ಅಂಕೋಲಾದ ವಾಟ್ಸಾಪ್ ಹುಡುಗರು ಕಾಲಹರಣ ಮಾಡ್ತಿಲ್ಲ!
ಕಾರವಾರ, ಜುಲೈ 07 : ಎಲ್ಲರಿಗೂ ಈಗಿನ ಜಮಾನಾದಲ್ಲಿ ವಾಟ್ಸಪ್, ಫೇಸ್ಬುಕ್‌ನದೇ ಚಿಂತೆ. ದಿನಬೆಳಗಾದರೆ ಸಾಕು ಕೈಯಲ್ಲಿ ಮೊಬೈಲ್ ಹಿಡಿದು ಚಾಟಿಂಗ್ ಮಾಡೋಕೆ ಶುರು ಮಾಡಿದರೆ ಅದು ಯಾವಾಗ ಮುಗಿಯತ್ತೋ ಆ ಭಗವಂತನಿಗೂ ಗೊತ್ತಿರುವುದಿಲ್ಲ.
ವಾಟ್ಸಾಪ್ ಅನ್ನುವುದೇ ವ್ಯರ್ಥ ಕಾಲಹರಣಕ್ಕೆ ಹೇಳಿ ಮಾಡಿಸಿದ ತಾಣವಾಗಿರುವಾಗ, ವಾಟ್ಸಾಪ್ ಗ್ರೂಪ್ ಕಟ್ಟಿಕೊಂಡು ಸಮಾಜ ಸೇವೆಗೆ ಮುಂದಾಗಿರುವ ಈ ಯುವಕರ ಉತ್ಸಾಹ ನೋಡಿದರೆ ನಿಜಕ್ಕೂ ನೀವು ಬೆರಗಾಗ್ತೀರಾ.

ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿಕೊಂಡು ಸಮಯ ವ್ಯರ್ಥ ಮಾಡುತ್ತಿರುವವರ ನಡುವೆ, ಅದೇ ಸಾಮಾಜಿಕ ಜಾಲ ತಾಣವನ್ನು ಉಪಯೋಗಿಸಿಕೊಂಡು ಸಮಾಜದ ಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿದೆ ಅಂಕೋಲಾ ತಾಲ್ಲೂಕಿನ ಕೇಣಿಯ 'ಜೇನುಗೂಡು' ವಾಟ್ಸಾಪ್ ಗ್ರೂಪ್.

ಭಾನುವಾರ ಬಂತೆಂದರೆ ಸಾಕು ಈ ಗ್ರೂಪಿನ ಯುವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕೈಯಲ್ಲಿ ಪೊರಕೆ ಹಿಡಿದು, ಹಳ್ಳಿಹಳ್ಳಿಯನ್ನು ಅಲೆದು ಸ್ವಚ್ಛತೆ ಮಾಡುತ್ತಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ 'ಸ್ವಚ್ಛ ಭಾರತ್ ಮಿಷನ್'ಗೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಜೂನ್ 25ಕ್ಕೆ ಇವರ ಸ್ವಚ್ಛತಾ ಕಾರ್ಯ 106ನೇ ವಾರ ಪೂರ್ಣಗೊಳಿಸಿದೆ. ಸ್ವಚ್ಛತೆಯ ಜತೆಜತೆಗೆ ಅಲ್ಲಿನ ಸ್ಥಳೀಯರಿಗೆ ಕರಪತ್ರ ಸೇರಿದಂತೆ ಭಾಷಣದ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. 'ಹಸಿರೇ ಉಸಿರು' ಎಂಬ ಕಾರ್ಯಕ್ರಮದ ಮೂಲಕ ಗಿಡ ನೆಡುವ ಕಾರ್ಯ ಮಾಡುತ್ತಿದ್ದಾರೆ.
ಇವರ ಈ ಕಾರ್ಯವೈಖರಿ ನೋಡಿರುವ ಅದೆಷ್ಟೋ ಯುವಕರು ಇವರ ಗುಂಪಿಗೆ ಸೇರ್ಪಡೆಯಾಗುತ್ತಿದ್ದಾರೆ. ನಾಲ್ಕೈದು ಮಂದಿಯಿಂದ ಆರಂಭವಾದ ಗುಂಪು ಈಗ ನೂರಾರು ಜನರ ಬಳಗವಾಗಿ ನಿರ್ಮಾಣವಾಗಿದೆ. ಜತೆಗೆ ಅಂಕೋಲಾ ತಾಲೂಕಿಗಷ್ಟೇ ಸೀಮಿತವಾಗದೇ ಯಲ್ಲಾಪುರ, ಭಟ್ಕಳ ಸೇರಿದಂತೆ ಹೊರ ರಾಜ್ಯದ ಕೆಲವೆಡೆಯೂ ಕೂಡ ಇವರ ಗುಂಪಿನ ಹೆಸರಿನಲ್ಲಿ ಯುವಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

'ಸಮಾಜಕ್ಕಾಗಿ ಏನಾದರು ಮಾಡಬೇಕೆನ್ನುವ ತುಡಿತವಿದೆ. 100 ವಾರಗಳನ್ನು ಅಂಕೋಲೆಯ ಸಹೃದಯಿ ಮನಸ್ಸುಗಳೊಂದಿಗೆ ಜೊತೆಗೂಡಿ ಪೂರೈಸಿದ್ದು, ಇಡೀ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮರುನಿರ್ಮಾಣ ಮಾಡುವ ಕನಸು ಹೊತ್ತಿದ್ದೇವೆ' ಅನ್ನುತ್ತಾರೆ ಜೇನುಗೂಡು ವಾಟ್ಸಪ್ ಗ್ರೂಪಿನ ಸಂಸ್ಥಾಪನಾ ಅಧ್ಯಕ್ಷ ವಿಶಾಲ ಬಂಟ.












Click it and Unblock the Notifications