ಆರ್‌ಟಿಐನಿಂದ ಕಿರುಕುಳ: ಹೈಕೋರ್ಟ್ ಮೊರೆ ಹೋದ ಅರ್ಚಕರು!
ಬೆಂಗಳೂರು, ಜೂನ್ 04: ದೇಗುಲದಲ್ಲಿ ಸಿದ್ದಪಡಿಸುವ ಪ್ರಸಾದಕ್ಕೆ ಎಷ್ಟು ಪ್ರಮಾಣದ ಸಕ್ಕರೆ, ಎಷ್ಟು ಅಕ್ಕಿ ಬಳಸುತ್ತೀರಿ, ದಿನಕ್ಕೆ ಎಷ್ಟು ಅರ್ಚನೆ ಮಾಡುತ್ತೀರಿ ಎಂಬ ಪ್ರಶ್ನೆಗಳ ಮೂಲಕ ಆರ್‌ಟಿಐ ಕಾಯಿದೆಯಡಿ ಪ್ರಶ್ನೆಗಳನ್ನು ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಅರ್ಚಕರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ದಿನ ನಿತ್ಯದ ನೂರಾರು ಪ್ರಶ್ನೆಗಳನ್ನು ಕೇಳುವ ಮೂಲಕ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಹಿಂಸೆಗೆ ಕಾರಣವಾಗುವ ಮಾಹಿತಿ ಹಕ್ಕು ಕಾಯಿದೆಯಿಂದ ದೇವಾಲಯಗಳನ್ನು ಹೊರಗಿಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಪೂಜಾರಿಗಳು, ಆಗಮಿಕರು ಮತ್ತು ಅರ್ಚಕರ ಸಂಘ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿತು.
ನ್ಯಾಯಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ. ಸಾಮಾನ್ಯವಾಗಿ ಈ ರೀತಿಯಲ್ಲಿ ಆದೇಶಿಸುವುದಕ್ಕೂ ಅವಕಾಶವಿಲ್ಲ. ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರ, ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬುದು ನಮಗೆ ಗೊತ್ತಾಗುವುದಿಲ್ಲ. ಪ್ರತಿ ಪ್ರಕರಣವನ್ನು ಪರಿಶೀಲಿಸಲಾಗುವುದಿಲ್ಲ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಕಾಯಿದೆ ದುರ್ಬಳಕೆ: ಅರ್ಜಿದಾರರ ಪರ ವಕೀಲರು, ಪ್ರಸಾದ ಸಿದ್ದಪಡಿಸುವ ಸಂದರ್ಭದಲ್ಲಿ ಎಷ್ಟು ಪ್ರಮಾಣದ ಸಕ್ಕರೆ ಬಳಕೆ ಮಾಡಿಕೊಳ್ಳಲಾಗುತ್ತಿದೆ?. ಎಷ್ಟು ಅಕ್ಕಿ ಬಳಸಲಾಗುತ್ತಿದೆ?. ದಿನಕ್ಕೆ ಎಷ್ಟು ಅರ್ಚನೆಗಳನ್ನು ಮಾಡಲಾಗುತ್ತಿದೆ? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆಮೂಲಕ ಕೆಲವು ಜನ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಅರ್ಚಕರಿಗೆ ಪ್ರಾಯೋಗಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ಅಲ್ಲದೆ, ದೇವಾಲಯಗಳಿಗೆ ಎಲ್ಲವನ್ನು ಭಕ್ತಾದಿಗಳು ದಾನ ಮಾಡಲಾಗಿರುತ್ತದೆ. ಸರ್ಕಾರ ಒಂದು ರೂ.ಗಳನ್ನೂ ಪಾವತಿ ಮಾಡಲಾಗುತ್ತಿಲ್ಲ, ಆದರೂ ಮಾಹಿತಿ ಕೇಳುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಈ ರೀತಿಯ ಅರ್ಜಿಗಳ ಸಲ್ಲಿಕೆಗೆ ಕಾರಣವೇ ಇಲ್ಲ. ಆದರೂ ಅರ್ಜಿ ಸಲ್ಲಿಕೆಯಾಗಿದೆ. ಈ ರೀತಿಯಲ್ಲಿ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ತಪ್ಪು ಎಂದರೆ ಹೇಗೆ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿಯ ಸಾರಾಂಶ: ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅರ್ಚಕರು, ವೇದ ವಿದ್ವಾಂಸರು, ಪುರೋಹಿತರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ವೈಯಕ್ತಿಕ ಮಾಹಿತಿ ಕೇಳುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ, ಹಣ ಮತ್ತು ಬೆಲ ಬಾಳುವ ವಸ್ತುಗಳಿಗೆ ಬೇಡಿಕೆ ಇಡುತ್ತಾರೆ. ನೀಡದಿದಲ್ಲಿ ದೇವರಿಗೆ ಮಾಡುವ ಹೋಮ, ಅಭಿಷೇಕಗಳನ್ನು ಮಾಡಿಕೊಡುವಂತೆ ಕೋರುತ್ತಾರೆ.
ಅಲ್ಲದೆ, ದೇವಾಲಯಗಳು ಸಾರ್ವಜನಿಕ ಪ್ರಾಧಿಕಾರಗಳಲ್ಲ ಎಂದು ಘೋಷಿಸಬೇಕು. ಆ ಮೂಲಕ ದೇವಾಲಯಗಳನ್ನು ಕಾಯಿದೆಯಿಂದ ಹೊರಗುಳಿಸಬೇಕು. ಅಲ್ಲದೆ, ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ಒದಗಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಾಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಸಂಬಂಧ ರಾಜ್ಯ ಸರ್ಕಾರ 2007ರ ಜೂನ್ 16 ರಂದು ಮತ್ತು 2014ರ ಪೆಬ್ರವರಿ 3 ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು ರದ್ದುಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications