ಅನ್ನಭಾಗ್ಯ; ಫಲಾನುಭವಿಗಳು ಅಂಚೆ ಕಚೇರಿಯಲ್ಲೂ ಖಾತೆ ತೆರೆಯಬಹುದು
ಬೆಂಗಳೂರು, ಜುಲೈ 13; 'ಅನ್ನ ಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣವನ್ನು ಪಾವತಿಸಲಾಗುತ್ತದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಅನ್ನಭಾಗ್ಯ' ಸಹ ಒಂದು. ಸರ್ಕಾರ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ ಆಹಾರ ಧಾನ್ಯದೊಂದಿಗೆ, ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯವನ್ನು ಸೇರಿಸಿ, ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲಿದೆ.

ಇದಕ್ಕಾಗಿ ಅಕ್ಕಿಯನ್ನು ಪೂರೈಕೆ ಮಾಡಲು ಸರ್ಕಾರ ಟೆಂಡರ್ ಕರೆದಿದೆ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಆಹಾರ ಧಾನ್ಯ ಸರಬರಾಜು ಮಾಡುವ ತನಕ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ. 34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ.
ಅಂಚೆ ಕಚೇರಿಯಲ್ಲಿಯೂ ಖಾತೆ ತೆರೆಯಬಹುದು; 'ಅನ್ನಭಾಗ್ಯ' ಯೋಜನೆಯ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿಯೂ ಉಳಿತಾಯ ಖಾತೆಯನ್ನು ತೆರೆಯಲು ಅವಕಾಶವಿದೆ. ಸರ್ಕಾರ ಬ್ಯಾಂಕ್ ಖಾತೆ ಮಾತ್ರವಲ್ಲ ಅಂಚೆ ಇಲಾಖೆಯ ಉಳಿತಾಯ ಖಾತೆಯ ಫಲಾನುಭವಿಗಳಿಗೆ ಸಹ ಯೋಜನೆ ಅನ್ವಯ ಹಣವನ್ನು ಜಮೆ ಮಾಡಲಿದೆ.
ಅಂಚೆ ಕಚೇರಿಯಲ್ಲಿ ಸುಲಭವಾಗಿ ಫೋಸ್ಟ್‌ಮ್ಯಾನ್‌ಗೆ ಅಗತ್ಯ ದಾಖಲೆ ಒದಗಿಸಿ ಮನೆ ಬಾಗಿಲಿನಲ್ಲೇ ಸೇವೆ ಪಡೆಯಬಹುದಾಗಿದೆ ಎಂದು ಅಂಚೆ ಇಲಾಖೆ ಹೇಳಿದೆ. ಈ ಸೇವೆಗಾಗಿಯೇ ಅಂಚೆ ಇಲಾಖೆ 'ಡಿ ಕ್ಯೂಬ್ ' ಎಂಬ ಅಪ್ಲಿಕೇಶನ್ ಪರಿಚಯಿಸಿದೆ. ಜನರು ಇದರ ಸದುಪಯೋಗ ಪಡೆದುಕೊಂಡು ಉಳಿತಾಯ ಖಾತೆ ತೆರೆಯುವಂತೆ ಮನವಿ ಮಾಡಿದೆ.
ಉಳಿತಾಯ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ನೀಡಬೇಕು. 500 ರೂ. ಪಾವತಿಸಿ ಕೂಡಲೇ ಖಾತೆ ಮಾಡಿಸಿಕೊಳ್ಳಬಹುದು. ಸರ್ಕಾರದ ಯೋಜನೆಗಳ ನೇರನಗದು ವರ್ಗವಣೆಗಾಗಿ ಅಂಚೆ ಉಳಿತಾಯ ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಸಿದ್ದರಾಮಯ್ಯ ವಾಗ್ದಾಳಿ; ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆಯಾಗಿ ಕೊಡುತ್ತಿರಲಿಲ್ಲ. ಕೆಜಿ ಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು" ಎಂದು ಅರೋಪಿಸಿದರು.
"ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ?, ಬೇಡವೋ? ಇದನ್ನು ಕರ್ನಾಟಕದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ, ಬೇಡವೋ?" ಎಂದು ಪ್ರಶ್ನೆ ಮಾಡಿದರು.
"4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡುತ್ತೇನೆ" ಎಂದರು.












Click it and Unblock the Notifications