Kumbha Mela: ಪ್ರಯಾಗ್ ರಾಜ್‌ನಲ್ಲೂ ಕನ್ನಡದ ಕಂಪು!
2025ರ ಜನವರಿ 13 ರಿಂದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಪ್ರಯಾಗ್ ರಾಜ್‌ನಲ್ಲಿ ಕುಂಭಮೇಳ ಆರಂಭವಾಗಲಿದೆ. ಅತಿ ಹೆಚ್ಚು ಜನ ಸೇರುವ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ದೇಶ ವಿದೇಶದಿಂದ ಕೋಟ್ಯಂತರ ಭಕ್ತರು ಆಗಮಿಸಲಿದ್ದಾರೆ. ರೈಲ್ವೆ ಇಲಾಖೆ ಕುಂಭ ಮೇಳಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿದೆ ದೇಶದ ಮೂಲೆ ಮೂಲೆಗಳಿಂದ ವಿಶೇಷ ರೈಲುಗಳನ್ನು ಓಡಿಸಲಿದೆ. ಲಕ್ಷಾಂತರ ಕನ್ನಡಿಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕುಂಭ ಮೇಳೆದ ವೇಳೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಕನ್ನಡದ ಕಂಪು ಪಸರಿಸಲಿದೆ. ಹೌದು, ದೇಶದ ಎಲ್ಲಾ ಕಡೆಗಳಿಂದ ಭಕ್ತರು ಪ್ರಯಾಗ್ ರಾಜ್‌ಗೆ ಆಗಮಿಸುವ ಕಾರಣ, ರೈಲ್ವೆ ನಿಲ್ದಾಣದಲ್ಲಿ ಕನ್ನಡವೂ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ನೀಡಲು ನಿರ್ಧರಿಸಲಾಗಿದೆ.

ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಸೇರಿದಂತೆ 12 ಭಾಷೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ದೇಶದ ವಿಶಾಲವಾದ ಭಾಷಾ ವೈವಿಧ್ಯತೆಯ ಜೊತೆಗೂಡಿ ಭಾರತೀಯ ರೈಲ್ವೆಯು ಸಮರ್ಥವಾಗಿ ಸಾಗುತ್ತಿದೆ ಎಂದು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ಎಕ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಚಿವ ವಿ. ಸೋಮಣ್ಣ, ದೇಶದ ಮೂಲೆ ಮೂಲೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 12 ಭಾಷೆಗಳಲ್ಲಿ ಪ್ರಕಟಣೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಕುಂಭಮೇಳದ ಬಗ್ಗೆ ...
ಮಹಾ ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಈ ಕುಂಭಮೇಳ ನಡೆಯುತ್ತದೆ. ಇಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ಕಳೆಯುತ್ತವೆ ಎನ್ನುವ ನಂಬಿಕೆ ಇದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಕುಂಭಮೇಳಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 2025ರ ಜನವರಿ 14 ರಿಂದ ಫೆಬ್ರವರಿ 26ರವರೆಗೆ ಮಹಾ ಕುಂಭಮೇಳ ನಡೆಯಲಿದೆ.
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಸಮುದ್ರ ಮಂಥನ ಮಾಡಿದ ಬಳಿಕ ಅಮೃತ ಸಿಕ್ಕಿದ ಸಂದರ್ಭದಲ್ಲಿ ದೇವರು ಮತ್ತು ರಾಕ್ಷಸರು ತಮಗೆ ಬೇಕೆಂದು ಜಗಳವಾಡಿದ ಸಂದರ್ಭದಲ್ಲಿ ನಾಲ್ಕು ಸ್ಥಳಗಳಲ್ಲಿ ಅಮೃತವಿದ್ದ ಮಡಕೆ ಬಿದ್ದಿತ್ತು. ಈ ಸ್ಥಳಗಳೇ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ ಆಗಿದ್ದು, ಇಲ್ಲಿ ಸ್ನಾನ ಮಾಡಿದರೆ ಕಾಯಿಲೆಗಳು, ಪಾಪಗಳು ಕಳೆಯುತ್ತವೆ ಎಂದು ನಂಬಿಕೆಯಿದೆ
ಕುಂಭಮೇಳಕ್ಕಾಗಿ ಗೂಗಲ್ ಕೂಡ ವಿಶೇಷ ಕ್ರಮ ತೆಗೆದುಕೊಳ್ಳಲು ಸಜ್ಜಾಗಿದೆ. ಮಹಾ ಕುಂಭಮೇಳದ ಪ್ರದೇಶವನ್ನು ತನ್ನ ನ್ಯಾವಿಗೇಷನ್ ಸಿಸ್ಟಮ್‌ಗೆ ಜೋಡಿಸಲು ನಿರ್ಧರಿಸಿದೆ. ಇದಕ್ಕಾಗಿ ಗೂಗಲ್ ಮತ್ತು ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಎಂಒಯುಗೆ ಸಹಿ ಹಾಕಿದೆ. ಇದರಿಂದಾಗಿ ಭಕ್ತರು ಕುಂಭಮೇಳ ನಡೆಯುವ ಸ್ಥಳದ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯಬಹುದಾಗಿದೆ.












Click it and Unblock the Notifications