ಕರ್ನಾಟಕ ಚುನಾವಣೆ: 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಓವೈಸಿ ಸಜ್ಜು
ಬೆಂಗಳೂರು, ನ. 11: ಸಂಸದ ಅಸಾದುದ್ದೀನ್ ಓವೈಸಿ ಅವರ ಪಕ್ಷ ಆಲ್ ಇಂಡಿಯಾ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ.
"ಎಐಎಂಐಎಂ ಮುಂದಿನ ವರ್ಷ ಕರ್ನಾಟಕದ ಒಟ್ಟು 224 ವಿಧಾನಸಭಾ ಸ್ಥಾನಗಳ ಪೈಕಿ 100ರಲ್ಲಿ ಸ್ಪರ್ಧಿಸಲಿದೆ. ಈ ಚುನಾವಣೆಗೆ ಪಕ್ಷವು ವಿಶೇಷ ಯೋಜನೆ ರೂಪಿಸಿದೆ. ನಮ್ಮ ಪಕ್ಷವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ 52 ವಿಧಾನಸಭಾ ಸ್ಥಾನಗಳ ಮೇಲೆ ಕೇಂದ್ರೀಕರಿಸುತ್ತದೆ. ಎಸ್‌ಸಿ, ಎಸ್‌ಟಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿದ್ದಾರೆ" ಎಂದು ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು, ಬಸವಕಲ್ಯಾಣ, ಹುಬ್ಬಳ್ಳಿ, ಬೆಳಗಾವಿ, ಕುಷ್ಟಗಿ ಕ್ಷೇತ್ರಗಳಲ್ಲಿ ಎಐಎಂಐಎಂ ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಉಸ್ಮಾನ್ ಘನಿ ತಿಳಿಸಿದ್ದಾರೆ.

2018 ರ ಚುನಾವಣೆ ವೇಳೆಯಲ್ಲಿ ಕರ್ನಾಟಕದ ಕ್ಷೇತ್ರಗಳಲ್ಲಿ ನಾವು ಪೂರ್ಣ ಪ್ರಮಾಣದ ಸಂಘಟನೆಯನ್ನು ಹೊಂದಿಲ್ಲದ ಕಾರಣ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಪಕ್ಷವು ಮೈತ್ರಿ ಮಾಡಿಕೊಂಡಿತ್ತು. ಎಐಎಂಐಎಂ ಕಾರ್ಯಕರ್ತರು 2018 ರಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದರು ಎಂದಿದ್ದಾರೆ.
ಈ ಬಗ್ಗೆ ಇತ್ತಿಚೆಗೆ ಮಾತನಾಡಿದ್ದ ಅಸಾದುದ್ದೀನ್ ಓವೈಸಿ, 'ಕಳೆದ ಬಾರಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರು ಮನವಿ ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಐಎಂಐಎಂ ಸ್ಪರ್ಧಿಸದೇ, ಜೆಡಿಎಸ್ ಪರ ಪ್ರಚಾರ ಕೈಗೊಂಡಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅದು ಮರುಕಳಿಸುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಐಎಂಐಎಂ ಸ್ವತಂತ್ರವಾಗಿಯೇ ಸ್ಪರ್ಧಿಸಲಿದೆ' ಎಂದು ಓವೈಸಿ ಸ್ಪಷ್ಟಪಡಿಸಿದ್ದರು.
ಇನ್ನು, ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಐಎಂಐಎಂ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು.












Click it and Unblock the Notifications