ತಿಮ್ಮಣ್ಣ ರಕ್ಷಿಸಲು ಬಂದ ರೋಬೋ ತಜ್ಞ ಮಣಿಕಂಠನ್
ಬಾಗಲಕೋಟೆ, ಆ.5 : 'ಬದುಕಿ ಬಾ ತಿಮ್ಮಣ್ಣ' ಇದು ಸೂಳೀಕೇರಿ ಮತ್ತು ರಾಜ್ಯದ ಜನರ ಒಂದು ಸಾಲಿನ ಪ್ರಾರ್ಥನೆ. ಭಾನುವಾರ ಮಧ್ಯಾಹ್ನ ಬಾದಾಮಿ ತಾಲೂಕಿನ ಸೂಳಿಕೇರಿ ಎಂಬಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆ ಅವ್ಯಾಹತವಾಗಿ ಸಾಗಿದೆ. ಈ ಹರಸಾಹಸಕ್ಕೆ ಫಲ ಸಿಗಲಿ ಎನ್ನುವ ಹಾರೈಕೆ ನಮ್ಮದು. ಮಗು ಜೀವ ಉಳಿಸುವ ಪ್ರಯತ್ನದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಸಮಯ 6 ಗಂಟೆ : ಸೂಳಿಕೇರಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಮಗು ಬಿದ್ದ ಹಿನ್ನಲೆಯಲ್ಲಿ ಸೂಳಿಕೇರೆ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೌಕತ್ ಅಲಿ ಮುರ್ನಾಳ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕುರುಬಗಟ್ಟಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇಟ್ಟು ಅಮಾನತ್ತಿನಲ್ಲಿಡಲು ಆದೇಶಿಸಲಾಗಿದೆ.
ಸಮಯ 4 ಗಂಟೆ : ಸೂಳೀಕೇರಿಗೆ ರೋಬೋ ತಜ್ಞ ಮಣಿಕಂಠನ್ ನೇತೃತ್ವದ ತಂಡ ಆಗಮನ

ಸಮಯ 3 ಗಂಟೆ : ತಿಮ್ಮಣ್ಣನ ಮೇಲೆ ಬಿದ್ದಿರುವ ಮಣ್ಣನ್ನು ವಾಕ್ಯೂಮ್ ಕ್ಲೀನರ್ ಮೂಲಕ ತೆಗೆಯುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಈ ಕಾರ್ಯಾಚರಣೆ ಮುಗಿದ ಬಳಿಕ ಕ್ಯಾಮರಾ ಇಳಿಬಿಟ್ಟು ಬಾಲಕನ ಸ್ಥಿತಿ-ಗತಿ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.
ಸಮಯ 2 ಗಂಟೆ : ಮುಂದುವರೆದ ರಕ್ಷಣಾ ಕಾರ್ಯ ಬಾಲಕನ ಸ್ಥಿತಿ-ಗತಿ ಬಗ್ಗೆ ಯಾವುದೇ ಆಶ್ವಾಸನೆ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸತತ 48ಗಂಟೆಗಳಿಂದ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ತಿಮ್ಮಣ್ಣ ಬಾವಿಗೆ ಬಿದ್ದಿದ್ದ.
ಸಮಯ 1 ಗಂಟೆ : ಕೊಳವೆ ಬಾವಿಗೆ ಬಿದ್ದ ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸಿ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ವಿಶೇಷ ಪೂಜೆ ನಡೆಯಿತು. ರಂಭಾಪುರಿ ಶ್ರೀಗಳು ಅಷ್ಟದೇವತೆ ವೀರಭದ್ರೇಶ್ವರ ಹಾಗು ರೇಣುಕಾಚಾರ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಮಯ 12.30 : ತಿಮ್ಮಣ್ಣನ ತಂದೆ ಹನುಮಂತ ಹಟ್ಟಿ ಅಸ್ವಸ್ಥರಾಗಿದ್ದಾರೆ. ಎರಡು ದಿನಗಳಿಂದ ಸರಿಯಾಗಿ ಊಟ-ನಿದ್ದೆ ಮಾಡಲಿಲ್ಲ ಆದ್ದರಿಂದ ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಸಮಯ 12.15 : ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಸಂಸದ ಪಿ.ಸಿ.ಗದ್ದಿಗೌಡರ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಗ್ರಾಮದ ಮುಖಂಡರು ತಿಮ್ಮಣ್ಣನ ಸಂಬಂಧಿಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಿಲ್ಲಿಸುವಂತೆ ಬಾಲಕನ ತಂದೆ ಮನವಿ ಮಾಡಿದ್ದರು.
ಸಮಯ 12 ಗಂಟೆ : ಹನುಮಂತ ಹಟ್ಟಿ ಅವರು ಮಾಡಿರುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಯಾವುದೇ ಕಾರಣಕ್ಕೂ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಸಮಯ 11.30 : ತಿಮ್ಮಣ್ಣನ ರಕ್ಷಣಾ ಕಾರ್ಯ ನಿಲ್ಲಿಸುವಂತೆ ಅವರ ತಂದೆ ಹನುಂತ ಹಟ್ಟಿ ಮಾಡಿರುವ ಮನವಿ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಮಯ 10.30 : ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ ಎಂದು ತಿಮ್ಮಣ್ಣ ತಂದೆ ಹನುಮಂತ ಹಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. "ಬೋರ್ ವೆಲ್ ಕೊರೆಸಲು 12 ಲಕ್ಷ ರೂ. ಸಾಲ ಮಾಡಿದ್ದೇನೆ. ಈಗ ನನ್ನ ಮಗ ಬದುಕಿಲ್ಲ ಜೊತೆಗೆ ನಾನು ಬೆಳೆದಿದ್ದ ಬೆಳೆಯೂ ಕಾರ್ಯಾಚರಣೆಯಿಂದ ಹಾಳಾಗಿದೆ. ಆದ್ದರಿಂದ ಕಾರ್ಯಾಚರಣೆ ನಿಲ್ಲಿಸಿ" ಎಂದು ಹನುಮಂತ ಹಟ್ಟಿ ಮನವಿ ಮಾಡಿದ್ದಾರೆ.
"ಹೊಲದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ನನ್ನ ಹೊಲ ಹಾಳಾಗಿದೆ. ನನಗೆ ಇನ್ನು ಎರಡು ಹೆಣ್ಣು ಮಕ್ಕಳಿದ್ದು ಅವರ ಭವಿಷ್ಯಕ್ಕಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿ" ಎಂದು ತಿಮ್ಮಣ್ಣನ ತಂದೆ ಮನವಿ ಮಾಡಿದ್ದಾರೆ. "ಮಗ ಜೀವಂತವಾಗಿ ನಮ್ಮ ಕೈಗೆ ಸಿಗುವುದಿಲ್ಲ. ಈಗ ಮಗನನ್ನು ಉಳಿಸಲು ನಡೆಯುತ್ತಿರುವ ಕೆಲಸದಿಂದ ಹೊಲದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದನ್ನು ಮುಚ್ಚಲು ನಾನು ಪುನಃ ಸಾಲ ಮಾಡಬೇಕು" ಎಂದು ಹನುಮಂತಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಮಯ 10 ಗಂಟೆ : ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವೆ ಉಮಾಶ್ರೀ ಮಾಧ್ಯಮಗಳೊಂದಿಗೆ ಮಾತನಾಡಿ, ಮಗು ಸುರಕ್ಷಿತವಾಗಿ ಬದುಕಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ. ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಸಮಯ 9.30 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸೂಳಿಕೇರಿ ಗ್ರಾಮಕ್ಕೆ ಭೇಟಿ ನೀಡಿದ್ದು, ತಿಮ್ಮಣ್ಣನ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಸಮಯ 8.30 : ಮಧುರೈನಿಂದ ಆಗಮಿಸಿರುವ ಮಣಿಕಂಠನ್ ನೇತೃತ್ವದ ರೋಬೋ ತಂಡ ಬೆಂಗಳೂರಿಗೆ ಆಗಮಿಸಿದೆ. ಇಲ್ಲಿಂದ ಹೊರಡಲಿರುವ ತಂಡ ಮಧ್ಯಾಹ್ನ ಸುಮಾರು 3 ಗಂಟೆಗೆ ಬಾಗಲಕೋಟೆಗೆ ತಲುಪುವ ನಿರೀಕ್ಷೆ ಇದೆ.
ಸಮಯ 7.30 : ಮಗುವಿನ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೊಂದು ಕಡೆ ಜೆಸಿಬಿಗಳು 90 ಅಡಿ ಆಳದ ಗುಂಡಿಯನ್ನು ತೆಗೆದಿವೆ. ತಿಮ್ಮಣ್ಣನನ್ನು ತಲುಪಲು ಇನ್ನೂ 70 ಅಡಿ ಬಾಕಿ ಇದೆ. ದೇವರ ಮೇಲೆ ಭಾರ ಹಾಕಿ ಪೋಷಕರು ಮಗನಿಗಾಗಿ ಕಾದು ಕುಳಿತಿದ್ದಾರೆ. [ಸೋಮವಾರದ ಕಾರ್ಯಾಚರಣೆಯ ವಿವರ]
ಸೋಮವಾರ ರಾತ್ರಿ ಬಾಲಕನ ಮೇಲೆ ಬಿದ್ದ ಮಣ್ಣನ್ನು ವಾಕ್ಯೂಮ್ ಕ್ಲೀನರ್ ಮೂಲಕ ತೆಗೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಪೈಪ್ ಕಡಿಮೆಯಾದ ಕಾರಣ ಇಂದು ಬೆಳಗ್ಗೆ ಆ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ. ಮಧುರೈನಿಂದ ರೋಬೋ ತಂಡ ಸಹ ಸ್ಥಳಕ್ಕೆ ಆಗಮಿಸಲಿದೆ. ಈಗಾಗಲೇ ರೋಬೋ ಮೂಲಕ ಬಾಲಕ ಕೆಳಕ್ಕೆ ಜಾರದಂತೆ ಆತನ ಒಂದು ಕೈಗೆ ಹಗ್ಗವನ್ನು ಕಟ್ಟಲಾಗಿದೆ.
ಬಾಲಕನ ಕೈ ಮೇಲೆ ಬಿದ್ದಿರುವ ಮಣ್ಣನ್ನು ತೆಗೆದ ಬಳಿಕ ಇನ್ನೊಂದು ಕೈಗೆ ಹಗ್ಗವನ್ನು ಕಟ್ಟಲಾಗುತ್ತದೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವದ ವಹಿಸಿರುವ ಎನ್ ಡಿಆರ್ ಎಫ್ ಮುಖ್ಯಸ್ಥ ಬಸವರಾಜ್ ಹಿರೇಮಠ್ ಮಾಧ್ಯಮಗಳಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications