ಲಾಕ್ ಡೌನ್ 2.0: ಕರ್ನಾಟಕದಲ್ಲಿ ಏಪ್ರಿಲ್ 20 ರಿಂದ 'ಇವೆಲ್ಲ' ಲಭ್ಯ.!
ಕರ್ನಾಟಕ, ಏಪ್ರಿಲ್ 20: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಪ್ರಮುಖ ಅಸ್ತ್ರ. ಹೀಗಾಗಿ, ಎಲ್ಲಾ ದೇಶಗಳು ಲಾಕ್ ಡೌನ್ ಮಂತ್ರ ಜಪಿಸುತ್ತಿವೆ. ಭಾರತದಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೂ ಮೊದಲ ಹಂತದ ಲಾಕ್ ಡೌನ್ ಘೋಷಣೆ ಆಗಿತ್ತು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮೊದಲ ಹಂತದ ಲಾಕ್ ಡೌನ್ ಯಶಸ್ವಿಯಾಗಿರುವುದರಿಂದ, ದೇಶದ ಹಿತ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಎರಡನೇ ಹಂತದ ಲಾಕ್ ಡೌನ್ ಅನ್ನು ಮೇ 3 ರವರೆಗೂ ಮುಂದುವರೆಸಲಾಗಿದೆ.
ಜನರ ಜೀವದ ಜೊತೆಗೆ ಜೀವನೋಪಾಯ ಕೂಡ ಮುಖ್ಯ ಆಗಿರುವುದರಿಂದ ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೆಲವು ವಿನಾಯತಿಗಳನ್ನು ನೀಡಲಾಗಿದೆ. ಎರಡನೇ ಹಂತದ ಲಾಕ್ ಡೌನ್ ಹೇಗಿರಬೇಕು ಎಂಬುದರ ಬಗ್ಗೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ನೀಡಿದೆ.
ಹಾಗಾದ್ರೆ, ಏಪ್ರಿಲ್ 20 ರಿಂದ ಯಾವೆಲ್ಲ ಸಂಸ್ಥೆ ಮತ್ತು ಸೇವೆಗಳಿಗೆ ವಿನಾಯಿತಿ ಇರಲಿವೆ.? ಯಾವೆಲ್ಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ.? ಕರ್ನಾಟಕದಲ್ಲಿ ಲಾಕ್ ಡೌನ್ 2.0 ಹೇಗಿರಲಿದೆ.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ...

ಕರ್ನಾಟಕದಲ್ಲಿ ಕೊರೊನಾ ಆರ್ಭಟ ಹೇಗಿದೆ.?
ಕರ್ನಾಟಕದಲ್ಲಿ ಇಲ್ಲಿಯವರೆಗೂ 390 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 16 ಮಂದಿ ಮೃತಪಟ್ಟಿದ್ದು, 111 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಹಾಟ್ ಸ್ಪಾಟ್ ಗಳು ಯಾವುವು.?
ಕರ್ನಾಟಕದ ಎಂಟು ಜಿಲ್ಲೆಗಳನ್ನು ಕೋವಿಡ್-19 ಹಾಟ್ ಸ್ಪಾಟ್ (ರೆಡ್ ಝೋನ್) ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ. ಅವುಗಳು: ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತು ಧಾರವಾಡ.

