ಬನವಾಸಿಯ ಸಮಗ್ರ ಅಭಿವೃದ್ಧಿ, ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣ: ಸರ್ಕಾರ
ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಪ್ರಮುಖ ಯಾತ್ರಾ ಸ್ಥಳವಾಗಲಿದೆ. ಜೊತೆಗೆ ಪುರಾತನ ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣಗೊಳ್ಳಿದೆ.
ಉತ್ತರ ಕನ್ನಡ , ಫೆಬ್ರವರಿ 28: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಸ್ತರಿಸಿದು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಸಮಗ್ರ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗುವ ಜೊತೆಗೆ ರಾಜ್ಯ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆ ನೀಡುವ ಮುನ್ಸೂಚನೆ ಕಾಣುತ್ತಿದೆ.
ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಯಾತ್ರಾ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ತಿಳಿಸಿದ್ದಾರೆ.

ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಅದ್ಧೂರಿ 'ಕದಂಬೋತ್ಸವ-2023' ಅನ್ನು ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಲೇ ಇವೆ. ಈ ಭಾಗದಲ್ಲಿ ನೀರಾವರಿಗೆ ಕೊರತೆಯಾಗದಂತೆ ಬನವಾಸಿ ಏತ ನೀರಾವರಿ ಯೋಜನೆಯ ಮೂಲಕ, 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದೇವಾಲಯಗಳ ವಿಶೇಷ ಕಾರಿಡಾರ್
ಕರ್ನಾಟಕದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯವನ್ನಾಳಿದ ಶ್ರೇಷ್ಠ ಆಡಳಿತಗಾರರ ಕದಂಬರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರ ಸಾಮ್ರಾಜ್ಯದ ಗತ ವೈಭವ ಪರಿಚಯಿಸುವ ಯೋಜನೆಗೆ ವಿಶೇಷ ಅನುದಾನ ಹಂಚಿಕೆ ಮಾಡಲಾಗಿದೆ. ಹಿಂದಿನ ಕಾಲದ ಐತಿಹಾಸಿಕ ಮಹತ್ವವುಳ್ಳ ಪುರಾತನ ದೇವಾಲಯಗಳ ವಿಶೇಷವಾದ ಕಾರಿಡಾರ್ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗುವುದು. ಆದಿಕವಿ ಪಂಪ ಕವಿಯ ಹುಟ್ಟೂರು, ಅಣ್ಣಿಗೇರಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಅವರು ವಿವರಿಸಿದರು.

ಬನವಾಸಿ: ತಾಯಿ ಭಾಷೆಗೆ ಮುನ್ನುಡಿ
ಕದಂಬರು ಇಲ್ಲದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ. ಪರಕೀಯರ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಮಯೂರ ವರ್ಮ ಕದಂಬರ ಸಾಮ್ರಾಜ್ಯವನ್ನು ಸ್ಥಾಪಿಸಿದವನು. ಬನವಾಸಿಯನ್ನು ತನ್ನ ಸಾಮ್ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡಿದ್ದರು. ಈಗಿನ ಬನವಾಸಿಯು ಅಂದು ಕನ್ನಡ ನಾಡಿನ ಪ್ರಥಮ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಕನ್ನಡ ಆದಿಕವಿ ಪಂಪ ಅವರು, ಬನವಾಸಿಯ ನಾಡಿನಲ್ಲಿ ಸಾಹಿತ್ಯ ರಚಿಸುವ ಮೂಲಕ ತಾಯಿ ಭಾಷೆ ಕನ್ನಡಕ್ಕೆ ಮುನ್ನುಡಿ ಬರೆದರು ಎಂದರು.
ಉತ್ತರ ಕನ್ನಡ ಜಿಲ್ಲೆಯ ಈ ಬನವಾಸಿ ಪಟ್ಟಣದಲ್ಲಿ ಅಲ್ಲಮಪ್ರಭುಗಳ ಶ್ರೀಮಠ ಇದೆ. ಅಲ್ಲಮಪ್ರಭುಗಳ ವಿಚಾರಧಾರೆಗಳು ನಮಗೆಲ್ಲ ಮಾರ್ಗದರ್ಶಿ ಆಗಿವೆ. ಮಧುಕೇಶ್ವರ ದೇವಸ್ಥಾನ ಕದಂಬರ ರಾಜ ವೈಭವ, ಶಿಲ್ಪಕಲೆಯನ್ನು ಬಿಂಬಿಸುವ ಐತಿಹಾಸಿಕ ಪುರಾತನ ದೇವಸ್ಥಾನವಾಗಿದೆ. ಗತವೈಭವ ಹಾಗೂ ಫಲವತ್ತಾದ ಭೂಮಿ ಹೊಂದಿರುವ ಈ ಬನವಾಸಿ ಕೃಷಿಯ ನಾಡು ಹೌದಾಗಿದೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
'ಕದಂಬೋತ್ಸವ-2023' ದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ್ ಹೆಬ್ಬಾರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications