B Khata: ಬಿ - ಖಾತಾ ಆಸ್ತಿದಾರರಿಗೆ ತಪ್ಪದ ಸಂಕಷ್ಟ: ಮೂಲ ಖಾತಾದಲ್ಲಿ ಹೊಸ ಫಜೀತಿ!
B Khata: ಕರ್ನಾಟಕದಲ್ಲಿ ಬಿ - ಖಾತಾ ಆಸ್ತಿ ಹೊಂದಿರುವ ಆಸ್ತಿದಾರರಿಗೆ ಸಂಕಷ್ಟಗಳು ತಪ್ಪುತ್ತಿಲ್ಲ. ರಾಜ್ಯದಲ್ಲಿ ಬಿ - ಖಾತಾ ಆಸ್ತಿದಾರರಿಗೆ ಒಂದು ಬಾರಿ ಪರಿಹಾರ ಮಾರ್ಗವಾಗಿ ಕರ್ನಾಟಕ ಸರ್ಕಾರವು ದುಪ್ಪಟ್ಟು ಆಸ್ತಿ ತೆರಿಗೆ ಹಾಗೂ ಶುಲ್ಕವನ್ನು ಪಾವತಿ ಮಾಡಿಕೊಂಡು ಬಿ - ಖಾತಾ ನೀಡಿದೆ. ಆದರೆ, ಇದು ಯಾವುದಕ್ಕೂ ಉಪಯೋಗಕ್ಕೆ ಬರುತ್ತಿಲ್ಲ. ಆಸ್ತಿದಾರರು ಬಿ ಖಾತಾ ಇದ್ದರೂ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಿ ಖಾತಾದಾರರು ಇಂದಿಗೂ ಸಾಲ ಸೇರಿದಂತೆ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿ-ಖಾತೆ ಇರುವ ಆಸ್ತಿ ಖರೀದಿಸಿರುವವರಿಗೆ ಆಸ್ತಿಯ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಸೇರಿದಂತೆ ಯಾವುದೇ ಪ್ರಮುಖ ಹಾಗೂ ಕನಿಷ್ಠ ಸೌಲಭ್ಯಗಳು ಸಹ ಸಿಗುತ್ತಿಲ್ಲ. ಕರ್ನಾಟಕ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಒಂದು ಬಾರಿ ಅವಕಾಶ ನೀಡಿದೆ. ಈ ಮೂಲಕ ರಾಜ್ಯದ ಎಲ್ಲಾ ಪಾಲಿಕೆಗಳು ಹಾಗೂ ಸ್ಥಳೀಯ ಪಾಲಿಕೆಗಳನ್ನು ಆರ್ಥಿಕವಾಗಿ ಶಕ್ತಿಯುತವಾಗಿ ಮಾಡುವುದು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಹಾಗೂ ಒಂದು ಬಾರಿ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡುವುದು ಇದರಲ್ಲಿ ಸೇರಿದೆ. ಆದರೆ, ರಾಜ್ಯ ಸರ್ಕಾರವು ಎರಡು ಬಾರಿ ಅಂದರೆ ಮೊದಲ ಬಾರಿಗೆ ಮೂರು ತಿಂಗಳು ಹಾಗೂ ಎರಡನೇ ಬಾರಿ ಮೂರು ತಿಂಗಳು ಸೇರಿ ಎರಡು ಅವಧಿಗೆ ಬಿ ಖಾತಾ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದೆ.

