ಪ್ರತ್ಯೇಕ ರಾಜ್ಯ : ಕಾಂಗ್ರೆಸ್ ಶಾಸಕನ ಅಮಾನತಿಗೆ ಶಿಫಾರಸು
ಬೆಂಗಳೂರು, ಏ. 22 : 'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು' ಎಂದು ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ಅವರಿಗೆ ಅಮಾನತಿನ ಭೀತಿ ಎದುರಾಗಿದೆ. ಪಕ್ಷದ ನೋಟಿಸ್‌ಗೆ ಉತ್ತರ ನೀಡಿದ ಪಾಟೀಲರನ್ನು ಅಮಾತನು ಮಾಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಪ್ಪಾಜಿ ನಾಡಗೌಡ ಅವರು ಬುಧವಾರ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲರನ್ನು ಅಮಾನತು ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಶಿಫಾರಸು ಮಾಡಿದ್ದಾರೆ. [ಪಾಟೀಲರಿಗೆ ಶೋಕಾಸ್ ನೋಟಿಸ್]

ಏ.8ರಂದು ಎ.ಎಸ್.ಪಾಟೀಲ ಅವರು 'ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಆದ್ದರಿಂದ ಪ್ರತ್ಯೇಕ ರಾಜ್ಯ ಮಾಡಿ' ಎಂಬ ಬೇಡಿಕೆ ಇಟ್ಟಿದ್ದರು. ಈ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ತಕ್ಷಣ ಹೇಳಿಕೆ ವಾಪಸ್ ಪಡೆಯಿರಿ ಎಂದು ಪಾಟೀಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. [ಉತ್ತರ ಕರ್ನಾಟಕ ಪತ್ಯೇಕ ರಾಜ್ಯ, ಇದು ಕತ್ತಿ ಬೇಡಿಕೆಯಲ್ಲ!]
ಒಂದು ವಾರವಾದರೂ ಅವರು ಶೋಕಾಸ್ ನೋಟಿಸ್‌ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಮತ್ತೊಂದು ನೋಟಿಸ್ ನೀಡಲಾಗಿತ್ತು. ಎರಡೂ ನೋಟಿಸ್‌ಗೂ ಉತ್ತರ ನೀಡದೆ, ಹೇಳಿಕೆಯನ್ನು ವಾಪಸ್ ಪಡೆಯದೆ ಪಾಟೀಲರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಆದ್ದರಿಂದ ಅವರನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ.
ಸರ್ಕಾರದ ವಿರುದ್ಧ ಅಸಮಾಧಾನ : ಸೋವಮಾರ ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ್ದ ಎ.ಎಸ್.ಪಾಟೀಲರು ವಿಧಾನಸೌಧದಲ್ಲಿಯೂ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಹೇಳಿಕೆಗಳ ಹಿನ್ನಲೆಯಲ್ಲಿ ಈ ಶಿಫಾರಸು ಸಲ್ಲಿಕೆಯಾಗಿದೆ.












Click it and Unblock the Notifications