Ather Kannada: ರಾಜ್ಯೋತ್ಸವಕ್ಕೆ ವಿಶೇಷ ಕನ್ನಡ ಫೀಚರ್ ಹೊರತಂದ ಏಥರ್
ಬೆಂಗಳೂರಿನಲ್ಲಿ ನೆಲೆಯೂರಿರುವ ಹಲವು ಕಂಪನಿಗಳಿಗೆ ಕನ್ನಡ ಅಂದ್ರೆ ಅಸಡ್ಡೆ. ಇನ್ನು ಕನ್ನಡ ರಾಜ್ಯೋತ್ಸವ ಅಂದ್ರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿನ ಮಣ್ಣಿಗೆ ಕೆಲವರು ಅಷ್ಟರಮಟ್ಟಿಗೆ ಅಗೌರವ ತೋರುತ್ತಾರೆ. ಆದರೆ ಬೆಂಗಳೂರು ಮೂಲದ ಸ್ಟಾರ್ಟಪ್ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಉಡುಗೊರೆ ನೀಡಿದೆ. ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಏಥರ್ ಎನರ್ಜಿ ತನ್ನ ಸ್ಕೂಟರ್‌ನಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸುತ್ತಿದೆ. ಈ ಮೂಲಕ ಕನ್ನಡಕ್ಕೆ ವಿಶೇಷ ಗೌರವ ಸಲ್ಲಿಸುತ್ತಿದೆ.
ಹೌದು, ಏಥರ್ ಎನರ್ಜಿ ತನ್ನ ರಿಜ್ಟಾ ಝಢ್ ಡ್ಯಾಶ್‌ಬೋರ್ಡ್‌ಗೆ ಕನ್ನಡದ ಅಪ್‌ಡೇಟ್ ನೀಡುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ ಇನ್ನು ಮುಂದೆ ಕನ್ನಡದಲ್ಲೇ ಮಾಹಿತಿ ಇರಲಿದ್ದು, ಈ ಮೂಲಕ ಕನ್ನಡಿಗರಿಗೆ ಈ ಸ್ಕೂಟರ್ ಮತ್ತಷ್ಟು ಹತ್ತಿರವಾಗಲಿದೆ.
ಈ ಹೊಸ ಅಪ್‌ಡೇಟ್‌ನಲ್ಲಿ ರಿಜ್ಟಾ ಝಡ್ ಮಾಲೀಕರು ತಮ್ಮ ಡ್ಯಾಶ್‌ಬೋರ್ಡ್ ಇಂಟರ್ಫೇಸ್ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಕನ್ನಡ ಮಾತನಾಡುವವರಿಗೆ ತಮ್ಮ ನೆಲದ ಭಾಷೆಯ ಅನುಭವವನ್ನು ಇನ್ನಷ್ಟು ಅರ್ಥಗರ್ಭಿತ ಮತ್ತು ಸುಗಮಗೊಳಿಸುತ್ತದೆ. ನವೆಂಬರ್ 1ರಿಂದ ಪ್ರಾರಂಭವಾಗುವ ಈ ಅಪ್‌ಡೇಟ್ ಹಂತ ಹಂತವಾಗಿ ಸಿಗಲಿದೆ.

"ಈ ಕನ್ನಡ ರಾಜ್ಯೋತ್ಸವದಿಂದ ನಾವು ನಿಮ್ಮ Ather Rizta Zನಲ್ಲಿ ಕನ್ನಡ ಡ್ಯಾಶ್‌ಬೋರ್ಡ್ ಸೌಲಭ್ಯ ನೀಡುತ್ತಿದ್ದೇವೆ. ಏಥರ್ ಎನರ್ಜಿಯಲ್ಲಿ, ತಂತ್ರಜ್ಞಾನವು ಸರಳತೆ ಹಾಗೂ ಅರ್ಥಪೂರ್ಣವಾಗಿರಬೇಕು ಹಾಗೂ ಅದರ ಅನುಭವಗಳು ಸಹಜವಾಗಿರಬೇಕೆಂದು ನಾವು ನಂಬುತ್ತೇವೆ. ಭಾಷೆ ಅದರಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಬಹಳಷ್ಟು ಜನರಿಗೆ ತಮ್ಮ ಭಾಷೆಯಲ್ಲಿ ಸಂವಹನ ಮಾಡುವುದು ಸುಲಭಕರ, ವೈಯಕ್ತಿಕ ಹಾಗೂ ಪರಿಚಿತವಾಗಿರುತ್ತದೆ. ಈ ಅಪ್‌ಡೇಟ್ ಅದರತ್ತ ಒಂದು ಹೆಜ್ಜೆಯಾಗಿದೆ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಏಥರ್ ತಿಳಿಸಿದೆ.
ನಟ ರಮೇಶ್ ಅರವಿಂದ್ ಅನಾವರಣ
ಕರ್ನಾಟಕವು ಆರಂಭದಿಂದಲೂ ನಮಗೆ ನೆಲೆಯಾಗಿದ್ದು, ಏಥರ್‌ನ ಹೆಚ್ಚಿನ ಭಾಗ, ನಮ್ಮ ತಂಡಗಳು ಮತ್ತು ನಮ್ಮ ಆರಂಭಿಕ ಸಮುದಾಯವು ಇಲ್ಲಿಂದಲೇ ಶುರುವಾಯಿತು. ಸಂಸ್ಕೃತಿ ಮತ್ತು ಭಾಷೆ ಆಳವಾಗಿ ಬೇರೂರಿರುವ ರಾಜ್ಯದಲ್ಲಿ, ರಿಜ್ಟಾ Z ಡ್ಯಾಶ್‌ಬೋರ್ಡ್‌ಗೆ ಕನ್ನಡ ಭಾಷೆಯನ್ನ ಸೇರಿಸುವುದು ನಮ್ಮ ಸವಾರರಿಗೆ ಒಳ್ಳೆಯ ಹೆಜ್ಜೆಯಂತೆ ಭಾಸವಾಯಿತು ಎಂದು ಹೇಳಿದೆ. ಈ ಕನ್ನಡ ರಾಜ್ಯೋತ್ಸವದಲ್ಲಿ ನಟ ರಮೇಶ್ ಅರವಿಂದ್ ನಮ್ಮ ಸ್ಕೂಟರ್‌ಗಳಲ್ಲಿ ಕನ್ನಡ ಡ್ಯಾಶ್‌ಬೋರ್ಡ್ ಅನ್ನು ಅನಾವರಣಗೊಳಿಸುತ್ತಾರೆ. ಅವರು ನಮ್ಮನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಥಳೀಯರನ್ನಾಗಿ ಮಾಡುತ್ತಾರೆ ಎಂದು ಏಥರ್ ಹೇಳಿದೆ.
ಈ ಅಪ್‌ಡೇಟ್ ರಿಜ್ಟಾಗಾಗಿ ಏಥರ್ ಈ ಹಿಂದೆ ಘೋಷಿಸಿದ ಬಹು-ಭಾಷಾ ಡ್ಯಾಶ್‌ಬೋರ್ಡ್ ಇಂಟರ್ಫೇಸ್‌ನ ಭಾಗವಾಗಿದೆ. ಇದು ಅಂತಿಮವಾಗಿ ಎಂಟು ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸಲಿದೆ. ಇದೀಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆಯನ್ನು ಪರಿಚಯಿಸಿರುವ ಏಥರ್, ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು ಮುಂಬರುವ ತಿಂಗಳುಗಳಲ್ಲಿ ಪರಿಚಯಿಸಲಿದೆ.












Click it and Unblock the Notifications