ಭರಚುಕ್ಕಿ: ಟೆಕ್ಕಿ ನಂಜರಾಜು ನೀರುಪಾಲು
ಚಾಮರಾಜನಗರ, ನ.5: ಕೊಳ್ಳೆಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೀಕ್ಷಣೆಗೆ ಹೋಗಿದ್ದ ಬೆಂಗಳೂರಿನ ಯುವಕನೊಬ್ಬ ಈಜಲು ಹೋಗಿ ಸೋಮವಾರ ನೀರು ಪಾಲಾಗಿದ್ದಾನೆ.
ಟೆಕ್ಕಿ ನಂಜರಾಜು (25) ಮೃತಪಟ್ಟ ಯುವಕ. ಆತನ ಶವ ಇನ್ನೂ ಪತ್ತೆಯಾಗಿಲ್ಲ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳ್ಳಹಳ್ಳಿಯ ನಂಜರಾಜು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ.

ದೀಪಾವಳಿ ರಜಾ ಮೋಜಿನಲ್ಲಿ 9 ಮಂದಿ ಗೆಳೆಯರೊಂದಿಗೆ ನಂಜರಾಜು ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದರು. ಭರಚುಕ್ಕಿ ಜಲಪಾತ ವೀಕ್ಷಣೆಯ ಬಳಿಕ ಅಲ್ಲೇ ಒಂಬತ್ತೂ ಮಂದಿ ನೀರಿಗೆ ಬಿದ್ದಿದ್ದಾರೆ. ಆದರೆ ನಂಜರಾಜು ಮಾತ್ರ ಮೇಲೇಳಲಿಲ್ಲ.
ಗೋಕಾಕ ಫಾಲ್ಸ್ ನಲ್ಲಿಯೂ ಇಬ್ಬರ ದುರ್ಮರಣ:
ಗೋಕಾಕ ಜಲಪಾತದಲ್ಲಿ ನೀರಿನೊಂದಿಗೆ ಚೆಲ್ಲಾಟವಾಡುತ್ತಿದ್ದ ಇಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಮೃತರನ್ನು ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ದಾದವಾಡ ಗ್ರಾಮದ ಅನಿಲ ಮಲ್ಲೇಶಿ ಕೋಡ್ಲಿ (10) ಹಾಗೂ ಆತನ ಚಿಕ್ಕಪ್ಪ ಗುಂಡಪ್ಪ ನಿಂಗಪ್ಪ ಕೋಡ್ಲಿ (28) ಎಂದು ಗುರುತಿಸಲಾಗಿದೆ.
ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬಂದಿದ್ದ 30 ಜನರ ತಂಡ ಸೋಮವಾರ ಸಂಜೆ 5.30ರ ಸುಮಾರಿಗೆ ಗೋಕಾಕ ಫಾಲ್ಸ್ ನೋಡುತ್ತಿದ್ದ ಸಂದರ್ಭದಲ್ಲಿ ಧಬಧಬೆ ಸಮೀಪ ಹುಡುಗಾಟಿಕೆ ಮಾಡುತ್ತಿದ್ದ ಅನಿಲ ಕಾಲು ಜಾರಿ ನೀರು ಪಾಲಾದ. ಅವನನ್ನು ಪಾರು ಮಾಡಲು ಮುಂದಾದ ಗುಂಡಪ್ಪನೂ ನೀರು ಪಾಲಾದ. ಈ ಘಟನೆ ಪ್ರವಾಸಿ ತಂಡದ ಸದಸ್ಯರ ಎದುರೇ ಸಂಭವಿಸಿದರೂ ಇಬ್ಬರನ್ನೂ ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications