ಎಫ್‌ಐಆರ್ ರದ್ದು ಕೋರಿ ಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ
ಬೆಂಗಳೂರು, ಅಕ್ಟೋಬರ್ 30: ತಮ್ಮ ವಿರುದ್ಧ ನಟಿ ಶ್ರುತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಹೇರಲಾರಿಗಿರುವ ಎಫ್‌ಐಆರ್ ಅನ್ನು ರದ್ದು ಮಾಡಬೇಕು ಎಂದು ನಟ ಅರ್ಜುನ್ ಸರ್ಜಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಅವರು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ #ಮಿಟೂ ಅಭಿಯಾನದಡಿ ಆರೋಪ ಮಾಡಿದ್ದರು. ಆ ನಂತರ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹೈಕೋರ್ಟ್ ಮೊರೆ ಹೋಗಿರುವ ಅರ್ಜುನ್ ಸರ್ಜಾ, ಶ್ರುತಿ ಅವರು ತಮ್ಮ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದಕ್ಕೂ, ಠಾಣೆಯಲ್ಲಿ ನೀಡಿದ ದೂರಿಗೂ ಬಹಳ ಅಂತರವಿದೆ ಅಲ್ಲದೆ ದೂರು ಸುಳ್ಳುಗಳಿಂದ ತುಂಬಿದೆ ಹಾಗಾಗಿ ಎಫ್‌ಐಆರ್ ಅನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶ್ರುತಿ ಮಾಡಿರುವ ಆರೋಪಗಳೇನು?
ಪೊಲೀಸರಿಗೆ ಶ್ರುತಿ ಹರಿಹರನ್ ನೀಡಿರುವ ದೂರಿನಲ್ಲಿ ಹಲವು ಆರೋಪಗಳನ್ನು ಸರ್ಜಾ ಮೇಲೆ ಮಾಡಿದ್ದಾರೆ. ದೇವನಹಳ್ಳಿ ಸಿಗ್ನಲ್ ಬಳಿ ತಮ್ಮನ್ನು ಏಕಾಂತ ಸ್ಥಳಕ್ಕೆ ಕರೆದರು ಎಂದು ಹಾಗೂ ಯುಬಿಸಿಟಿಯಲ್ಲಿ ತಮ್ಮನ್ನು ವಿನಾ ಕಾರಣ ತಬ್ಬಿಕೊಂಡು ಕೆಟ್ಟದಾಗಿ ವರ್ತಿಸಿದರೆಂದು ಹಾಗೂ ತಮಗೆ ಬೆದರಿಕೆ ಹಾಕಿದರೆಂದು ಶ್ರುತಿ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಮಹಜರ್ ಮಾಡಲಾಗಿದೆ
ಶ್ರುತಿ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶ್ರುತಿ ಅವರು ದೂರಿನಲ್ಲಿ ಹೇಳಿದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ ಮಹಜರ್ ಮಾಡಿದ್ದಾರೆ. ಅಲ್ಲದೆ ಶ್ರುತಿ ಅವರು ಉಲ್ಲೇಖಿಸಿರುವ ಸಾಕ್ಷಿಗಳಲ್ಲಿ ಕೆಲವರನ್ನು ಕರೆದು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಮಾನನಷ್ಟ ಮೊಕದ್ದಮೆ
ಶ್ರುತಿ ಅವರ ಮೇಲೆ ಅರ್ಜುನ್ ಸರ್ಜಾ ಅವರು ಸಹ ಐದು ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಶ್ರುತಿ ಅವರು ಸಮಯ ಕೇಳಿದ ಕಾರಣ ವಿಚಾರಣೆ ಮುಂದಕ್ಕೆ ಹೋಗಿದೆ.

ಶ್ರುತಿಗೆ ಬೆದರಿಕೆ ಕರೆಗಳು
ಅರ್ಜುನ್ ಸರ್ಕಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿವೆಯಂತೆ. ಅಲ್ಲದೆ ಅವರ ಚಾರಿತ್ರ್ಯ ಹಾನಿ ಮಾಡುವ ಕಾರ್ಯವೂ ಸಾಮಾಜಿಕ ಜಾಲತಾಣದಲ್ಲಿ ನಡೆದಿವೆಯಂತೆ ಹೀಗೆಂದು ಅವರ ವಕೀಲರು ಹೇಳಿದ್ದಾರೆ.












Click it and Unblock the Notifications