Get Updates
Get notified of breaking news, exclusive insights, and must-see stories!

Kamalakar Bhat Case: ಬಿಕೆ ಹರಿಪ್ರಸಾದ್ vs ಸುರೇಶ್ ಕುಮಾರ್: ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣ, ನಾಯಕರ ವಾಕ್ಸಮರ

Astrologer Kamalakar Bhat Case: ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹಾಗೂ ಬಿಜೆಪಿ ನಾಯಕ ಎಸ್.ಸುರೇಶ್ ಕುಮಾರ್ ನಡುವೆ ವಾಕ್ಸಮರ ತೀವ್ರವಾಗಿದೆ. ಈ ವಿಚಾರ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಇಬ್ಬರು ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ.

ಈ ಹಿಂದೆ ಸುರೇಶ್ ಕುಮಾರ್ ಅವರು ಕಮಲಾಕರ್ ಭಟ್ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನು ಉಲ್ಲೇಖಿಸಿ ಆಕ್ಷೇಪಿಸಿರುವ ಬಿ.ಕೆ.ಹರಿಪ್ರಸಾದ್, "ಇಂತಹ ಮೂಢನಂಬಿಕೆಯ 'ಅಕ್ರಮ ದಂಧೆ'ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ" ಎಂದು ಆರೋಪ ಮಾಡಿದ್ದಾರೆ.

Astrologer Kamalakar Bhat Case

ಇದಕ್ಕೆ ತಿರುಗೇಟು ನೀಡಿರುವ ಎಸ್‌.ಸುರೇಶ್ ಕುಮಾರ್, "ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, "ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ" ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ" ಎಂದು ತಿರುಗೇಟು ನೀಡಿದ್ದಾರೆ. ಅವರಿಬ್ಬರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.

ಕಮಲಾಕರ ಭಟ್‌ಗೆ ಸುರೇಶ್‌ ಕುಮಾರ್ ಪ್ರೋತ್ಸಾಹ: ಹರಿಪ್ರಸಾದ್

ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್‌ ಕುಮಾರ್ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಕಮಲಾಕರ ಭಟ್ ಎಂಬ ಜೋತಿಷಿ ಭಾಗಿಯಾದ ಕೊಲೆ ಕೇಸ್ ನಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ "ಗುರೂಜಿ" ಕಮಲಾಕರ ಭಟ್ಟನನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಓರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ.

ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು 'ಅಕ್ರಮ'ಗಳನ್ನು ಸಂಪಾದಿಸಿಕೊಂಡು ಇಂತಹ "ಜೀ-ಗುರೂಜಿ"ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ 'ಅಕ್ರಮ ದಂಧೆ'ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ.

ಸದನದಲ್ಲಿ ಮಹಿಳೆಯರನ್ನೇ ಅಪಮಾನ ಮಾಡುವವರು, ಸಮಾಜದಲ್ಲಿ ಸ್ತ್ರೀ ಪೀಡಕರು, ಅತ್ಯಾಚಾರಿಗಳು, ಕೊಲೆಗಡಕರು, ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸುವವರಿಗೆ ನೇರವಾಗಿ ಬಿಜೆಪಿ ಜೊತೆಗೆ ಅವಿನಾಭಾವ ಸಂಬಂಧ ಇರುವುದಾದರೂ ಹೇಗೆ? ಬಿಜೆಪಿ ಕರ್ನಾಟಕದಲ್ಲಿ ಈ ಕಾರಣಕ್ಕಾಗಿಯೇ ಪ್ರತ್ಯೇಕ ಮೋರ್ಚಾ ಇದೆಯೇ? ಅಥವಾ ಕ್ರಿಮಿನಲ್ ಗಳಲ್ಲಿ ಭಾಗವಹಿಸುವವರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಮಾತ್ರ ಸ್ಥಾನಮಾನಗಳು ಸಿಗುತ್ತದೆಯೇ?

ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಗೆ ನೆನಪಿಸಲು ಬಯಸುತ್ತೇನೆ: ಭಾರತ ಸಂವಿಧಾನದ 51A(h) ಆರ್ಟಿಕಲ್ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವೆಂದರೆ : "ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಗತಿಪರ ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು". ಈ ವಿಧಿಯ ಉದ್ದೇಶವು ಅಂಧಶ್ರದ್ಧೆ, ಪೂರ್ವಗ್ರಹಗಳನ್ನು ಅವಲಂಬಿಸದೆ, ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಗತಿಶೀಲ ದೃಷ್ಟಿಕೋನವನ್ನು ಉತ್ತೇಜಿಸುವುದಾಗಿದೆ. ಸುರೇಶ್ ಕುಮಾರ್ ಅಂತವರು ಸಂವಿಧಾನದ ಈ ಆರ್ಟಿಕಲ್ ಅನ್ನು ಉಲ್ಲಂಘಿಸಿ ಅಪರಾಧ ಮಾಡಿದ್ದೇ ಕಮಲಾಕರ ಭಟ್ ಅಂತವರು ಕೊಲೆಗಾರರಾಗಲು ಕಾರಣವಾಗಿದೆ‌. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು.

ನಿಮ್ಮ ಬರಹ ಹತಾಶೆಯನ್ನು ತೋರಿಸುತ್ತದೆ: ಸುರೇಶ್ ಕುಮಾರ್

ಶ್ರೀ ಬಿ.ಕೆ. ಹರಿಪ್ರಸಾದ್ ಅವರೇ, ನಿಮ್ಮ ಫೇಸ್ಬುಕ್ ಬರಹವನ್ನು ಗಮನಿಸಿದೆ. ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ "ಬೌದ್ಧಿಕ ದಿವಾಳಿತನ"ವನ್ನು ಎತ್ತಿ ತೋರಿಸುವಂತಿದೆ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ "ನೈತಿಕ ಹೊಣೆ" ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು.

ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಿಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ "ನೈತಿಕ ಹೊಣೆ" ಹೊತ್ತಿದ್ದಾರೆಯೇ?

ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ. ನೀವು ನನಗೆ ಸಂವಿಧಾನದ ಆರ್ಟಿಕಲ್ 51A(h) ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. "ವೈಜ್ಞಾನಿಕ ಮನೋಭಾವ" ಮತ್ತು "ತಾರ್ಕಿಕತೆ" ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ, ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ.

ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ "ವೈಜ್ಞಾನಿಕ ಮನೋಭಾವ"? ಇದು ಪಕ್ಕಾ "ಪೂರ್ವಾಗ್ರಹ ಪೀಡಿತ ಮನಸ್ಥಿತಿ". ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ. ನಾನು ಜ್ಯೋತಿಷ್ಯವನ್ನಾಗಲಿ ತುಂಬಾ ನಂಬುವನೂ ಅಲ್ಲ ಅಥವಾ ಯಾವುದೇ ಮೂಢನಂಬಿಕೆಯನ್ನಾಗಲಿ ಬೆಂಬಲಿಸುವನೂ ಅಲ್ಲ.

ಆದರೆ, ಧಾರ್ಮಿಕ ನಂಬಿಕೆಗಳಿಗೂ, ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, "ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ" ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ.

ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ನಿಮ್ಮ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ನೀವು ಉಲ್ಲೇಖಿಸಿದ ಸಂವಿಧಾನಕ್ಕೆ ಮಾಡುವ ದ್ರೋಹ. ಇನ್ನಾದರೂ ಆಧಾರರಹಿತ ಆರೋಪಗಳನ್ನು ನಿಲ್ಲಿಸಿ, ಘನತೆಯುತ ರಾಜಕಾರಣ ಮಾಡಿ. ಎಂಇಎಸ್ ಕಾಲೇಜಿನಲ್ಲಿ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ನಾವಿಬ್ಬರು ಒಟ್ಟಿಗೆ ಶಿಕ್ಷಣ ಪಡೆದಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲೂ ಇಂದು ಬೇಸರವೆನಿಸುತ್ತದೆ. ಆ ಭಗವಂತ ನಿಮಗೆ ಸದ್ಬುದ್ದಿ ನೀಡಲಿ ಎಂದು ತಿರುಗೇಟು ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+