ಬೆಂಗಳೂರು, ಡಿಸೆಂಬರ್ 22 : ಪತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಬಿಜೆಪಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹಿನ್ನಡೆ ಉಂಟಾಗಿತ್ತು. ಹಿಂದುತ್ವ ಮತ್ತು ಮಹದಾಯಿ ನದಿ ವಿವಾದದ ದಾಳ ಉರುಳಿಸುವ ಮೂಲಕ ಬಿಜೆಪಿ ಹೊಸ ಲೆಕ್ಕಾಚಾರ ಹುಟ್ಟು ಹಾಕಿದೆ.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗುರುವಾರ ಬಿಜೆಪಿಯ ಪರಿವರ್ತನಾ ಯಾತ್ರೆಯ 50ನೇ ದಿನದ ಸಮಾವೇಶ ನಡೆಯಿತು. ಸಮಾವೇಶದ ಮುಖ್ಯ ಆಕರ್ಷಣೆಯಾಗಿದ್ದು ಮಹದಾಯಿ ವಿವಾದ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
ಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿ
ಮಹದಾಯಿ ವಿವಾದದ ಕುರಿತು ಗೋವಾ ರಾಜ್ಯದ ನಿಲುವು ಸಮಾವೇಶದಲ್ಲಿ ಪ್ರಕಟವಾಯಿತು. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬರೆದ ಪತ್ರವನ್ನು ಓದುವ ಮೂಲಕ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ರಾಜಕೀಯ ಲೆಕ್ಕಾಚಾರ ಆರಂಭಿಸಿದರು.
ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?
ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಟಿಪ್ಪು ಜಯಂತಿ ವಿಚಾರ ಪ್ರಸ್ತಾಪ ಮಾಡುವ ಮೂಲಕ ಹಿಂದುತ್ವದ ದಾಳ ಉರುಳಿಸಿದರು. ಈ ಎರಡೂ ವಿಚಾರಗಳ ಮೇಲೆಯೇ ಸಮಾವೇಶ ಕೇಂದ್ರಿಕೃತವಾಗಿತ್ತು, ಇದು ಚುನಾವಣೆಗೆ ಹೇಗೆ ಸಹಾಯಕವಾಗಲಿದೆ ಎಂದು ಕಾದು ನೋಡಬೇಕು...
2018ರ ಕರ್ನಾಟಕ ಚುನಾವಣೆ : ಅಹಿಂದ V/S ಹಿಂದುತ್ವ

ಬಿಜೆಪಿಯ ದೊಡ್ಡ ಸಮಾವೇಶ
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಸಮಾವೇಶಕ್ಕೆ ಹೆಚ್ಚು ಜನರು ಆಗಮಿಸಿದ್ದರು. ಯೋಗಿ ಆದಿತ್ಯನಾಥ್ ಮತ್ತು ಮಹದಾಯಿ ವಿಚಾರದಲ್ಲಿ ಬಿಜೆಪಿಯ ಘೋಷಣೆ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ಪತ್ರ ಓದಿದ ಬಿ.ಎಸ್.ಯಡಿಯೂರಪ್ಪ
‘ಕುಡಿಯುವ ನೀರು ಒದಗಿಸಲು ನಮ್ಮ ಸರ್ಕಾರದ ವಿರೋಧವಿಲ್ಲ. ಜನರ ಹಿತದೃಷ್ಟಿಯಿಂದ ವಿವಾದ ಬಗೆಹರಿಸಲು ನಾವು ಚರ್ಚೆಗೆ ಸಿದ್ಧರಿದ್ದೇವೆ' ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬರೆದ ಪತ್ರವನ್ನು ಬಿ.ಎಸ್.ಯಡಿಯೂರಪ್ಪ ಸಮಾವೇಶದಲ್ಲಿ ಓದಿದರು.

ಟಿಪ್ಪು ಜಯಂತಿ ವಿವಾದ ಕೆದಕಿದ ಯೋಗಿ
ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, 'ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ನನಗೆ ವಿಶ್ವಾವಿದೆ. ಕಾಂಗ್ರೆಸ್ ಸರ್ಕಾರಕ್ಕೆ ಹೇಳಿ ನಾವು ದೇಶದಲ್ಲಿ ಹನುಮಾನ್‌ನನ್ನು ಪೂಜಿಸುತ್ತೇವೆ. ಟಿಪ್ಪು ಸುಲ್ತಾನ್ ನನ್ನು ಅಲ್ಲ' ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಹಿಂದುತ್ವದ ಅಜೆಂಡಾವನ್ನು ಮಂಡಿಸಿದರು.

ಮಹದಾಯಿ ವಿವಾದ ಮುಂದೇನು?
ಬುಧವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆ ಬಳಿಕ ಗೋವಾ ಮಹದಾಯಿ ವಿಚಾರದಲ್ಲಿ ಚರ್ಚೆಗೆ ಸಿದ್ಧ ಎಂದು ಹೇಳಿದೆ. ಆದರೆ, ಗೋವಾ ರಾಜ್ಯದಲ್ಲಿ ಮಾತುಕತೆಗೆ ಪೂರಕವಾದ ವಾತಾವರಣವಿದೆಯೇ?. ಮಹದಾಯಿ ವಿವಾದ ಮತ್ತೆ ಆರಂಭವಾದರೆ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಗೋವಾ ಫಾರ್ವರ್ಡ್ ಪಾರ್ಟಿ ಪರಿಕ್ಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!