ಅನ್ನಭಾಗ್ಯದ ಅಕ್ಕಿ ಬದಲು ಹಣ: ನ್ಯಾಯಬೆಲೆ ಅಂಗಡಿ ಬಂದ್ ಮಾಡಿ ವಿತರಕರ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣವನ್ನು ನೀಡುತ್ತಿದೆ. ಆದರೆ ಕೆಲವೇ ತಿಂಗಳು ಮಾತ್ರ ಈ ವ್ಯವಸ್ಥೆ ಅಂತಾ ಹೇಳಿ ಇನ್ನೂ ಮುಂದುವರೆಸಿಕೊಂಡು ಬರುತ್ತಿದೆ.
ರಾಜ್ಯ ಸರ್ಕಾರದ ಈ ನಡೆಗೆ ಪಡಿತರ ವಿತಕರು ತೀವ್ರ ಅಸಮಾಧಾನ ಹೊರಹಾಕಿದ್ದು, ಇಂದು ಮುಷ್ಕರ ನಡೆಸಿದ್ದು ಮುಂದಿನ ದಿನಗಳನ್ನು ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಹಣವನ್ನು ನೀಡುವ ಬದಲಿಗೆ 10 ಕೆ.ಜಿ. ಅಕ್ಕಿಯನ್ನು ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾಂಕೇತಿಕವಾಗಿ ನ್ಯಾಯಬೆಲೆ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಇರುವ ನೂರಾರು ನ್ಯಾಯಬೆಲೆ ಅಂಗಡಿಗಳನ್ನು ಒಂದು ದಿನ ಮಟ್ಟಿಗೆ ಬಂದ್ ಮಾಡಿ ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘ ಕರೆ ನೀಡಿದ್ದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಗಿದೆ.
ಸರ್ಕಾರಿ ಪಡಿತರ ವಿತರಕರ ಬೇಡಿಕೆಗಳು ಏನು..?
01. ಹತ್ತು ಕೆಜಿ ಅಕ್ಕಿ ನಮ್ಮಿಂದಲೇ ವಿತರಣೆ ಆಗಬೇಕು
02. ಅಕ್ಕಿ ಕೊರತೆಯಾದಲ್ಲಿ ಕಮಿಷನ್ ಹಣ ನೀಡುವುದು
03. ರಸೀದಿ ಪ್ರಿಂಟರ್‌ಗಳ ಖರೀದಿ ಅಸಾಧ್ಯ
04. ಬಾಕಿ ಇರುವ ಕಮಿಷನ್ ಹಣ ಬಿಡುಗಡೆ
05. ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಕಡಿವಾಣ
ಗ್ಯಾರಂಟಿಯಲ್ಲೊಂದಾದ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿಯನ್ನು ಕಂಡಿತವಾಗಿಯೂ ನೀಡುವುದು. ಅಥವಾ 5 ಕೆಜಿಗೆ ಡಿಬಿಟಿ ಹಣ ನೀಡುವುದಾದರೆ 170 ರೂಪಾಯಿಗೆ ಬರುವ ನಮ್ಮ ಕಮಿಷನ್ ಹಣ ರೂ.6.50 ಗಳನ್ನು ನೀಡುವುದು. ಕಷ್ಟದಲ್ಲಿರುವ ನಮ್ಮ ವಿತರಕರು ಯಾವುದೇ ಕಾರಣಕ್ಕೂ ಹೊಸ ಆದೇಶದನ್ವಯ "ರಸೀದಿ ಪ್ರಿಂಟರ್‌ಗಳನ್ನು" ಖರೀದಿಸಲು ಸಾಧ್ಯವಿಲ್ಲ.
ಬಾಕಿ ಇರುವ 4 ತಿಂಗಳುಗಳ ಕಮಿಷನ್ ಹಣ, 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 3 ಮಾರ್ಚ್ ತಿಂಗಳ ಕಮೀಷನ್ ಹಣ ಬಿಡುಗಡೆ. ನಿಯಮಗಳನ್ನು ಗಾಳಿಗೆ ತೂರಿ ನಾಯಿಕೊಡೆಗಳಂತೆ ಹಣದ ಲಾಲಾಸೆಗಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮನಸೋ ಇಚ್ಛೆ ನೀಡುತ್ತಿರುವುದು ತಕ್ಷಣಕ್ಕೆ ನಿಲ್ಲಬೇಕು ಸೇರಿ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ
ಮೊದಲಿಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಇತರೆ ರಾಜ್ಯಗಳಲ್ಲಿ ಅಕ್ಕಿಯೇ ಸಿಗುತ್ತಿಲ್ಲ ಎನ್ನುವ ಕಾರಣಗಳನ್ನು ಹೇಳಿದ್ದ ಸರ್ಕಾರ ದುಡ್ಡು ಕೊಡುತ್ತೇವೆ ಅಂತಾ ಹೇಳಿತ್ತು. ಇನ್ನು ಡಿಬಿಟಿ ಮೂಲಕ ದುಡ್ಡು ನೀಡುವುದು ತಾತ್ಕಾಲಿಕ ಅಂತಾ ಹೇಳಿದ್ದ ಸರ್ಕಾರ ಇನ್ನೂ ಅದನ್ನು ಮುಂದುವರೆಸಿಕೊಂಡು ಬಂದಿದೆ.












Click it and Unblock the Notifications