ಬಿಸಿಯೂಟ ಪಾತ್ರಗೆ ಬಿದ್ದಿದ್ದ ಅನುಷಾ ಸಾವು

ಮಂಗಳವಾರ ಮಧ್ಯಾಹ್ನ ಸಾಂಬಾರು ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅನುಷಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಅನುಷಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯ ಹೋಬಳಿ ಕೇಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಷಾ 1ನೇ ತರಗತಿ ಓದುತ್ತಿದ್ದಳು. ಮಂಗಳವಾರ ಮಧ್ಯಾಹ್ನ ಬಿಸಿಯೂಟ ಪಡೆಯಲು ಮಕ್ಕಳು ಸರದಿ ಸಾಲಿನಲ್ಲಿ ಬರುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳ ನಡುವೆ ನೂಕುನುಗ್ಗಲು ಉಂಟಾಗಿ, ಅನುಷಾ ಕುದಿಯುತ್ತಿದ್ದ ಸಾಂಬಾರು ಪಾತ್ರೆಗೆ ಬಿದ್ದಿದ್ದಳು. ಮಕ್ಕಳ ಚೀರಾಟ ಕೇಳಿ ಆಗಮಿಸಿದ ಶಿಕ್ಷಕರು, ಅನುಷಾಳನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರಗೆ ದಾಖಲಿಸಿದ್ದರು.
ಮಗುವಿನ ಸ್ಥಿತಿ ಗಂಭೀರವಾದ ಕಾರಣ, ಸಂಜೆ ಅನುಷಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ಆಕೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾಳೆ.
ಶಿಕ್ಷಕರ ನಿರ್ಲಕ್ಷ್ಯ ಆರೋಪ : ಡಿ.ಪಾಳ್ಯ ಶಾಲೆಯಲ್ಲಿ 494 ವಿದ್ಯಾರ್ಥಿಗಳಿದ್ದು 10 ಜನ ಶಿಕ್ಷಕರಿದ್ದಾರೆ. ಆದರೆ, ಬಿಸಿಯೂಟ ಹಾಕುವ ವೇಳೆಯಲ್ಲಿ ಯಾವುದೇ ಶಿಕ್ಷಕರು ಅಲ್ಲಿ ಇರಲಿಲ್ಲ. ಆದ್ದರಿಂದ ಘಟನೆ ಸಂಭವಿಸಿದೆ ಎಂದು ಅನುಷಾ ಪೋಷಕರು ಆರೋಪಿಸಿದ್ದಾರೆ.
ಶಾಲೆಗೆ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಮತ್ತು ಜಿಲ್ಲಾ ಉಪಯೋಜನಾಧಿಕಾರಿ ಮಂಜುನಾಥ್ ಧಾವಿಸಿ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ಕೃಷ್ಣಪ್ಪ ಅವರನ್ನು ಘಟನೆಗೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಅಡುಗೆ ಸಿಬ್ಬಂದಿ ಮತ್ತು ಮುಖ್ಯ ಶಿಕ್ಷಕರು ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications