ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?
Recommended Video
ಬೆಂಗಳೂರು, ಆಗಸ್ಟ್ 05 : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕುರಿತು ಘೋಷಣೆ ಮಾಡಿದರು. ದೇಶಾದ್ಯಂತ ಕೇಂದ್ರ ಸರ್ಕಾರದ ತೀರ್ಮಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
370 ಮತ್ತು 35ಎ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕರ್ನಾಟಕದ ವಿವಿಧ ರಾಜಕೀಯ ನಾಯಕರು ಸಹ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕರು ಕೇಂದ್ರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ಉಂಟಾಗುವ ನಿರೀಕ್ಷೆ ಇದ್ದು, ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಕಳೆದ ವಾರದಿಂದಲೇ ಸೇನೆಯನ್ನು ನಿಯೋಜನೆ ಮಾಡಲಾಗಿತ್ತು. ಇಂದು ಹೆಚ್ಚುವರಿಯಾಗಿ 8 ಸಾವಿರ ಸೈನಿಕರನ್ನು ಕಳುಹಿಸಿಕೊಡಲಾಗಿದೆ.

ಡಿ. ವಿ. ಸದಾನಂದ ಗೌಡ ಸಂತಸ
ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸಂಸತ ವ್ಯಕ್ತಪಡಿಸಿದರು. ಸರ್ದಾರ್ ಪಟೇಲ್, ಡಾ. ಶಾಮ ಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಅವರ ತ್ಯಾಗಗಳಿಗೆ ಇದು ಸಮರ್ಪಣೆ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರ ಚೆಲ್ಲಾಟವಾಡುತ್ತಿದೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಟ್ವೀಟ್ ಮಾಡಿದ್ದು, "ಕಾಶ್ಮೀರದಲ್ಲಿ ಕೇಂದ್ರ ಅತಿಕ್ರಮಣ ಮಾಡಿ ದುಸ್ಸಾಹಸ ಮಾಡಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ. ತುರ್ತು ಪರಿಸ್ಥಿತಿ ವಾತಾವರಣ ಸೃಷ್ಟಿಸಿ ದೇಶದ ಜನರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ" ಎಂದು ದೂರಿದ್ದಾರೆ.

ಇತಿಹಾಸ ಬರೆದಿದ್ದಾರೆ
ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದು, ಭಾರತದ ಕಿರೀಟ "ಜಮ್ಮು-ಕಾಶ್ಮೀರ" ಇನ್ನು ಮುಂದೆ ಶುದ್ಧ ಭಾರತೀಯತೆಯನ್ನೊತ್ತು ಮಿನುಗಲಿದೆ. ಇಟ್ಟ ಹೆಜ್ಜೆ-ಕೊಟ್ಟ ಮಾತಿನಂತೆ ನಡೆದ 'ಮೋದಿ-ಶಾ' ಜೋಡಿ ಭಾರತೀಯರ ಬಹುದಿನದ ಬೇಡಿಕೆಯನ್ನು ಈಡೇರಿಸಿ ಇತಿಹಾಸ ಬರೆದಿದ್ದಾರೆ. 73ನೇಸ್ವಾತಂತ್ರೋತ್ಸವಕ್ಕೆ 'ರೋಮಾಂಚನದ ಕೊಡುಗೆ 'ಸಮರ್ಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಟ್ವೀಟ್
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದು, 'ತೆಂಗಿನ ತಿರುಳಿನಿಂದ ಹಿಡಿದು ಕೇಸರಿಯ ಎಳೆಯವರೆಗೆ ನಾವೀಗ ಒಂದು. ಅಭಿನಂದನೆಗಳು' ಎಂದು ಹೇಳಿದ್ದಾರೆ. ಕಾಶ್ಮೀರ ನಮ್ಮದು ಎಂದು ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

ಇತಿಹಾಸದ ಮಹತ್ವದ ದಿನ
ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, "ಇಂದು ಭಾರತದ ಇತಿಹಾಸದ ಮಹತ್ವದ ದಿನ. ಹುತಾತ್ಮ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಇಂದು ಶಾಂತಿ ದೊರಕುತ್ತದೆ" ಎಂದು ಹೇಳಿದ್ದಾರೆ.











Click it and Unblock the Notifications