ಅಣ್ಣಾ ಕ್ಯಾಂಟೀನ್ : 5 ರೂ.ಗೆ ಐದು ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ!
ಬೆಂಗಳೂರು, ಫೆ.4 : ಹಟ್ಟಿ ಭಾಗ್ಯ, ಅಣ್ಣ ಇಡ್ಲಿ, ಅಣ್ಣ ತಾರುಣ್ಯ ಆರೋಗ್ಯ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ರಾಜ್ಯ ಯೋಜನಾ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲು ಮುಂದಾಗಿದೆ.
ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ ನಡೆದ ರಾಜ್ಯ ಯೋಜನಾ ಮಂಡಳಿಯ ಸಭೆಯ ಬಳಿಕ ಮಾತನಾಡಿದ ಅವರು, ಸರ್ಕಾರವು ಜನಪರವಾದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಕೈಗೊಳ್ಳಬಹುದಾದ ಹೊಸ ಯೋಜನೆಗಳ ಬಗ್ಗೆ ಶಿಫಾರಸು ಮಾಡಲು ತೀರ್ಮಾನಿಸಿದೆ ಎಂದರು. [ರಾಜ್ಯದ ಜನರಿಗೆ 10 ರೂ.ಲಾಟರಿ ಭಾಗ್ಯ?]

ಅಣ್ಣ ಇಡ್ಲಿ : ಈ ಯೋಜನೆಯಡಿ 5 ರೂ.ಗೆ 5 ಇಡ್ಲಿ, ಉಪ್ಪಿಟ್ಟು , ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ ನೀಡುವ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಬಹುದಾಗಿದೆ. ಮೊದಲು ಬೆಂಗಳೂರಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ನಂತರ ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಕಲಬುರಗಿ ನಗರಗಳಿಗೆ ವಿಸ್ತರಿಸಲಾಗುವುದು ಎಂದರು. ['ಅಮ್ಮಾ ಇಡ್ಲಿ' ಮೇಲೆ ಸಿ.ಎಂ.ಇಬ್ರಾಹಿಂ ಕಣ್ಣು]
ಹಟ್ಟಿ ಭಾಗ್ಯ : ಬುಡಕಟ್ಟು ಜನರ ಆರ್ಥಿಕ ಅಭಿವೃದ್ಧಿ ಮಹಿಳಾ ಸಬಲೀಕರಣ ಹಾಗೂ ಸಾಲದ ಮೇಲಿನ ಸಹಾಯಧನ, ಬಡ್ಡಿ ನೀಡುವ ಸಲುವಾಗಿ ಹಟ್ಟಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದಾಗಿ 8 ರಿಂದ 9 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಎಪಿಎಲ್ ಕಾರ್ಡ್ ಕೊಡುಗೆ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ 'ಅನ್ನಭಾಗ್ಯ' ಯೋಜನೆ ಜಾರಿಯಲ್ಲಿದೆ. ಅದರಂತೆ, ಎಪಿಎಲ್ ಕಾರ್ಡುದಾರರಿಗೆ ತಿಂಗಳಿಗೆ 15 ಕೆಜಿ ಅಕ್ಕಿ, ಎಣ್ಣೆ, ಬೆಳೆ, ಐಯೋಡೈಸ್ಡ್ ಉಪ್ಪನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಇಬ್ರಾಹಿಂ ಹೇಳಿದರು.
ಅಣ್ಣ ತಾರುಣ್ಯ ಆರೋಗ್ಯ ಯೋಜನೆ : ದೀರ್ಘಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಮಧ್ಯಮ ವರ್ಗ ಹಾಗೂ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡಲು ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದ ಲಾಟರಿಯನ್ನು ಪುನಃ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಯೋಜನೆಗೆ 'ಅಣ್ಣ ತಾರುಣ್ಯ ಆರೋಗ್ಯ ಯೋಜನೆ' ಎಂದು ನಾಮಕರಣ ಮಾಡಲಾಗುತ್ತದೆ ಎಂದರು.












Click it and Unblock the Notifications