ಗಣರಾಜ್ಯೋತ್ಸವಕ್ಕೆ ಮುನ್ನ ಲಾಲ್‌ಬಾಗ್‌ನಲ್ಲಿ ಕಹಿ ಘಟನೆ
ಬೆಂಗಳೂರು, ಜ.6-ಬೆಂಗಳೂರಿನ ಹೊರಭಾಗದಲ್ಲಿರುವ ರಕ್ಷಣಾ ಪಡೆಯ ಯೋಧರಿಗೆ ವೀಕೆಂಡ್ ಬಂತೆಂದರೆ ಸಾಕು ರಾಜಧಾನಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಸೌಂದರ್ಯವನ್ನು ಸವಿಯುವಾಸೆ. ಆದರೆ ಹೊರರಾಜ್ಯಗಳಿಂದ ಬಂದ ಈ ಯೋಧರು ತೆಪ್ಪಗೆ ವಾಪಸಾಗೋಣ ಎಂಬೋ ಜಾಯಮಾನದವರಲ್ಲ. ಏನಾದರೊಂದು ಕಿರಿಕಿರಿ ಮಾಡಿಯೇ ಅವರು ವಾಪಸಾಗೋದು. ಕೆಲವೊಂದು ವರದಿಯಾಗುತ್ತವೆ. ಹಲವು ಬಾರಿ ನಮ್ಮ ಜನ ಮೌನವಾಗಿ ಸಹಿಸಿಕೊಂಡು ಹಾಳಾಗಿ ಹೋಗ್ಲಿ ಅಂತ ಸುಮ್ಮನಾಗುತ್ತಾರೆ.
ಆದರೆ ನಿನ್ನೆ ಭಾನುವಾರ ಗಾರ್ಡನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಗಾರ್ಡನ್ ಉದ್ಯಾವನದಲ್ಲಿ ನಡೆದಿದ್ದು ನಿಜಕ್ಕೂ ಅಕ್ಷಮ್ಯ. ಇನ್ನೇನು ಗಣರಾಜ್ಯೋತ್ಸವಕ್ಕೆ ನವವಧುವಿನಂತೆ ಲಾಲ್ ಬಾಗ್ ಸಿಂಗಾರಗೊಳ್ಳುತ್ತಿರುವ ಹೊತ್ತಿನಲ್ಲಿ ಕಹಿ ಘಟನೆಯೊಂದು ನಡೆದಿದೆ.

ಏನಪ್ಪಾ ಅಂದರೆ ಸುಮಾರು 25-30 ಮಂದಿ ಯುವ ಯೋಧರು ನಿನ್ನೆ ಭಾನುವಾರ ಸಂಜೆ ಸೀದಾ ಲಾಲ್‌ಬಾಗ್‌ಗೆ ನುಗ್ಗಿದ್ದಾರೆ. ಆದರೆ ಅವರೆಲ್ಲಾ ಅದಾಗಲೇ ಹೊಟ್ಟೆಗೆ ಮದ್ಯವಿಳಿಸಿ, ತಲೆಗೆ ಅಮಲನ್ನೇರಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ವೀಕೆಂಡ್ ಕಳೆಯೋಣವೆಂದು ನಾಗರಿಕರು ಸಹ ಲಾಲ್‌ಬಾಗ್‌ನಲ್ಲಿ ಎಂದಿನಂತೆ ಕಾಣಿಸಿಕೊಂಡಿದ್ದಾರೆ. ಯೋಧರ ಕಣ್ಣಿಗೆ ಅವರು ಹೇಗ್ಹೋಗೋ ಕಾಣಿಸಿ, ಯೋಧರು ತಮ್ಮ ಅನಾಗರಿಕ ವರ್ತನೆ ತೋರಿದ್ದಾರೆ.