ಬೆಂಗಳೂರಿನಲ್ಲಿ 38 ವಾರ್ಡ್ ಗಳು ಹಾಟ್ ಸ್ಪಾಟ್ (ರೆಡ್ ಝೋನ್).!
ಬೆಂಗಳೂರಿನಲ್ಲಿ 38 ವಾರ್ಡ್ ಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಅವುಗಳು: ಬೊಮ್ಮನಹಳ್ಳಿ ವಲಯದ2 ವಾರ್ಡ್ ಗಳು (ಸಿಂಗಸಂದ್ರ, ಬೇಗೂರು) ಮಹಾದೇವಪುರ ವಲಯದ 6 ವಾರ್ಡ್ ಗಳು (ಹಗದೂರು, ಗರುಡಾಚಾರ್ ಪಾಳ್ಯ, ವರ್ತೂರು, ಹೂಡಿ ಮತ್ತು ಹೊರಮಾವು, ರಾಮಮೂರ್ತಿನಗರ), ಪೂರ್ವ ವಲಯದ 9 ವಾರ್ಡ್ ಗಳು (ವಸಂತ ನಗರ, ಗಂಗಾ ನಗರ, ಲಿಂಗರಾಜಪುರ, ಜೀವನ್ ಭೀಮಾ ನಗರ, ರಾಧಾ ಕೃಷ್ಣ ಟೆಂಪಲ್, ಸಿ.ವಿ. ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾನಗರ, ಸಂಪಂಗಿ ರಾಮನಗರ), ದಕ್ಷಿಣ ವಲಯದ 12 ವಾರ್ಡ್ ಗಳು (ಗಿರಿನಗರ, ಆಡುಗೋಡಿ, ಸುದ್ದಗುಂಟೇ ಪಾಳ್ಯ, ಶಾಕಾಂಬರಿ ನಗರ, ಜೆ.ಪಿ.ನಗರ, ಗುರಪ್ಪನ ಪಾಳ್ಯ, ಬಾಪುಜಿ ನಗರ, ಹೊಸಹಳ್ಳಿ, ಸುಧಾಮ ನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ) ಪಶ್ಚಿಮ ವಲಯದ 7 ವಾರ್ಡ್ ಗಳು (ಅರಮನೆ ನಗರ, ನಾಗರಭಾವಿ, ನಾಗಾಪುರ, ಶಿವನಗರ, ಆಜಾದ್ ನಗರ, ಜಗಜೀವನ್ ರಾಮ್ ನಗರ, ಸುಭಾಷ್ ನಗರ) ಯಲಹಂಕದ 2 ವಾರ್ಡ್ ಗಳು (ಥಣಿಸಂದ್ರ ಮತ್ತು ಬ್ಯಾಟರಾಯನಪುರ)

ನಾನ್ ಹಾಟ್ ಸ್ಪಾಟ್ ಜಿಲ್ಲೆಗಳು (ಎಲ್ಲೋ ಝೋನ್)
ಕರ್ನಾಟಕದಲ್ಲಿ ನಾನ್ ಹಾಟ್ ಸ್ಪಾಟ್ ಪಟ್ಟಿಯಲ್ಲಿ (ಎಲ್ಲೋ ಝೋನ್) ಇರುವ ಜಿಲ್ಲೆಗಳು ಇಂತಿವೆ: ಬಳ್ಳಾರಿ, ದಾವಣಗೆರೆ, ಉಡುಪಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಗದಗ, ಕೊಡಗು, ಉತ್ತರ ಕನ್ನಡ, ವಿಜಯಪುರ ಮತ್ತು ಚಿಕ್ಕಬಳ್ಳಾಪುರ.

ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳು
ಕರ್ನಾಟಕದಲ್ಲಿ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳು ಇಂತಿವೆ: ಕೊಪ್ಪಳ, ರಾಯಚೂರು, ಯಾದಗಿರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಕೋಲಾರ ಮತ್ತು ಹಾಸನ.

ಏಪ್ರಿಲ್ 20 ರ ಬಳಿಕ ಎಲ್ಲೆಲ್ಲಿ ವಿನಾಯಿತಿ.?
ರೆಡ್ ಝೋನ್ ಅಥವಾ ಹಾಟ್ ಸ್ಪಾಟ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಏಪ್ರಿಲ್ 20 ರ ಬಳಿಕ ಲಾಕ್ ಡೌನ್ ನಿಯಮಗಳು ಕಠಿಣವಾಗಿರಲಿದ್ದು, ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಆದರೆ, ಎಲ್ಲೋ ಝೋನ್ ಮತ್ತು ಗ್ರೀನ್ ಝೋನ್ ನಲ್ಲಿ ಕೆಲವು ನಿಯಮಗಳು ಮಾತ್ರ ಸಡಿಲಗೊಳ್ಳಲಿದೆ.

ಏಪ್ರಿಲ್ 20 ರ ಬಳಿಕ ಏನೆಲ್ಲಾ ಇರುತ್ತದೆ.?
* ಆಸ್ಪತ್ರೆಗಳು, ಪಶು ವೈದ್ಯಕೀಯ ಆಸ್ಪತ್ರೆಗಳು, ಔಷಧಾಲಯಗಳು, ಜನ ಔಷಧಿ ಕೇಂದ್ರ, ಆಯುಷ್, ಪ್ರಯೋಗಾಲಯಗಳು, ಆಂಬ್ಯುಲೆನ್ಸ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರೆಯಲಿದೆ.
* ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳು, ಎಂ.ಎಸ್.ಪಿ ಸೇರಿದಂತೆ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ತೊಡಗಿರುವ ಏಜೆನ್ಸಿಗಳು, ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕಸ್ಟಮ್ ನೇಮಕಾತಿ ಕೇಂದ್ರಗಳು, ಎಪಿಎಂಸಿ ಮತ್ತು ಮಂಡಿಗಳು, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು ಕಾರ್ಯನಿರ್ವಹಿಸಲಿದೆ.
* ಮೀನುಗಾರಿಕೆ, ಜಲಚರ ಸಾಕಣೆ ಉದ್ಯಮ, ಮೊಟ್ಟೆ ಕೇಂದ್ರ, ಫೀಡ್ ಸಸ್ಯಗಳು, ವಾಣಿಜ್ಯ ಅಕ್ವೇರಿಯಾ ಕಾರ್ಯಗಳಿಗೆ ವಿನಾಯತಿ ನೀಡಲಾಗಿದೆ.
* ಶೇ. 50 ರಷ್ಟು ಕೆಲಸಗಾರರನ್ನು ಬಳಸಿಕೊಂಡು ಕಾಫಿ, ಟೀ ಮತ್ತು ರಬ್ಬರ್ ತೋಟದ ಕೆಲಸಗಳನ್ನು ನಿರ್ವಹಿಸಬಹುದು.
* ಪಶು ಸಂಗೋಪನೆ, ಪೌಲ್ಟ್ರಿ, ಗೋಶಾಲೆಗಳು ಕಾರ್ಯ ನಿರ್ವಹಿಸಲಿವೆ.
* ಬ್ಯಾಂಕುಗಳು, ವಿಮಾ ಕಚೇರಿಗಳು, ಅಂಚೆ ಕಚೇರಿಗಳು, ಪಿಂಚಣಿ, ಇ.ಪಿ.ಎಫ್.ಎ ಸೇವೆಗಳು ಲಭ್ಯವಿರಲಿದೆ.
* ಅಂಗನವಾಡಿಯಿಂದ 15 ದಿನಗಳಿಗೊಮ್ಮ ಆಹಾರ ವಿತರಣೆ ಆಗಲಿದೆ.
* ಆನ್ ಲೈನ್ ಕಲಿಕೆ ಮತ್ತು ದೂರ ಶಿಕ್ಷಣಕ್ಕೆ ಮಾತ್ರ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕಿದೆ.
* ಪೆಟ್ರೋಲ್ ಪಂಪ್ ಗಳು, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಅನಿಲ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳಿಗೆ ವಿನಾಯಿತಿ ನೀಡಲಾಗಿದೆ.

