ನೋಡಿರಣ್ಣಾ ಕನಕಪುರದ ವಿಜಯದಶಮಿ ದಸರ ಉತ್ಸವವಾ!
ಕನಕಪುರ, ಅ.26: ಸಾಮಾಜಿಕ ಸಾಮರಸ್ಯವನ್ನು ಮೂಲಮಂತ್ರವಾಗಿಸಿಕೊಂಡು ಕಳೆದ 12 ವರ್ಷಗಳಿಂದ ಪಟ್ಟಣದಲ್ಲಿ ದಸರ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಕನಕಪುರ ಸಾಮೂಹಿಕ ವಿಜಯದಶಮಿ ದಸರ ಉತ್ಸವ ಸಮಿತಿಯಿಂದ ನಿನ್ನೆ ಶುಕ್ರವಾರವೂ 12 ನೇ ವರ್ಷದ ದಸರ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಪವಿತ್ರ ದುರ್ಗಾಷ್ಟಮಿ, ಮಹಾ ನವಮಿ ಹಾಗೂ ವಿಜಯದಶಮಿ ಶುಭಪರ್ವದಲ್ಲಿ ಸಾಮೂಹಿಕ ದಸರ ಉತ್ಸವ ಆಚರಣೆ ನಡೆಯುತ್ತದೆ. ಕನಕಪುರಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ದೇವಿಯನ್ನು ಮೆರವಣೆಗೆ ನೆಡೆಸಿದರು.
ಉಜ್ಜನಿ ಸದ್ಬರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಯಾದ ಮಹಾಸ್ವಾಮಿಗಳು, ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನೇಶ್ವರ ಸ್ವಾಮಿ, ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವಾರು ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಗೆ ಮುಂಚಿತವಾಗಿ ಸಾರ್ವಜನಿಕ ಸಮಾರಂಭವು ನಡೆಯಿತು. ಉಜ್ಜಯಿನಿ ಸದ್ಬರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಯಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸಮಾಜದಲ್ಲಿ ದ್ವೇಷ ಅಸೂಯೆಗಳು ಹೆಚ್ಚಾಗುತ್ತಿದ್ದು ಮಹಿಳೆಯರ ಮೇಲೆ ಆತ್ಯಾಚಾರಗಳು ನಿರಂತರವಾಗಿ ನೆಡೆಯುತ್ತಿದೆ. ಅದನ್ನು ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ. ಆತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗುವ ಕಾನೂನನ್ನು ಜಾರಿಗೆ ತರಬೇಕು ಎಂದರು.
ಯಾವುದೇ ರಾಷ್ಟ್ರದಲ್ಲಿ ಸರ್ವ ಧರ್ಮದ ಜನಾಂಗದವರೂ ಬದುಕು ನೆಡೆಸುತ್ತಿಲ್ಲ. ಆದರೆ ಭಾರತ ದೇಶದಲ್ಲಿ ಹಲವಾರು ಧರ್ಮ ಹಾಗೂ ಎಲ್ಲಾ ಜನಾಂಗದವರು ಬದುಕುತ್ತಿದ್ದಾರೆ. ಇಂದು ನಮ್ಮ ಪರಂಪರೆಯನ್ನು ಮರೆಯುತ್ತಿದ್ದೇವೆ. ಮಾತೆಯನ್ನು ಅಗೌರವದಿಂದ ಕಾಣುತ್ತಿದ್ದೇವೆ. ಯಾವುದೇ ನದಿಗಳಿಗೆ ಪುರುಷರ ಹೆಸರು ಇಟ್ಟಿಲ್ಲ. ಆದರೆ ಮಹಿಳೆಯರ ಹೆಸರುಗಳಲ್ಲೇ ಹೆಚ್ಚಾಗಿ ಬಳಸಿದ್ದೇವೆ. ಅಂದ ಮೇಲೆ ಮಾತೆ ಶಕ್ತಿ ದೇವತೆಯಂತಹ ದೇವತೆಯನ್ನು ಪೂಜ್ಯ ಭಾವನೆಯಿಂದ ಕಾಣುವ ಕೆಲಸವಾಗಬೇಕು ಎಂದು ತಿಳಿಸಿದರು.

ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ
ನಮ್ಮ ದೇಶದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ವಿದೇಶಿಗಳಿಗೆ ಹೋಗಿ ಆ ದೇಶವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಅದನ್ನು ತಡೆಗಟ್ಟುವ ಕೆಲಸ ಪೋಷಕರು ಮಾಡಬೇಕು. ವೃದ್ಧರನ್ನು ಮಕ್ಕಳು ಗೌರವದಿಂದ ಕಾಣುವ ಕೆಲಸ ಮಾಡಿದರೆ ವೃದ್ಧಾಶ್ರಮಗಳು ಹೆಚ್ಚುವುದಿಲ್ಲ. ನಮ್ಮ ನಾಡಿನ ನೆಲ ಜಲಕ್ಕೆ ಅನ್ಯಾಯವಾದಾಗ ಹೋರಾಟವನ್ನು ಮಾಡಬೇಕು. ನಮ್ಮಲ್ಲಿರುವ ಜಾತಿ ವೈಷಮ್ಯವನ್ನು ಮರೆತು ನಾವೇಲ್ಲರೂ ಭಾರತಾಂಬೆಯ ಮಕ್ಕಳು ಎಂಬುವುದನ್ನು ಅರಿತು ಕೊಂಡು ಬಾಳಿದಾಗ ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

