ಅನ್ನಭಾಗ್ಯ; ಹಣದ ಬದಲು ಅಕ್ಕಿ, ಅಪ್‌ಡೇಟ್ ನೋಡಿ
ಬೆಂಗಳೂರು, ಸೆಪ್ಟೆಂಬರ್ 29; ಕರ್ನಾಟಕ ಸರ್ಕಾರ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 'ಅನ್ನಭಾಗ್ಯ' ಸಹ ಒಂದು. ಈಗಾಗಲೇ ಈ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಅಕ್ಕಿಯ ಬದಲು ಹಣವನ್ನು ನೀಡಲಾಗುತ್ತಿದೆ.
ಈಗ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ. ಎಚ್. ಮುನಿಯಪ್ಪ 'ಅನ್ನಭಾಗ್ಯ' ಯೋಜನೆಯ ಕುರಿತು ಅಪ್‌ಡೇಟ್ ನೀಡಿದ್ದಾರೆ. ಯೋಜನೆಯಡಿ ಅಕ್ಟೋಬರ್ ತಿಂಗಳಿನಿಂದ ಹಣದ ಬದಲು 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರ 'ಅನ್ನಭಾಗ್ಯ' ಯೋಜನೆಯ ಅಕ್ಕಿಯನ್ನು ಪೂರೈಕೆ ಮಾಡಲು ಅಕ್ಕಿಯ ಕೊರತೆ ಎದುರಾಯಿತು. ಈ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ ನಡೆದಿದೆ; ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ. ಎಚ್. ಮುನಿಯಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. "ಈ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಟೋಬರ್ ತಿಂಗಳಿನಿಂದ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಈಗಾಗಲೇ ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದೆ" ಎಂದರು.
"ಬರಪೀಡಿತ ತಾಲೂಕುಗಳಲ್ಲಿ ಹಣದ ಬದಲು ಅಕ್ಕಿಯನ್ನೇ ಕೊಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಕಾಂಗ್ರೆಸ್ ಪಕ್ಷ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಗ್ಯಾರಂಟಿ ಯೋಜನೆ ಜಾರಿಗೆ ಅಕ್ಕಿಯ ಕೊರತೆ ಎದುರಾಗಿತ್ತು. ಅಕ್ಕಿಯ ಕೊರತೆ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಹಣವನ್ನು ನೀಡಲಾಗುತ್ತಿದೆ" ಎಂದು ಸಚಿವರು ತಿಳಿಸಿದರು.
"ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಆಹಾರ ನಿಗಮದಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದರೂ ನಿಗಮ ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿತ್ತು. ಈಗ ಮುಂದಿನ ತಿಂಗಳಿನಿಂದ ಹಣಕ್ಕೆ ಬದಲಾಗಿ 10 ಕೆಜಿ ಅಕ್ಕಿಯನ್ನು ಬರಪೀಡಿತ ತಾಲೂಕುಗಳಿಗೆ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.
"ನೇರ ನಗದು ವರ್ಗಾವಣೆ ಮೂಲಕ ಬಹುತೇಕ ಬಿಪಿಎಲ್ ಕಾರ್ಡ್‌ದಾರರಿಗೆ ನಗದು ಹಂಚಿಕೆ ಮಾಡಲಾಗುತ್ತಿದೆ. ಕೆಲವು ಕಡೆ ಫಲಾನುಭವಿಗಳೇ ಬ್ಯಾಂಕ್ ಖಾತೆಗೆ ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ" ಎಂದರು.
"ಬಿಪಿಎಲ್ ಕಾರ್ಡ್‌ಗಳ ತಿದ್ದುಪಡಿ ಮತ್ತು ಹೊಸ ಹೆಸರು ಸೇರ್ಪಡೆಗೆ ಅವಕಾಶ ಮಾಡಿಕೊಡುವ ಮೂಲಕ ಎಲ್ಲಾ ಅರ್ಹರಿಗೂ ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆ ಸೌಲಭ್ಯ ಒದಗಿಸಲಾಗುತ್ತದೆ" ಎಂದು ಸಚಿವ ಕೆ. ಎಚ್. ಮುನಿಯಪ್ಪ ಹೇಳಿದರು.
ಕರ್ನಾಟಕದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಉಂಟಾಗಿದೆ. ಆದ್ದರಿಂದ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಆವರಿಸಿದೆ. ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.
ಈಗ ಸರ್ಕಾರ ಬರಪೀಡಿತ ತಾಲೂಕುಗಳ ಜನರಿಗೆ ಸಹಕಾರಿಯಾಗಲು ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ಅಕ್ಟೋಬರ್ ತಿಂಗಳಿನಿಂದ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದೆ. ಬರದ ಸಂದರ್ಭದಲ್ಲಿ ಅಕ್ಕಿ ಸಿಕ್ಕಿದರೆ ಜನರಿಗೆ ಸಹ ಸಹಕಾರಿಯಾಗಲಿದೆ.












Click it and Unblock the Notifications