ಏಪ್ರಿಲ್ 20 ರ ಬಳಿಕ ಯಾವೆಲ್ಲ ಸಂಸ್ಥೆಗಳು ಕೆಲಸ ಮಾಡಲಿವೆ.?
* ಪತ್ರಿಕೆ, ಎಲೆಕ್ಟ್ರಾನಿಕ್ ಮೀಡಿಯಾ, ಬ್ರಾಡ್ ಕಾಸ್ಟಿಂಗ್, ಡಿ.ಟಿ.ಎಚ್, ಕೇಬಲ್ ಸರ್ವೀಸ್ ಇರಲಿದೆ.
* ಸರ್ಕಾರಿ ಚಟುವಟಿಕೆಗೆ ಮಾತ್ರ ಡೇಟಾ ಮತ್ತು ಕಾಲ್ ಸೆಂಟರ್ ಕೆಲಸ ಮಾಡಲಿವೆ.
* ಈ-ಕಾಮರ್ಸ್ ಕಂಪನಿ, ಕೊರಿಯರ್ ಸೇವೆಗಳಿಗೂ ವಿನಾಯಿತಿ ನೀಡಲಾಗಿದೆ.
* ಎಲೆಕ್ಟ್ರೀಷಿಯನ್, ಪ್ಲಂಬರ್, ಮೋಟಾರು ಮೆಕ್ಯಾನಿಕ್, ಕಾರ್ಪೆಂಟರ್ ಕೆಲಸ ಮಾಡಬಹುದು.

ಮೇ 3 ರವರೆಗೂ ಯಾವೆಲ್ಲ ಸೇವೆ ಸ್ಥಗಿತ.?
* ವೈದ್ಯಕೀಯ ಮತ್ತು ಭದ್ರತೆ ಕಾರಣಗಳಿಗೆ ಹೊರತು ಪಡಿಸಿ ಎಲ್ಲಾ ದೇಶೀಯ ಮತ್ತು ವಿದೇಶಿ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ.
* ಟ್ರೇನ್, ಮೆಟ್ರೋ ರೈಲು, ಬಸ್ ಸೇರಿದಂತೆ ಎಲ್ಲಾ ಸಾರಿಗೆ ಸೇವೆ ಬಂದ್.
* ರಾಜ್ಯ-ರಾಜ್ಯಗಳ ನಡುವೆ, ಜಿಲ್ಲೆ-ಜಿಲ್ಲೆಗಳ ನಡುವಿನ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.
* ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಬಂದ್.
* ಟ್ಯಾಕ್ಸಿ, ಆಟೋ, ಸೈಕಲ್ ರಿಕ್ಷಾ, ಕ್ಯಾಬ್ ಸೇವೆ ಲಭ್ಯವಿರುವುದಿಲ್ಲ.
* ಚಿತ್ರಮಂದಿರ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಫೋರ್ಟ್ಸ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಆಡಿಟೋರಿಯಂಗಳನ್ನು ಮುಚ್ಚಲ್ಪಟ್ಟಿರುತ್ತವೆ.
* ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಗಳು
* ತಂಬಾಕು, ಗುಟ್ಕಾ, ಮದ್ಯ ಮಾರಾಟಕ್ಕೆ ಹೇರಿರುವ ನಿರ್ಬಂಧ ಮುಂದುವರೆಯಲಿದೆ.
* ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವಂತಿಲ್ಲ.
* ಅಂತ್ಯಕ್ರಿಯೆ ಮತ್ತು ಮದುವೆಯಲ್ಲಿ ಹೆಚ್ಚು ಜನ ಸೇರುವಂತಿಲ್ಲ.
* ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.
* ಆಫೀಸ್ ಗಳಲ್ಲಿ ಕಡ್ಡಾಯವಾಗಿ ಸ್ಕ್ರೀನಿಂಗ್ ವ್ಯವಸ್ಥೆ ಇರಬೇಕು. ಶಿಫ್ಟ್ ಗಳ ನಡುವೆ 1 ಗಂಟೆ ಅಂತರ ಇರಬೇಕು.
* ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಆದೇಶ ಹಿಂಪಡೆದ ಸಿಎಂ
ಕಳೆದ ಶನಿವಾರ (ಏಪ್ರಿಲ್ 18) ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಿದ್ದರು. ಏಪ್ರಿಲ್ 20ರ ಸೋಮವಾರದಿಂದ ಐಟಿ-ಬಿಟಿ ಕಂಪನಿಗಳಲ್ಲಿ ಶೇ 33ರಷ್ಟು ಉದ್ಯೋಗಿಗಳು ಕೆಲಸ ಮಾಡುವುದು, ಕೆಲಸಕ್ಕೆ ಹೋಗಲು ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈ ಆದೇಶದ ಬಗ್ಗೆ ಹಲವು ಗೊಂದಲ ಉಂಟಾದ ಬಳಿಕ ಅದನ್ನು ವಾಪಸ್ ಪಡೆಯಲಾಗಿತ್ತು.

