ಅಕ್ಕಿ ಹುಳ ಹಿಡಿಯುತ್ತಿದ್ದರೂ ಕನ್ನಡಿಗರಿಗೆ ನೀಡಲು ತಯಾರಾಗದ ಕೇಂದ್ರದ ಬಿಜೆಪಿ ಸರ್ಕಾರ: ಡಿಕೆಶಿ ಗಂಭೀರ ಆರೋಪ
ಬೆಂಗಳೂರು, ಜೂನ್ 28: ಅನ್ನಭಾಗ್ಯ ಯೋಜನೆಯಡಿ ಸದ್ಯ ನೀಡಲಾಗುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ಮಿಕ್ಕ ಐದು ಕೆಜಿ ಅಕ್ಕಿಗೆ ಬದಲಾಗಿ ಪ್ರತೀ ಕೆಜಿಗೆ 34 ರೂಪಾಯಿಗಳಂತೆ 170 ರೂಪಾಯಿಗಳನ್ನು ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೆ ನೀಡಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಹಣವನ್ನು ಬಿಪಿಎಲ್ ಕಾರ್ಡಿನಲ್ಲಿ ಮನೆಯ ಮುಖ್ಯಸ್ಥ ಎಂದು ನಮೂದಿಸಿದವರ ಬ್ಯಾಂಕ್ ಖಾತೆಗೆ ಜುಲೈ ತಿಂಗಳಿಂದಲೇ ವರ್ಗಾವಣೆ ಮಾಡಲಾಗುವುದು ಎಂದೂ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.

ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದ್ದ 5 ಕೆಜಿ ಅಕ್ಕಿಯನ್ನು ಹೊಂದಿಸಲು ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಸಮಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಕೊಡುವವರೆಗೂ ಹಣವನ್ನು ನೀಡಲಾಗುತ್ತದೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಗ್ಯಾರಂಟಿಗಳನ್ನು ವಿಫಲಗೊಳಿಸಲು ಸತತವಾಗಿ ಯತ್ನಿಸುತ್ತಿದೆ. ಕೇಂದ್ರದ ಗೋದಾಮುಗಳಲ್ಲಿ ಅಕ್ಕಿ ಹುಳ ಹಿಡಿಯುತ್ತಿದ್ದರೂ ಕನ್ನಡಿಗರಿಗೆ ನೀಡಲು ತಯಾರಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದೂ ಡಿಕೆಶಿ ಭರವಸೆ ನೀಡಿದ್ದಾರೆ.
ಆಹಾರ ಸಚಿವ ಕೆಎಚ್ ಮುನಿಯಪ್ಪ ಟ್ವೀಟ್
ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬವಾದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನೇರವಾಗಿ ಜನರಿಗೆ ಹೆಚ್ಚುವರಿ ಅಕ್ಕಿ ಬದಲು 1ಕೆಜಿ 34 ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಟ್ವೀಟ್ ಮಾಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಟ್ವೀಟ್
ಬಿಪಿಎಲ್ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ತೋರಿದರೂ, ನಾವು ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಬಿಪಿಎಲ್ ಕುಟುಂಬಗಳಿಗೆ ಐದು ಕೆಜಿ ಅಕ್ಕಿ ಜತೆಗೆ ಕೆಜಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
'ಇದು ಕಾಂಗ್ರೆಸ್ ನ ಜನಪರ ನಿಲುವಿಗೆ ಸಾಕ್ಷಿ. ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಹತ್ತು ಕೆಜಿ ಅಕ್ಕಿ ನೀಡುವ ವಾಗ್ದಾನ ಪೂರೈಸಿಯೇ ತೀರುತ್ತದೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದೆ ಎಷ್ಟೇ ತೊಂದರೆ ನೀಡಿದರೂ ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications