ಉಪಚುನಾವಣೆ ಫಲಿತಾಂಶ ಉಲ್ಟಾ ಹೊಡೆದರೆ ಎರಡೂ ಆಯ್ಕೆಗೆ ಕಾಂಗ್ರೆಸ್ ಸಿದ್ದ?
ಉಪಚುನಾವಣೆಗೆ ಬಹಿರಂಗ ಪ್ರಚಾರ ಮುಗಿಯುವುದಕ್ಕೂ ಮುನ್ನವೇ, ಡಿಸೆಂಬರ್ ಒಂಬತ್ತರ ನಂತರದ ರಾಜಕೀಯದ ಬಗ್ಗೆ ಚರ್ಚೆ ಆರಂಭವಾಗಿದೆ. ಅದರಲ್ಲೂ, ಪ್ರಮುಖವಾಗಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯ ವಿಚಾರ.
ಯಡಿಯೂರಪ್ಪ ಸರಕಾರ ಸೇಫ್ ಆಗಲು, ಎಂಟು ಸೀಟನ್ನು ಗೆಲ್ಲಲೇ ಬೇಕಾಗಿದೆ. ಎಂಟರಿಂದ ಒಂಬತ್ತು ಸ್ಥಾನವನ್ನು ಗೆಲ್ಲಬಹುದು ಎನ್ನುವ ಪಕ್ಷದ ಆಂತರಿಕ ಸಮೀಕ್ಷೆಯಿಂದ ಬಿಜೆಪಿ, ಕೊಂಚ ನಿಟ್ಟುಸಿರು ಬಿಡುತ್ತಿದೆ.
ಮತಗಟ್ಟೆ ಸಮೀಕ್ಷೆಗಳೇ ಗೋತಾ ಹೊಡೆದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲಿ ಮುಖ್ಯವಾಗಿ, ಇತ್ತೀಚಿನ ಮಹಾರಾಷ್ಟ್ರ ಮತ್ತು ಹರಿಯಾಣದ ಅಸೆಂಬ್ಲಿ ಚುನಾವಣಾ ಫಲಿತಾಂಶ. ಎಲ್ಲಾ ವಾಹಿನಿ/ಮಾಧ್ಯಮಗಳು ಹೇಳಿದ್ದೊಂದು, ಆಗಿದ್ದು ಇನ್ನೊಂದು.
ಹೀಗಿರುವಾಗ, ಒಂದು ವೇಳೆ ನಿರೀಕ್ಷಿತ ಸ್ಥಾನವನ್ನು ಬಿಜೆಪಿ ಗೆಲ್ಲದಿದ್ದರೆ, ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಕೈಹಾಕುವ ಸಾಧ್ಯತೆಯ ಬಗ್ಗೆಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ.

ಸಿದ್ದರಾಮಯ್ಯ ಹೊರತಾದ ಜೆಡಿಎಸ್- ಕಾಂಗ್ರೆಸ್ ಮೈತ್ರಿ
ಸಿದ್ದರಾಮಯ್ಯ ಹೊರತಾದ ಜೆಡಿಎಸ್- ಕಾಂಗ್ರೆಸ್ ಮೈತ್ರಿಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆರಂಭಿಕ ಹಂತದಲ್ಲಿರುವ ಈ ಸುದ್ದಿ, ಉಪಚುನಾವಣೆಯ ಫಲಿತಾಂಶದ ನಂತರ ಏನು ಆಯಾಮ ಪಡೆದುಕೊಳ್ಳಲಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಸಿದ್ದರಾಮಯ್ಯ ಹೊರತಾದ ಮೈತ್ರಿಯೆಂದಾದರೆ ಮಾತ್ರ ಓಕೆ ಎನ್ನುವ ಇಂಗಿತವನ್ನು ಜೆಡಿಎಸ್ ವ್ಯಕ್ತ ಪಡಿಸಿದೆ ಎಂದು ಹೇಳಲಾಗುತ್ತಿದೆ.

ದೇವೇಗೌಡರು ಒಪ್ಪಿದರೆ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆ
ಈ ಬೆಳವಣಿಗೆಗೆ ಪೂರಕ ಎನ್ನುವಂತೆ, ಬಿ.ಕೆ.ಹರಿಪ್ರಸಾದ್ ಮತ್ತು ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ. "ದೇವೇಗೌಡರು ಒಪ್ಪಿದರೆ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಯಾಗಲಿದೆ" ಎಂದು ಹರಿಪ್ರಸಾದ್ ಹೇಳಿದ್ದಾರೆ. "ಡಿಸೆಂಬರ್ 09 ರ ನಂತರ ರಾಜ್ಯದ ಜನತೆಗೆ ಶುಭ ಸುದ್ದಿ ನೀಡಲಿದ್ದೇವೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು, ಮತ್ತೊಂದು ಸುತ್ತಿನ ಮೈತ್ರಿಗೆ ಅಡಿಪಾಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ಸಿನ ರಿವರ್ಸ್ ಆಪರೇಷನ್
ಒಂದೊಮ್ಮೆ ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದರೆ, ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ ಸಿದ್ದತೆ ನಡೆಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬಿಜೆಪಿಯ ಇತ್ತೀಚಿನ ನಡೆಯಿಂದ ಬೇಸರಗೊಂಡಿರುವ ಆ ಪಕ್ಷದ ಕೆಲವು ಶಾಸಕರನ್ನು ಕಾಂಗ್ರೆಸ್ ಈಗಾಗಲೇ ಗುರುತಿಸಿಟ್ಟುಕೊಂಡಿದೆ. ಎಲ್ಲದಕ್ಕೂ, ಉಪಚುನಾವಣೆಯ ಫಲಿತಾಂಶದ ವರೆಗೆ ಕಾಯೋಣ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ಸಿನಿಂದ ಅನರ್ಹಗೊಂಡ ಶಾಸಕರು
ಕಾಂಗ್ರೆಸ್ ಮತ್ತು ಜೆಡಿಎಸ್ಸಿನಿಂದ ಅನರ್ಹಗೊಂಡ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವುದಕ್ಕೆ, ಕಮಲದ ಪಕ್ಷದಲ್ಲೇ ವಿರೋಧ/ಅಸಮಾಧಾನವಿದೆ. ಇವರೆಲ್ಲಾ ಬಿಜೆಪಿಗೆ ಬಂದಿದ್ದರಿಂದ, ಹಲವರಿಗೆ ಮಂತ್ರಿ/ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಪ್ಪಿದೆ. ಈ ಸಿಟ್ಟಿನ ಲಾಭವನ್ನು ಪಡೆದುಕೊಳ್ಳಲು, ಕಾಂಗ್ರೆಸ್, ಇಂತಹ ನಾಯಕರನ್ನು ತನ್ನ ಸಂಪರ್ಕದಲ್ಲಿ ಇರಿಸಿಕೊಂಡಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ರೀತಿಯ ಕ್ರಮ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ರೀತಿಯ ದಾರಿಗಳು ತೆರೆದಿವೆ ಎನ್ನುವ ಮಾತನ್ನು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಈಗಾಗಲೇ ಹೇಳಿದ್ದಾರೆ. ಈ ಎಲ್ಲಾ ಹೇಳಿಕೆಗಳನ್ನು ಗಮನಿಸಿದಾಗ, ಜೆಡಿಎಸ್ ಜೊತೆ ಮೈತ್ರಿಗೆ ಮತ್ತು ರಿವರ್ಸ್ ಆಪರೇಷನ್ ಎರಡಕ್ಕೂ ಕಾಂಗ್ರೆಸ್ ಮುಕ್ತವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.












Click it and Unblock the Notifications