ಬಿ ಖಾತಾ ನೀಡಿದರೂ ಆಸ್ತಿದಾರರಿಗೆ ಇದರಿಂದ ಲಾಭವಾಗುತ್ತಿಲ್ಲ. ಬಿ ಖಾತಾ ಹೊಂದಿರುವ ಆಸ್ತಿದಾರರಿಗೆ ಕಟ್ಟಡ ನಕ್ಷೆ ಮಂಜೂರಾತಿ ಸಿಗದೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ರಿಯಲ್ ಎಸ್ಟೇಟ್‌ಗೂ ಭಾರೀ ಹೊಡೆತ ಬಿದ್ದಿದೆ. ಅಲ್ಲದೇ ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡಿದ ಮೇಲೆಯೂ ಬಿ ಖಾತಾ ಮಾಡಿಕೊಂಡರೆ ಸರ್ಕಾರದಿಂದ ಕನಿಷ್ಠ ಸೌಲಭ್ಯ ಸಿಗಲಿದೆ ಎನ್ನುವುದು ಬಹುತೇಕ ಸುಳ್ಳಾಗಿದೆ. ಆ ಕಡೆ ಬಿ ಖಾತಾ ಆಸ್ತಿಯನ್ನು ಮಾರಾಟವೂ ಮಾಡಲಾಗದೆ. ಮನೆಯನ್ನೂ ನಿರ್ಮಾಣ ಮಾಡಲಾಗದ ಪರಿಸ್ಥಿತಿ ಇದೆ. ಇದರ ನಡುವೆ ಸರ್ಕಾರ ದುಬಾರಿ ಶುಲ್ಕವನ್ನು ಪಾವತಿಸಿಕೊಂಡು, ಬಿ - ಖಾತಾಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಬಿ ಖಾತಾ ಆಸ್ತಿಯಲ್ಲಿ ಗೊಂದಲಗಳು ಇನ್ನೂ ಮುಂದುವರಿದಿದೆ ಎಂದು ಬಿ ಖಾತಾ ಹೊಂದಿರುವ ಆಸ್ತಿದಾರರು ಆರೋಪಿಸಿದ್ದಾರೆ.
ಬಿ ಖಾತಾ ಗೊಂದಲ: ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಒಂದು ಬಾರಿ ಖಾತಾ ನೀಡುವುದು ಹಾಗೂ ಬಿ ಖಾತಾ ಮಾಡಿಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರವು ಅವಕಾಶ ಮಾಡಿಕೊಟ್ಟಿದೆಯಾದರೂ. ಬಿ-ಖಾತೆ ಮಾಡಿಸಿಕೊಂಡು ಆಸ್ತಿದಾರರು ಅವರ ಆಸ್ತಿಗಳನ್ನು ಬೇರೆಯವರಿಗೆ ಮಾರಾಟ ಮಾಡಿದ ಮೇಲೆ ಖರೀದಿಸಿದವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಳ್ಳುವ ಅವಕಾಶವನ್ನೂ ಮಾಡಿಕೊಟ್ಟಿಲ್ಲ. ನೋಂದಣಿಯಾಗಿದ್ದರೂ ಸಹ ಮೂಲ ಖಾತೆದಾರನ ಹೆಸರಿನಲ್ಲೇ ಖಾತಾ ಉಳಿಯುತ್ತಿದೆ ಇದು ಆಸ್ತಿದಾರರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಬಾರಿ ಪರಿಹಾರದ ಮೂಲಕ ದುಬಾರಿ ಶುಲ್ಕ ಹಾಗೂ ಆಸ್ತಿ ತೆರಿಗೆಯನ್ನೂ ಪಾವತಿ ಮಾಡಿದ್ದೇವೆ ಆದರೆ, ಬಿ ಖಾತಾದಿಂದ ಯಾವುದೇ ಅನುಕೂಲ ಆಗುತ್ತಿಲ್ಲ ಎಂದು ಆಸ್ತಿದಾರರು ದೂರಿದ್ದಾರೆ. ಆದರೆ ಸರ್ಕಾರ ಇಲ್ಲಿಯ ವರೆಗೂ ಈ ಗೊಂದಲಗಳನ್ನು ಪರಿಹರಿಸುವ ಕೆಲಸವನ್ನು ಮಾಡಿಲ್ಲ.
ನೀವು ಬಿ - ಖಾತಾ ಆಸ್ತಿದಾರರಾಗಿದ್ದು ನಿಮಗೂ ಸಮಸ್ಯೆ ಆಗುತ್ತಿದೆಯೇ. ಬಿ ಖಾತಾಗೆ ಸಂಬಂಧಿಸಿದಂತೆ ನಿಮಗೆ ಆಗುತ್ತಿರುವ ಸಮಸ್ಯೆ ಏನು ಎನ್ನುವುದನ್ನು ಕಮೆಂಟ್ ಮೂಲಕ ತಿಳಿಸಿ.












Click it and Unblock the Notifications