ಕಾಂಗ್ರೆಸ್ ಸೇರಿದ ಬಾಬೂರಾವ್ ಚಿಂಚನಸೂರ್ ಗೆ ಗುರುಮಠಕಲ್ ಟಿಕೆಟ್? ಕಾಂಗ್ರೆಸ್ ನಲ್ಲಿ ಶುರುವಾಯ್ತು ಬಿರುಗಾಳಿ!
ಚುನಾವಣಾ ಹೊಸ್ತಿಲಲ್ಲಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಗುರುಮಠಕಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳನ್ನು ಆತಂಕಕ್ಕೀಡು ಮಾಡಿದೆ.
ಯಾದಗಿರಿ, ಮಾರ್ಚ್ 22: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವ ಜೋರಾಗಿದ್ದು,ಈಗಾಗಲೇ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಜೊತೆಗೆ ಅನ್ಯ ಪಕ್ಷದ ನಾಯಕರಿಗೆ ಗಾಳ ಹಾಕುತ್ತಿದ್ದಾರೆ.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿದ್ದ ಬಾಬುರಾವ್ ಚಿಂಚನಸೂರ್ ಚುನಾವಣೆ ಹೊತ್ತಲಿ ಬಿಜೆಪಿಯನ್ನ ತೊರೆದು, ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಸಮ್ಮುಖ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆಯಾಗಿದ್ದಾರೆ.
ಇನ್ನೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ಕ್ಷೇತ್ರದ ಟಿಕೆಟ್ ಕೈ ಗಿಟ್ಟಿದೆ ಎನ್ನುವ ಚರ್ಚೆಗಳು ಈಗ ಮುನ್ನೆಲೆಗೆ ಬಂದಿದ್ದು, ಚಿಂಚನಸೂರ ಅವರಿಗೆ ಗುರಮಠಕಲ್ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎನ್ನುವ ಚರ್ಚೆಗಳು ಹರಿದಾಡುತ್ತಿವೆ.

ಕಾಂಗ್ರೆಸ್ ಪಕ್ಷದ ಕುರಿತು ಸಾಕಷ್ಟು ಬಾರಿ ವಾಗ್ದಾಳಿ ನಡೆಸಿದ್ದಾರೆ ಹಾಗೂ ನಮ್ಮ ಪಕ್ಷದ ನಾಯಕರ ಸೋಲಿಗೂ ಕಾರಣರಾಗಿದ್ದಾರೆ ಎಂದು ಬಾಬುರಾವ್ ಚಿಂಚನಸೂರ್ ವಿರುದ್ದ ಕಾಂಗ್ರೆಸ್ ನ ಸ್ಥಳೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಬುರಾವ್ ಚಿಂಚನಸೂರ್ ಗೆ ನೀಡುವ ಕುರಿತು ಪಕ್ಷದಲ್ಲಿ ಬಿರುಗಾಳಿ ಉಂಟು ಮಾಡಿದೆ.
ಈಗಾಗಲೇ ಕೆಪಿಸಿಸಿ ನೀಡಿದ ಮಾರ್ಗಸೂಚಿಯಂತೆ ಗುರುಮಠಕಲ್ ಕ್ಷೇತ್ರದ ಟಿಕೆಟ್‌ಗಾಗಿ ಶ್ರೇಣಿಕುಮಾರ ದೋಖಾ, ಬಸರೆಗೌಡ ಆನಪುರ, ಶರಣಪ್ಪ ಮಾನೇಗಾರ ಸಾಯಿಬಣ್ಣ ಬೋರಬಂಡ, ತಿಪ್ಪಣ್ಣ ಕಮಕನೂರ, ನಿತ್ಯಾನಂದ ಪೂಜಾರಿ, (A) ಉದಯಕುವಾರ ಹಾಗೂ ಯೋಗೇಶ ಬೆತ್ತ ಸೇರಿ ಒಟ್ಟು ಎಂಟು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಚಿಂಚನಸೂರ ಸೇರ್ಪಡೆಯ ಜೊತೆಗೆ ಟಿಕೆಟ್ ಕೂಡ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಬಾಬುರಾವ್ ಚಿಂಚನಸೂರ್ ವಿರುದ್ದ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಅರ್ಜಿ ಸಲ್ಲಿಸಿದ 8 ಜನರಲ್ಲಿ ಯಾರಾಗದರೂ ಟಿಕೆಟ್ ನೀಡಿ ಆದರೆ, ಬಾಬುರಾವ್ ಚಿಂಚನಸೂರ್ ಟಿಕೆಟ್ ನೀಡಬೇಡಿ ಎಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್ ಸೇರ್ಪಡೆ ಬಳಿಕ ಬಾಬುರಾವ್ ಚಿಂಚನಸೂರ್ ಮಾತನಾಡಿ, ನಾನು ಅವಕಾಶವಾದಿ ರಾಜಕಾರಣಿ ಅಲ್ಲ. 2023ರಲ್ಲಿ ಚಿಂಚನಸೂರ್ ಸಾಮರ್ಥ್ಯ ಏನು ಅಂತಾ ಗೊತ್ತಾಗುತ್ತದೆ. ಇಂದಿಗೆ ಬಿಜೆಪಿ ಮುಗಿದ ಅಧ್ಯಾಯ. ನಾನು ಡಿ.ಕೆ.ಶಿವಕುಮಾರ್ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ನಾನು ಡಿ.ಕೆ.ಶಿವಕುಮಾರ್ ಋಣ ತೀರಿಸಬೇಕಿದೆ. ಹೀಗಾಗಿ ಟಿಕೆಟ್ ನೀಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗುವುದು ಡೌಟ್: ಕಾಂಗ್ರೆಸ್ ಕೊಟ್ಟ ಆಫರ್ ಏನು?
ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಾಬುರಾವ್ ಚಿಂಚನಸೂರ್ ಸ್ಪರ್ಧಿಸಿದರೇ ಸೋಲು ಖಚಿತ ಎಂದು ಬಿಜೆಪಿ ಸಮೀಕ್ಷೆ ಹೇಳಿದೆ. ಈ ಸರ್ವೆಯಿಂದ 20 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲು ಖಚಿತ ಎಂದು ತಿಳಿದು ಬಂದಿದೆ.
ಇನ್ನೂ ಸರ್ವೆ ಆಧಾರಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಬಿಜೆಪಿ ಲೆಕ್ಕಾಚಾರವನ್ನ ಹಾಕಿಕೊಂಡಿದ್ದು, ಈ ಚುನಾವಣಗೆ ಇದೇ ಕಾರಣಕ್ಕೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದ್ದು, ಈ ಎಲ್ಲಾ ಬೆಳವಣೆಗೆಯಿಂದಾಗಿ ಕಾಂಗ್ರೆಸ್ ನಾಯಕರೂ ಕೊಟ್ಟ ಆಫರ್ ಬೆನ್ನಲ್ಲೇ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಿಂದ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ನಲ್ಲಿರುವ ಚಿಂಚನಸೂರ ವಿರೋಧಿ ಅಸಮಾಧಾನ ಭುಗಿಲೆದ್ದಿದೆ.












Click it and Unblock the Notifications