ಹಾಟ್ ಸ್ಪಾಟ್ ಎಂದರೇನು.?
ಯಾವುದೇ ಪ್ರದೇಶದಲ್ಲಿ ಅಥವಾ ಜಿಲ್ಲೆಯಲ್ಲಿ 6 ಕ್ಕಿಂತ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾದರೆ, ಅಂತಹ ಪ್ರದೇಶ/ಜಿಲ್ಲೆಯನ್ನ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಹಾಟ್ ಸ್ಪಾಟ್ ಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು, ಅಲ್ಲಿ ನೆಲೆಸಿರುವ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲೇ ಇರಬೇಕು.

ಹಾಟ್ ಸ್ಪಾಟ್ ಪ್ರದೇಶದಲ್ಲಿ ಏನೆಲ್ಲ ನಿಷಿದ್ಧ.?
ಹಾಟ್ ಸ್ಪಾಟ್ ಏರಿಯಾದ ಒಳಗೆ ಹೋಗಲು ಅಥವಾ ಹೊರಗೆ ಬರಲು ಯಾರಿಗೂ ಅವಕಾಶವಿಲ್ಲ. ಆಹಾರ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮಾಡುವುದಕ್ಕೂ ಹಾಟ್ ಸ್ಪಾಟ್ ಏರಿಯಾದಲ್ಲಿ ನಿಷೇಧವಿದ್ದು, ಮನೆ ಬಾಗಿಲಿಗೆ ವಸ್ತುಗಳನ್ನು ಸರ್ಕಾರ ಪೂರೈಸುತ್ತದೆ. ಹಾಟ್ ಸ್ಪಾಟ್ ಪ್ರದೇಶಗಳ ಒಳಗೆ ಮೀಡಿಯಾದವರಿಗೂ ನಿಷಿದ್ಧ.

ಹಾಟ್ ಸ್ಪಾಟ್ ನಲ್ಲಿ ಯಾವುದಕ್ಕೆ ಅವಕಾಶವಿದೆ.?
ಹಾಟ್ ಸ್ಪಾಟ್ ಪ್ರದೇಶಗಳ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಿದೆ. ಆಂಬ್ಯುಲೆನ್ಸ್ ಸೇರಿದಂತೆ ವೈದ್ಯಕೀಯ ಎಮರ್ಜೆನ್ಸಿ ಸೇವೆಗಳಿಗೆ ಮಾತ್ರ ಹಾಟ್ ಸ್ಪಾಟ್ ಪ್ರದೇಶದಲ್ಲಿ ಅವಕಾಶ ಇದೆ. ಸ್ಯಾನಿಟೈಸೇನ್ ಕೆಲಸ ಇಲ್ಲಿ ಆಗಾಗ ನಡೆಯುತ್ತಿರುತ್ತದೆ.

ಕಂಟೇನ್ಮೆಂಟ್ ಝೋನ್ ಎಂದರೇನು.?
ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಿರ್ದಿಷ್ಟ ಜಾಗಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ. ಯಾವುದೇ ನಿರ್ದಿಷ್ಟ ರಸ್ತೆಯಲ್ಲಿ ಒಂದು ಸೋಂಕಿನ ಪ್ರಕರಣ ಕಂಡುಬಂದರೂ, ಆ ರಸ್ತೆಯನ್ನು ಕಂಟೇನ್ಮೆಂಟ್ ಝೋನ್ ಪಟ್ಟಿಗೆ ಸೇರಿಸಲಾಗುತ್ತದೆ. ಇಲ್ಲಿ ಸ್ಥಳೀಯವಾಗಿ ಸೋಂಕು ಹರಡುವುದನ್ನು ತಡೆಯಲು ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ.












Click it and Unblock the Notifications