ಮಂಚನಬೆಲೆ: ತೆಪ್ಪ ಮಗುಚಿ ನಾಲ್ವರ ಬಾಳೂ ಮುಳುಗಿತು
ಬೆಂಗಳೂರು, ಅ.15: ವಿಜಯದಶಮಿಯಂದು ರಾಜಧಾನಿಯ ಹೊರ ಭಾಗದಲ್ಲಿ ದಾರುಣ ಘಟನೆಯೊಂದು ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ವ್ಯಾಪ್ತಿಯ ತಾವರೆಕೆರೆ ಸಮೀಪದ ಮಂಚನಬೆಲೆ ಡ್ಯಾಮ್ ನಲ್ಲಿ ತೆಪ್ಪ ಮಗುಚಿ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ.
ರಜಾ ಸಮಯವಾದ್ದರಿಂದ ಜಲವಿಹಾರಕ್ಕೆಂದು ಒಟ್ಟು ಐದು ಮಂದಿ ಮಂಚನಬೆಲೆ ಜಲಾಶಯದ ನೀರಿಗೆ ಇಳಿದಿದ್ದಾರೆ. ಅದೂ ಮೀನು ಹಿಡಿಯುವ ತೆಪ್ಪದಲ್ಲಿ 5 ಮಂದಿ ಕುಳಿತು ನೀರಿನಲ್ಲಿ ಸಾಗಿದ್ದಾರೆ. ಸ್ವಲ್ಪ ದೂರ ಸಾಗುತ್ತಿದ್ದಂತೆ ತೆಪ್ಪ ನಿಯಂತ್ರಣ ತಪ್ಪಿದೆ.

ಆ ಐದು ಮಂದಿ ಗೆಳೆಯರ ಪೈಕಿ ಒಬ್ಬ ದಿನೇಶ್ ಬಚಾವಾಗಿದ್ದಾನೆ. ಆತ ನೀರಿಗೆ ಇಳಿಯದೇ ದಡದಲ್ಲೇ ಉಳಿದಿದ್ದ. ಆದರೆ ಆತನ ಕಣ್ಣೇದುರೇ ಉಳಿದ ನಾಲ್ವರೂ ಸಾವನ್ನಪ್ಪಿದ್ದಾರೆ. ಮೃತರೆಲ್ಲಾ 20-24 ವರ್ಷದ ಪ್ರಾಯದವರು.
ಶ್ರೀನಗರದ ಮೋಹನ್ (23), ಮೂಡಲಪಾಳ್ಯದ ಚರಣ್(20), ಗಿರಿನಗರದ ರಘು (22), ಬನಶಂಕರಿಯ ಅಶೋಕ್ (22) ಮೃತಪಟ್ಟ ದುರ್ದೈವಿಗಳು. ಇವರೆಲ್ಲ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನರಗನಹಳ್ಳಿಯವರು. ತಾವರೆಕೆರೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಶವಗಳ ಶೋಧಕ್ಕಾಗಿ ಮುಳುಗುತಜ್ಞರು ನೀರಿಗೆ ಇಳಿದಿದ್ದಾರೆ.
Manchanabele dam - ದುರಂತಗಳ ಕಥೆ ವ್ಯಥೆ: ಮಂಚನಬೆಲೆ ಜಲಾಶಯವನ್ನು ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನಿಂದ ಸುಮಾರು 40 ಕಿಮೀ ದೂರದಲ್ಲಿದೆ. ಇದು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಮಂಚನಬೆಲೆ ಜಲಾಶಯ ಕಾವೇರಿ ನೀರಾವರಿ ನಿಗಮಕ್ಕೆ ಒಳಪಟ್ಟಿದೆ. ಈ ಜಲಾಶಯದಿಂದಲೇ ಮಾಗಡಿ ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು 60 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಮಾಗಡಿ ತಾಲೂಕಿನ ಸಾವನದುರ್ಗದ ತಪ್ಪಲ್ಲಿನ ಸುಂದರ ರಮ್ಯ ತಾಣದಲ್ಲಿ ಮಂಚನಬೆಲೆ ಜಲಾಶಯವಿದೆ. ಬೆಂಗಳೂರು ಸುತ್ತಮುತ್ತಲ ಕಾಲೇಜು ಯುವಕ, ಯುವತಿಯರು, ಪ್ರೇಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೋಜು,ಮಸ್ತಿ ಎಂದು ಇಲ್ಲಿಗೆ ಬರುತ್ತಾರೆ. ಮೋಜು ಮಸ್ತಿ ಮಾಡಿ ಕುಡಿದು, ಕುಪ್ಪಳ್ಳಿಸುವುದು ಸಾಲದೆಂಬಂತೆ ಈಜಲು ಜಲಾಶಯದ ಹಿನ್ನೀರಿಗಿಳಿದು ಈಜಲಾಗದೆ ಅಪಾಯಕ್ಕೆ ಸಿಲುಕಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ನಿಷೇದಿತ ಸ್ಥಳ: ಜಲಾಶಯದ ವೀಕ್ಷಣೆಗೆಂದು ಬರುವವರಿಗೆ ಜಲಾಶಯ ವೀಕ್ಷಣೆ ಪ್ರವೇಶ ನಿಷೇಧಿಸಿದೆ. ಆದರೂ ಪಿಕ್ನಿಕ್ ಎಂದು ಇಲ್ಲಿಗೆ ಬರುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ತಂಡೋಪತಂಡವಾಗಿ ಬರುತ್ತಾರೆ. ಜಲಾಶಯದ ಹಿನ್ನೀರಿನ ಅಂಗಳದಲ್ಲಿ ಕುಳಿತು ಮೋಜು ಮಸ್ತಿ ಮಾಡುವುದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಹರಸಾಹಸ ವ್ಯರ್ಥವಾಗಿದೆ. ಇಲ್ಲಿ ಕಾವಲುಗಾರರಿದ್ದಾರೆ, ಇದ್ದರೂ ಪ್ರಯೋಜವಿಲ್ಲ.
ಮದ್ಯದ ಖಾಲಿ ಬಾಟೆಲ್, ಪ್ಲಾಸ್ಟಿಕ್ ಕಾಗದ, ಇತರೆ ತ್ಯಾಜ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಬಿಟ್ಟು ಹೋದ ತ್ಯಾಜಗಳು ಜಲಾಶಯದ ನೀರಿಗೆ ಸೇರಿ ನೀರು ಕಲುಷಿತವಾಗುತ್ತಿದೆ. ಸಂಬಂಧಪಟ್ಟ ಜಲಾಶಯದ ಅಧಿಕಾರಿಗಳು, ಪೊಲೀಸರು ಒಟ್ಟಾಗಿ ಸೇರಿ ಜಲಾಶಯದ ಸುತ್ತ ರಕ್ಷಣೆ ಮಾಡದಿದ್ದರೆ, ಮೋಜ ಮಸ್ತಿಗೆ ಕಡಿವಾಣ ಹಾಕದಿದ್ದರೆ ಈ ಜಲಾಶಯ ಪ್ರವಾಸಿ ತಾಣವಾಗದೆ ಸಾವಿನ ತಾಣವಾಗುವುದರಲ್ಲಿ ಸಂಶಯವಿಲ್ಲ. ಚಿತ್ರ ಕೃಪೆ: sandflashphotography












Click it and Unblock the Notifications