ಜಾನಪದ ಕಲಾ ತಂಡಗಳ ಮೆರವಣಿಗೆ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ: ನಂದಿ ಕುಣಿತ, ಬಸವ, ಪೂಜ ಕುಣಿತ, ಚಂಡಿ ನಗಾರಿ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಸೋಮನ ಕುಣಿತ, ಕೀಲು ಕುದರೆ, ಬಸವನ ನೃತ್ಯ, ಕೋಲಾಟ, ಗೊರವರ ಕುಣಿತ, ನಮಿಲು ನೃತ್ಯ, ಗಾರುಡಿ ಗೊಂಬೆ, ಎತ್ತರದ ಮನುಷ್ಯ, ಬ್ಯಾಂಡ್ ಸೆಟ್, ವೀರಬಾಹು, ಮಹಿಷಿ, ದಿಂಗುರಿ, ಪಾಳೇಗಾರ ವೇಷ, ಹುಲಿವೇಷ, ದೊಣ್ಣೆವರಸೆ, ಕತ್ತಿವರಸೆ, ವೇಷಭೂಷಣ, ನಗರದ ಪ್ರಮುಖ ದೇವರುಗಳ ಪಲ್ಲಕ್ಕಿ ಉತ್ಸವಗಳು ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟಾಗ ರಸ್ತೆಯ ಎರಡು ಬದಿಯಲ್ಲಿ ಜಮಾಯಿಸಿದ್ದ ಸಾವಿರಾರು ಜನತೆ ವಿಕ್ಷೀಸಿ ಸಂಭ್ರಮಿಸಿದರು. ಮನೆಗಳ ಮುಂದೆ ರಂಗೋಲಿ ಹಾಕಿ, ಹಸಿರು ತೋರಣಗಳಿಂದ ಬೀದಿಗಳನ್ನು ಸಿಂಗರಿಸಿದ ಊರ ಜನರು ಮನೆಯ ಮುಂದೆ ಉತ್ಸವ ಬರುತ್ತಿದಂತೆ ಮುಂಭಾಗದಲ್ಲಿ ನಿಂತು ದೇವಿಗೆ ಆರತಿ ಎತ್ತಿ ಪೂಜಿಸಿದರು. ಪಟ್ಟಣದ ಕೋಟೆ, ಹಲಸಿನ ಮರದ ದೊಡ್ಡಿ, ಎಂಜಿ ರಸ್ತೆ, ಮಸೀದಿ ಬೀದಿ, ರಾಮನಗರ ರಸ್ತೆ, ವಿವೇಕಾನಂದ ನಗರದಲ್ಲಿ ಹಾದು ತಾಲೂಕು ಕಚೇರಿಯನ್ನು ತಲುಪಿತು.

ವಿಶ್ವವಿಖ್ಯಾತ ಮೈಸೂರು ದಸರಾವನ್ನು ನೆನಪು
ದಸರಾ ನೆನಪು: ಪಟ್ಟಣದಲ್ಲಿ ನೆಡೆದ ದಸರ ಉತ್ಸವು ಜನರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ನೆನಪಿಸಿತು. ತಾಲೂಕಿನ ನಾನಾ ಗ್ರಾಮಗಳಿಂದ ಜನತೆ ಬಂದು ವೀಕ್ಷಿಸಿದರು. ಹಲವು ವರ್ಷಗಳಿಂದ ಮೈಸೂರಿನ ಜಂಬೂಸವಾರಿ ಮಾದರಿಯಲ್ಲಿ ಕಳೆದ 12 ವರ್ಷಗಳಿಂದ ನೆಡೆಯುತ್ತಿದೆ. ತಾಲೂಕಿನ ಜನತೆಯಲ್ಲದೆ ಅಕ್ಕ ಪಕ್ಕದ ತಾಲುಕಿನ ಜನತೆಯು ಸಹ ದಸರಾವನ್ನು ವಿಕ್ಷೀಸಲು ಬಂದಿದ್ದು ವಿಶೇಷವಾಗಿತ್ತು.

ಸರಕಾರದ ಧನ ಸಹಾಯವಿಲ್ಲ
ಆರ್ಥಿಕ ನೆರವು: ಸರಕಾರದ ಧನ ಸಹಾಯವಿಲ್ಲದೆ ಸಾಮೂಹಿಕ ವಿಜಯ ದಶಮಿಯನ್ನು ತಾಲೂಕಿನಲ್ಲಿ ದಾನಿಗಳ ಸಹಕಾರದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಸಾಮೂಹಿಕ ವಿಜಯ ದಶಮಿ ಆಚರಣೆಗೆ ಸರಕಾರ ಧನ ಸಹಾಯದ ನೆರವು ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಸಾಗಿದ ಜನರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಹೆಸರುಬೇಳೆ ಸೇರಿದಂತೆ ಪ್ರಸಾದವನ್ನು ನೀಡಲಾಯಿತು.
ಶ್ರೀ ಅನ್ನದಾನೇಶ್ವರ ಸ್ವಾಮಿ, ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿ, ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ವೀರ ಸಂದೇಶ ಸಾರಿದರು. ನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಆರ್ ಕೃಷ್ಣಮೂರ್ತಿ, ಪಿಎಲ್ ಮಹದೇವಸ್ವಾಮಿ, ಹೆಚ್ಆರ್ ಕೃಷ್ಣಪ್ಪ, ವೆಂಕಟೇಶ್, ನಾಗನಂದ್, ಭಗತ್ ರಾಮು, ಬಿ. ನಾಗರಾಜು ಸೇರಿದಂತೆ ಅನೇಕರು ಹಾಜರಿದ್ದರು.












Click it and Unblock the Notifications