Breaking; ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ದಿನಾಂಕ ನಿಗದಿ
ಬೆಂಗಳೂರು, ಡಿಸೆಂಬರ್ 19; ಕರ್ನಾಟಕ ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ದಿನಾಂಕ ನಿಗದಿಯಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಲು ನಾಯಕರು ರಾಜ್ಯಾದ್ಯಂತ ಯಾತ್ರೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಜನವರಿ 11ರಂದು ಬಸ್ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಬೆಳಗಾವಿಯಿಂದ ಬಸ್ ಯಾತ್ರೆ ಆರಂಭವಾಗಲಿದೆ" ಎಂದರು.
"ಪ್ರತಿಪಕ್ಷ ನಾಯಕ ಸಿದ್ದರಾಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವಾರು ನಾಯಕರು ಬಸ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ 21 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಯಾತ್ರೆ ನಡೆಯಲಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ವಿಶೇಷ ಬಸ್ ಈಗಾಗಲೇ ಸಿದ್ಧವಾಗಿದೆ. ಇದೇ ಬಸ್‌ನಲ್ಲಿ ಸಿದ್ದರಾಮಯ್ಯ ಕೋಲಾರ ಪ್ರವಾಸಕ್ಕೆ ಹೋಗಿದ್ದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಬೇರೆ-ಬೇರೆ ಯಾತ್ರೆ ಮಾಡಲು ಮೊದಲು ಯೋಜನೆ ರೂಪಿಸಲಾಗಿತ್ತು. ಆದರೆ ಹೈಕಮಾಂಡ್ ನಾಯಕರು ಇದಕ್ಕೆ ತಡೆ ನೀಡಿದ್ದರು. ಒಟ್ಟಾಗಿ ಯಾತ್ರೆ ಮಾಡುವಂತೆ ಸೂಚನೆ ನೀಡಿದ್ದರು.
ಸಿದ್ದರಾಮಯ್ಯ ಮಾತು; ಇನ್ನು ಬಸ್ ಯಾತ್ರೆ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ, "ಅಕ್ಟೋಬರ್ ಅಥವ ನವೆಂಬರ್‌ನಲ್ಲಿ ಬಸ್ ಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ದಿನಾಂಕ ನಿಗದಿಗೊಳಿಸುವುದು ವಿಳಂಬವಾಗಿದೆ. ಶೀಘ್ರದಲ್ಲೇ ದಿನಾಂಕ ನಿಗದಿಗೊಳಿಸುತ್ತೇವೆ" ಎಂದು ಹೇಳಿದ್ದರು.
ಡಬಲ್ ಎಂಜಿನ್ ಸರ್ಕಾರದಿಂದ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವಾಗಲೇ, ಕಾಂಗ್ರೆಸ್ ಎರಡು ಸ್ಟೇರಿಂಗ್‌ನ ಬಸ್ ಯಾತ್ರೆಗೆ ಅಣಿಯಾಗುತ್ತಿದೆ. @DKShivakumar, @siddaramaiah ಎರಡೂ ಸ್ಟೇರಿಂಗ್ ಕಿತ್ತುಕೊಂಡು, @kharge ಅವರನ್ನು ಮೂಲೆಗೆ ತಳ್ಳಿರೋದು ನೋಡಿದ್ರೆ ಈ ಬಸ್ ಯಾತ್ರೆ ಪಂಕ್ಚರ್ ಆಗೋದು ಗ್ಯಾರಂಟಿ.#DoubleSteeringINC pic.twitter.com/mIbTDVDZU5
— BJP Karnataka (@BJP4Karnataka) December 14, 2022
ಡಿಸೆಂಬರ್ 14ರಂದು ಕರ್ನಾಟಕ ಬಿಜೆಪಿ ಕಾಂಗ್ರೆಸ್ ನಾಯಕರ ಬಸ್ ಯಾತ್ರೆಯನ್ನು ಟೀಕಿಸಿತ್ತು. ವ್ಯಂಗ್ಯ ಚಿತ್ರದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕೀಯವನ್ನು ಬಹಿರಂಗಗೊಳಿಸಿತ್ತು. 'ಡಬಲ್ ಎಂಜಿನ್ ಸರ್ಕಾರದಿಂದ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವಾಗಲೇ, ಕಾಂಗ್ರೆಸ್ ಎರಡು ಸ್ಟೇರಿಂಗ್‌ನ ಬಸ್ ಯಾತ್ರೆಗೆ ಅಣಿಯಾಗುತ್ತಿದೆ. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಎರಡೂ ಸ್ಟೇರಿಂಗ್ ಕಿತ್ತುಕೊಂಡು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂಲೆಗೆ ತಳ್ಳಿರೋದು ನೋಡಿದ್ರೆ ಈ ಬಸ್ ಯಾತ್ರೆ ಪಂಕ್ಚರ್ ಆಗೋದು ಗ್ಯಾರಂಟಿ' ಎಂದು ವ್ಯಂಗ್ಯವಾಡಿತ್ತು.












Click it and Unblock the Notifications