ಲಾಲ್‌ಬಾಗ್‌ನಲ್ಲಿ ಎದುರಿಗೆ ಸಿಕ್ಕಿದ ಯುವತಿಯರನ್ನು ಚುಡಾಯಿಸುತ್ತಾ, ತಮ್ಮ ಎಲ್ಲೆ ಮೀರಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅನುಚಿತ ವರ್ತನೆ ನಿಲ್ಲಿಸಿ ಎಂದು ಹೇಳಿದ್ದಾರೆ. ಅದಕ್ಕೆ ಬಿಎಸ್ಎಫ್ ಗುಂಪಿನಲ್ಲಿದ್ದವನೊಬ್ಬ 'ನೀನ್ಯಾರು ಕೇಳಲು ಸುಮ್ಮನೆ ಹೋಗು' ಎಂದು ಜೋರು ಮಾಡಿದ್ದಾನೆ.
ಆದರೆ ಭದ್ರತಾ ಸಿಬ್ಬಂದಿಗೆ ಮದ್ಯದ ವಾಸನೆ ಜತೆಗೆ ಅಪಾಯದ ವಾಸನೆಯೂ ಮೂಗಿಗೆ ಬಡಿದಿದೆ. ಇವರನ್ನು ಹೀಗೇ ಬಿಟ್ಟರೆ ನಾಗರೀಕರಿಗೆ ಇದೊಂದು ದುಃಸ್ವಪ್ನವಾದೀತು ಎಂದು ಅರಿತು ಲಾಲ್‌ಬಾಗ್‌ನಲ್ಲಿ ಗಸ್ತಿನಲ್ಲಿದ್ದ ಸಿದ್ದಾಪುರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಸುರೇಶ್ ಹಾಗೂ ಅಣವೀರ ಎಂಬುವರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯರೊಂದಿಗೆ ಅನುಚಿತ ವರ್ತನೆ ಮಾಡಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಪೊಲೀಸರ ಮಾತಿಗೂ ಕ್ಯಾರೆ ಎನ್ನದ ಬಿಎಸ್‌ಎಫ್ ಸಿಬ್ಬಂದಿ ದುಂಡಾವರ್ತನೆ ಮಂದುವರಿಸಿದ್ದಾರೆ. ಆಗ ಪೊಲೀಸರ ಜತೆಗೆ ಪ್ರವಾಸಿಗರೂ ಸಹ ಅನುಚಿತ ವರ್ತನೆ ಖಂಡಿಸಿ, ಬುದ್ಧಿವಾದ ಹೇಳಿದ್ದಾರೆ. ಕುಪಿತಗೊಂಡ ಬಿಎಸ್‌ಎಫ್ ಸಿಬ್ಬಂದಿ ಕಾನ್ಸ್‌ಟೇಬಲ್ ಗಳಾದ ಸುರೇಶ್, ಅಣವೀರ, ಭದ್ರತಾ ಸಿಬ್ಬಂದಿ ಸಮದ್ ಹಾಗೂ ವಾಯು ವಿಹಾರಿಗಳಿಗೆ ಥಳಿಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಾರ್ವಜನಿಕರು, ಪೊಲೀಸರ ಮೇಲೆ ದಾಳಿ ನಡೆಸಿದ ಯೋಧರ ಪುಂಡಾಟ ನಿಯಂತ್ರಿಸಲು ಪೊಲೀಸ್ ತುಕಡಿಯನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಲಾಲ್‌ಬಾಗ್ ಬಳಿ ಬಂದು ದುರ್ವರ್ತನೆ ತೋರಿದ ಕೆಲ ಬಿಎಸ್‌ಎಫ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಸುರೇಶ, ಅಣವೀರ, ಸಮದ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ರೇವಣ್ಣ ಅವರು ' ಘಟನೆಯಲ್ಲಿ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ ಸಮದ್ ದೂರು ನೀಡಿದ್ದಾರೆ. ಹಲ್ಲೆ ನಡೆಸಿದ ಕೆಲ ಯೋಧರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಯೋಧರ ವಿರುದ್ಧ ಪೊಲೀಸರ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕರ ಮೇಲೆ ಹಲ್ಲೆ, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ' ಎಂಸು ತಿಳಿಸಿದ್ದಾರೆ.












Click it and Unblock the Notifications