ಸದನದಲ್ಲಿ ಇಂದು : ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ
ಬೆಂಗಳೂರು, ನವೆಂಬರ್ 23 : ವಿಧಾನಸಭೆಯಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, 'ಅನುಭವವಿಲ್ಲದವರು ಆಡಳಿತ ನಡೆಸಿದಂತಾಗಿದೆ. ಆದ್ದರಿಂದ, ನಗರ ಪಾಲಿಕೆಗಳು ದಿವಾಳಿ ಆಗುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯಮ ಸ್ಥಾಪಿಸುವವರಿಗೆ ವಿವಿಧ ಸೌಲಭ್ಯ : ರಾಜ್ಯದ 2 ನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಪ್ರೇರೇಪಿಸಲು ಉದ್ಯಮಿಗಳ ಜೊತೆ ಚರ್ಚಿಸಬೇಕಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಸೋಮವಾರ ವಿ. ಸೋಮಣ್ಣ ಅವರ ಸಚಿವರು ಉತ್ತರ ನೀಡಿದರು. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪಿಸಲು ಉದ್ಯಮಿಗಳಿಗೆ ಉತ್ತೇಜನ, ರಿಯಾಯಿತಿ ದರದ ಬಾಡಿಗೆ, ವಿದ್ಯುತ್ ದರದಲ್ಲಿ ರಿಯಾಯಿತಿ, ಸ್ಟಾಂಪ್ ಶುಲ್ಕದಲ್ಲಿ ವಿನಾಯಿತಿ ಹಾಗೂ ಇತರ ಸೌಲಭ್ಯಗಳನ್ನು ನೀಡಲು ಸರ್ಕಾರ ಚಿಂತಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ['ಮಂತ್ರಿಯಾಗುವುದೇ ಪುಣ್ಯ, ಸರಿಯಾಗಿ ಕೆಲಸ ಮಾಡಿ']
ಲೋಕಾ ಪದಚ್ಯುತಿ ನಿರ್ಣಯ ಮಂಡನೆ : ವಿಧಾನಸಭೆಯಲ್ಲಿ ಸೋಮವಾರ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈ.ಎಸ್.ವಿ.ದತ್ತ ಅವರು ಕರ್ನಾಟಕ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬೇಕೆಂಬ ಪ್ರಸ್ತಾವ ಮಂಡಿಸಿದರು. ಈ ಪ್ರಸ್ತಾಪವನ್ನು ಒಪ್ಪಲಾಗಿದೆ ಎಂದು ಸ್ಪೀಕರ್ ಸದನದಲ್ಲಿ ಪ್ರಕಟಿಸಿದರು. ಈ ಪ್ರಸ್ತಾವಕ್ಕೆ ಆಡಳಿತ ಪಕ್ಷದ ಸಹಮತ ಇದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸಭಾಧ್ಯಕ್ಷರಿಗೆ ಮಾಹಿತಿ ನೀಡಿದರು. [ಸಚಿವ ಜೈನ್ ಗೆ ಬಂದಿದ್ದು ಹುಸಿ ಬೆದರಿಕೆ ಕರೆಯಲ್ಲ]

ಈಶ್ವರಪ್ಪಗೆ ಜೀವ ಬೆದರಿಕೆ : 'ತಮಗೆ ಜೀವ ಬೆದರಿಕೆ ಕರೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ತಮಗೆ ಭದ್ರತೆ ಒದಗಿಸಬೇಕೆಂದು' ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಚಳಿಗಾಲದ ಅಧಿವೇಶನದ ಸೋಮವಾರದ ಕಲಾಪದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ಭಾನುವಾರ ರಾತ್ರಿ ಕರೆ ಮಾಡಿದ ವ್ಯಕ್ತಿಯೊಬ್ಬ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದರು. ಕರೆ ಮಾಡಿದ ವ್ಯಕ್ತಿ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದ' ಎಂದು ಈಶ್ವರಪ್ಪ ಪರಿಷತ್ತಿನಲ್ಲಿ ತಿಳಿಸಿದರು.
'ಭಾನುವಾರ ರಾತ್ರಿ 9.30 ಮತ್ತು 10.45ಕ್ಕೆ ಇಂಟರ್‌ನೆಟ್ ಮೂಲಕ ಈ ಬೆದರಿಕೆ ಕರೆ ಬಂದಿದೆ. ಸರ್ಕಾರ ತನಗೆ ರಕ್ಷಣೆ ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಈಶ್ವರಪ್ಪ ಒತ್ತಾಯಿಸಿದರು.
ತನಿಖೆ ನಡೆಸಲಿ : ಕೆ.ಎಸ್.ಈಶ್ವರಪ್ಪ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, 'ಹಿಂದೆಯೂ ವಿದೇಶದಿಂದ ಸಚಿವರಿಗೆ ಬೆದರಿಕೆ ಕರೆಗಳು ಬಂದಿವೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ದೂರು ನೀಡಬೇಕು. ಕೇಂದ್ರ ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಹೇಳಿದರು.
ದಾಖಲೆ ಕೊಡಲು ಸಿದ್ಧ : ಸರ್ಕಾರದ ಪರವಾಗಿ ಉತ್ತರ ನೀಡಿದ ಸಭಾನಾಯಕ ಮತ್ತು ಸಚಿವ ಎಸ್.ಆರ್.ಪಾಟೀಲ್ ಅವರು, ಸಚಿವರಿಗೆ ಬಂದ ಬೆದರಿಕೆ ಕರೆಗಳ ಬಗ್ಗೆ ದಾಖಲೆ ಕೊಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ. ಕೇಂದ್ರ ಸರ್ಕಾರ ತನಿಖೆ ನಡೆಸುವುದಾದದರೆ ಎಲ್ಲಾ ದಾಖಲೆ ನೀಡುತ್ತೇವೆ' ಎಂದು ತಿಳಿಸಿದರು.












Click it and Unblock the Notifications