Aparna: ಗೆಸ್ಟ್ ಚೇಂಜ್.. ಸ್ಟೇಜ್ ಚೇಂಜ್.. ಪ್ಲೇಸ್ ಚೇಂಜ್.. ಆಂಕರ್ ಮಾತ್ರ ಸೇಮ್.. ಒನ್ ಆಂಡ್ ಓನ್ಲಿ ವರಲಕ್ಷ್ಮಿ!
ಕಳೆದ ಮೂರು ದಶಕಗಳಿಂದ ಕರ್ನಾಟಕ ಅದೆಷ್ಟೋ ಕಾರ್ಯಕ್ರಮಗಳು ನಡೆದಿವೆ ಎಂಬ ಬಗ್ಗೆ ಯಾರಿಗೂ ಇರಲಿಕ್ಕಿಲ್ಲ. ಈ ಮೂರು ದಶಕದಲ್ಲಿ ಅದೆಷ್ಟೋ ಜನ ಮುಖ್ಯಮಂತ್ರಿಗಳನ್ನು ನಾಡು ಕಂಡಿದೆ. ಸರ್ಕಾರಿ ಹಾಗೂ ಖಾಸಗಿ ಸಮಾರಂಭಗಳ ದಿನಕ್ಕೊಂದು ನಡೆಯುತ್ತಿದ್ದವು. ವೇದಿಕೆಯಲ್ಲಿ ಅತಿಥಿಗಳು, ಪ್ಲೇಸ್ ಎಲ್ಲವೂ ಬದಲಾಗುತ್ತಲೇ ಇದ್ದರು. ಆದರೆ ನಿರೂಪಕಿ ಮಾತ್ರ ಒನ್ ಎಂಡ್ ಓನ್ಲಿ ಅಪರ್ಣಾ. ಇನ್ನು ನೆನಪು ಮಾತ್ರ..
ಕಾರ್ಯಕ್ರಮ ಆರಂಭವಾಗುವ ಮುನ್ನವೇ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗಳಿಸುತ್ತಾ, ಮುಗಳ್ ನಗೆಯಿಂದ ಮಾತನಾಡುತ್ತಲೇ ಸಭೀಕರನ್ನು ತನ್ನತ್ತ ಕೇಂದ್ರಿ ಕರಿಸಿಕೊಳ್ಳುವ ಧ್ವನಿ ಅಪರ್ಣಾ ಅವರಿಗಿತ್ತು.. ಅನುಭವದ ಪಾಠ ಶಾಲೆಯಲ್ಲಿ ಪಿಎಚ್‌ಡಿ ಪಡೆದ ಅವರು, ಅಪ್ರತಿಮ ನಿರೂಪಕಿ.. ಯಾವ ಶಬ್ದಕ್ಕೆ ಎಷ್ಟು ತೂಕ ಇರುತ್ತದೆ ಎಂದು ಇವರನ್ನೇ ನೋಡಿ ಕಲಿಯಬೇಕು.

ಕಂಚಿನ ಕಂಠದ ಒಡತಿ
ಅಪರ್ಣಾ ಅವರ ಧ್ವನಿ ಎಂದಿಗೂ ಕನ್ನಡಿಗರಿಗೆ ಬೇಸರವನ್ನು ತರಲೇ ಇಲ್ಲ. ಕಾಲ ಬದಲಾದಂತೆ ತನ್ನ ನಿರೂಪಣಾ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು, ಮೊದಲಿಗಿಂತಲೂ ಹೆಚ್ಚಿನ ಜನಪ್ರೀಯತೆ ಗಳಿಸಿದ್ದರು. ಖಾಸಗಿ ಬದುಕು ಹಾಗೂ ಸಾಮಾಜಿಕ ಬದುಕನ್ನು ಎರಡನ್ನೂ ಒಟ್ಟಾಗಿ ನಡೆಸುವ ಕ್ಷಮತೆ ಅವರದ್ದಾಗಿತ್ತು. ಇವರ ಸ್ಪಷ್ಟ ಕನ್ನಡ ಉಚ್ಛಾರವನ್ನು ಕಂಡೇ ಅದೆಷ್ಟೋ ಜನ ಫಿದಾ ಆಗಿದ್ದರು. ತನಗೆ ಇಷ್ಟು ಜನಪ್ರಿಯತೆ ಇದ್ದರೂ, ಅವರು ಎಂದಿಗೂ ಅದನ್ನು ತಲೆಯ ಮೇಲೆ ಏರಿಸಿಕೊಳ್ಳಲೇ ಇಲ್ಲ.
ನಿರೂಪಣೆಯ ಕೆಲಸ ಹೆಚ್ಚಾಗಿ ಸಿಗುತ್ತಿದ್ದಂತೆ ಅಪರ್ಣಾ ಅವರ ಜ್ಞಾನ ಸಹ ಬೆಳೆಯುತ್ತಲೇ ಸಾಗಿತು. ಆರಂಭದಲ್ಲಿ ಕೆಲವೊಮ್ಮೆ ನಿರೂಪಣೆ ಮಾಡುವಾಗ ಎಡವಿದ್ದು ಬಿಟ್ಟರೆ, ನಂತರ ಅವರು ಎಡವಿದ್ದೇ ಇಲ್ಲವೇ ಇಲ್ಲ. ಓದಿನ ಸಂಪೂರ್ಣ ಲಾಭವನ್ನು ಪಡೆದು ವೇದಿಕೆಯ ಮೇಲೆ ಅರಳು ಹುರಿದಂತೆ ಕನ್ನಡವನ್ನು ಮಾತನಾಡುತ್ತಿದ್ದರೆ, ಇವರಿಂದ ಪ್ರೇರಣೆ ಪಡೆದವರು ಅದೆಷ್ಟೋ ಜನ. ಈಗಿನ ಎಲ್ಲ ನಿರೂಪಕಿಯರಿಗೆ ಅಪರ್ಣಾ ಮಾದರಿ.
ನಿರೂಪಣೆ, ಬಣ್ಣದ ಲೋಕ
ಅಪರ್ಣಾ ನಿರೂಪಣೆಯ ಜೊತೆ ಬಣ್ಣದ ಲೋಕದ ವ್ಯಾಮೋಹವನ್ನು ಬಿಟ್ಟಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ, ಬಣ್ಣ ಹಚ್ಚಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು. ಕಿರುತೆರೆಯಲ್ಲಿ ಸಿಕ್ಕ ಚಿಕ್ಕ ಚಿಕ್ಕ ಅವಕಾಶವನ್ನೇ ಎರಡೂ ಕೈಯಲ್ಲಿ ಬಳಸಿಕೊಂಡು ಅಪ್ರತಿಮ ಸಾಧನೆ ಮಾಡಿದ ಸಾಧಕಿ ಅಪರ್ಣಾ. ಮಜಾ ಟಾಕೀಸ್‌ನಲ್ಲಿ ಒನ್ ಆಂಡ್ ಓನ್ಲಿ ವರಲಕ್ಷ್ಮಿ ಪಾತ್ರಕ್ಕೆ ಜೀವ ತುಂಬಿದ ಅಪರ್ಣಾ, ಬೇರೆಯವರಿಗೆ ನಗಿಸುತ್ತಾ ಸಾಗಿದರು.

ಶಬ್ದಗಳಿಗೆ ಭಾವ ತುಂಬಿದ ನಿರೂಪಕಿ
ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆದಾಗ ಕಾಣಿಸಿಕೊಳ್ಳುವ ಚಿರಪರಿಚಿತ ಮುಖವೇ ಅಪರ್ಣಾ ಅವರದ್ದಾಗಿತ್ತು. ಬರೀ ರಾಜಕೀಯ, ಖಾಸಗಿ ಕಾರ್ಯಕ್ರಮಗಳನ್ನು ಅಷ್ಟೇ ಅಲ್ಲ ಸಂಗೀತ ಕಾರ್ಯಕ್ರಮಗಳೇ ಆಗಿರಲಿ, ಸಾಹಿತ್ಯ ಸಮ್ಮೇಳನಗಳೇ ಆಗಿರಲಿ. ಅದಕ್ಕೆ ತಕ್ಕಂತೆ ನಿರೂಪಣೆಯನ್ನು ಮಾಡುವ ಕ್ಷಮತೆಯನ್ನು ಅಪರ್ಣಾ ಪಡೆದಿದ್ದರು.
ಒಂದು ಕಾರ್ಯಕ್ರಮಕ್ಕೆ ಬರುವೆ ಎಂದು ಮಾತುಕೊಟ್ಟರೆ ಅಪರ್ಣಾ ಅದಕ್ಕಾಗಿ ಮನೆಯಲ್ಲಿ ಹಲವು ಗಂಟೆಗಳ ಕಾಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಯಾವ ಕಾರ್ಯಕ್ರಮಕ್ಕೆ ಎಷ್ಟು ಭಾವ ತುಂಬ ಬೇಕು ಎಂಬುದನ್ನು ಅಪರ್ಣಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ ಸಹ, ದಶಕಗಳ ಕಾಲ ಅವರ ಕಂಚಿನ ಕಂಠದ ಧ್ವನಿ ನಮ್ಮ ಕಿವಿಗಳಲ್ಲಿ ಯಾವಾಗಲೂ ಶಾಶ್ವತವಾಗಿ ಇರುತ್ತದೆ.












Click it and Unblock the Notifications