Just In: ವಿಧಾನ ಪರಿಷತ್ತಿಗೆ ಬಾಬುರಾವ್ ಚಿಂಚನಸೂರು ಅವಿರೋಧ ಆಯ್ಕೆ
ಬೆಂಗಳೂರು, ಆ.4: ವಿಧಾನ ಪರಿಷತ್‌ಗೆ ನಡೆದ ಒಂದು ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಹೀಗೆ ತೆರವಾದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು.
ಬಿಜೆಪಿ ಅಭ್ಯರ್ಥಿಯಾಗಿ ಚಿಂಚನಸೂರು ಆ.1ರಂದು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಗೆ ಗುರುವಾರ (ಆ.4) ಕೊನೆಯ ದಿನವಾಗಿತ್ತು. ಆದರೆ, ಬೇರೆ ಪಕ್ಷಗಳಿಂದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚಿಂಚನಸೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಲಾಗಿದೆ.

ಕಟೀಲ್ ಅಭಿನಂದನೆ:
ರಾಜ್ಯ ವಿಧಾನಪರಿಷತ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಬಾಬೂರಾವ್ ಚಿಂಚನಸೂರು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದು, ಶುಭ ಕೋರಿದ್ದಾರೆ.
ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ನಾಯಕರೂ ಆದ ಚಿಂಚನಸೂರು ಅವರು ಹಿಂದೆ ಸಚಿವರಾಗಿ ಕೆಲಸ ಮಾಡಿದ್ದರು. ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಗೌರವ ಹಾಗೂ ಜನಮನ್ನಣೆ ಪಡೆದಿದ್ದಾರೆ. ಅವರ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಇನ್ನಷ್ಟು ಪ್ರಬಲವಾಗಿ ಬೆಳೆಯಲಿದೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.












Click it and Unblock the Notifications