ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ವಲ್ಲ,ಆರೋಗ್ಯವರ್ಧಕವೆಂದು ಸಾಬೀತು: ಆರಗ ಜ್ಞಾನೇಂದ್ರ
ಸುಪ್ರೀಂ ಕೋರ್ಟಿನಲ್ಲಿ ಅಡಿಕೆ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತು ಕಂಡು ಬಂದಿರುವ ಸಂಶೋಧನಾ ಫಲಿತಾಂಶ ವರದಿಗಳನ್ನು ಸಲ್ಲಿಸಲಾಗುವುದು ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದರು.
ಬೆಂಗಳೂರು, ಫೆಬ್ರವರಿ 14: ಅಡಿಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ಞರ ಸಂಶೋಧನಾ ವರದಿಯಿಂದ ಸಾಬೀತಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಯ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಪ್ರತಿಷ್ಠಿತ ಎಂ ಎಸ್ ರಾಮಯ್ಯ ವಿಶ್ವ ವಿದ್ಯಾಲಯದ ಸಂಸ್ಥೆ ಈ ಕುರಿತು ಸಂಶೋಧನೆ ನಡೆಸಿದ್ದು, ಸದ್ಯದಲ್ಲಿಯೇ ಅಂತರಾಷ್ಟ್ರೀಯ ಮಾನ್ಯತೆ ಪಡೆದ ನಿಯತಕಾಲಿಕಾದಲ್ಲಿ ಪ್ರಕಟಣೆ ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಅಡಿಕೆ ತೀವ್ರತರದ ಗಾಯವನ್ನು ಗುಣಪಡಿಸುವ, ಮಧು ಮೇಹ ಸಮಸ್ಯೆಯ ನಿಯಂತ್ರಣ, ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಶಾದಾಯಿಕ ಫಲಿತಾಂಶಗಳು ಬಂದಿವೆ ಎಂದು ಕಲಾಪದ ವೇಳೆ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನಲ್ಲಿ ಅಡಿಕೆ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತು ಕಂಡು ಬಂದಿರುವ ಸಂಶೋಧನಾ ಫಲಿತಾಂಶ ವರದಿಗಳನ್ನು ಸಲ್ಲಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಅಡಿಕೆ ಟಾಸ್ಕ್ ಫೋರ್ಸ್ ನ ಮಹತ್ವದ ಸಭೆ
ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಮಹತ್ವದ ಸಭೆ ನಡೆಸಿದ್ದು, ರಾಜ್ಯದಲ್ಲಿ ಅಡಿಕೆ ಬೆಳೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳು ಅಡಿಕೆ ಮಾರುಕಟ್ಟೆ ಎದುರಿಸುತ್ತಿರುವ ಸ್ಥಿತ್ಯಂತರಗಳು ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲಾಯಿತು.

ಇನ್ನೂ ರಾಜ್ಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಉಪ ಕುಲಪತಿ, R C ಜಗದೀಶ್ ಹಾಗೂ ರಾಜ್ಯ ಅಡಿಕೆ ಕಾರ್ಯಪಡೆಯ ರಾಜ್ಯ ಮಂಡಳಿಯ ಹಿರಿಯ ಸದಸ್ಯರು ಸೇರಿದಂತೆ ರಾಜ್ಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications