್ಕೂಟದ ನೌಕರರ ಬೇಡಿಕೆಗಳ ಕುರಿತು ವರದಿ ಸಲ್ಲಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಷ್ಕರ ಮುಂದೂಡಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಮಾರ್ಚ್ ತಿಂಗಳ ಅಂತ್ಯ ಆರ್ಥಿಕ ವರ್ಷದ ಅಂತ್ಯದ ಅವಧಿಯಾಗಿದೆ. ಬ್ಯಾಂಕುಗಳಲ್ಲಿ ಸಾಕಷ್ಟು ಕೆಲಸಗಳು ಇರುತ್ತವೆ. ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ. ಆದರೆ ಇಂತಹ ಸಮಯದಲ್ಲಿಯೇ ಮುಷ್ಕರವನ್ನು ಕರೆದಿದ್ದು, ಬ್ಯಾಂಕ್ ಸಿಬ್ಬಂದಿಗಳು, ಜನರಿಗೆ ಸಂಕಷ್ಟ ತಂದಿತ್ತು.












Click it and Unblock the Notifications