ಸಂವಿಧಾನ ಬದಲಾಯಿಸುವ ಹೇಳಿಕೆ: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿಯೇ ಬದಲಾವಣೆ?
ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಸಂವಿಧಾನ ಬದಲಾಯಿಸುವ ಹೇಳಿಕೆ ಅವರಿಗೆ ತಿರುಗುಬಾಣವಾಗುವ ಸಾಧ್ಯತೆ ಇದೆ. ಸಂವಿಧಾನ ಬದಲಾಯಿಸಲು ಬಿಜೆಪಿ ಕನಿಷ್ಠ 400 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ಇದು ಅವರ ವೈಯಕ್ತಿಕ ಅಭಿಪ್ರಾಯ ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದು ಹೇಳಿದೆ. ನಾಲ್ಕು ಬಾರಿ ಸಂಸದರಾಗಿರುವ ಅವರಿಂದಲೂ ಪಕ್ಷ ವಿವರಣೆ ಕೇಳಿದೆ.

ಹಲವು ಬಾರಿ ದ್ವೇಷ ಭಾಷಣ ಮಾಡುವ ಮೂಲಕ ವಿವಾದ ಮಾಡಿಕೊಂಡಿರುವ ಅನಂತ್ ಕುಮಾರ್ ಹೆಗಡೆ, ತಮ್ಮದೇ ಪಕ್ಷದ ನಾಯಕರ ವಿರುದ್ಧವೂ ಮಾತನಾಡಿ ಅವಾಂತರ ಮಾಡಿಕೊಂಡಿದ್ದರು. ಚುನಾವಣೆ ಹೊತ್ತಿನಲ್ಲಿ ಅವರ ಹೇಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀರುವ ಅಪಾಯ ಇದ್ದು, ಅವರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ.
ಈ ಬಾರಿ ಟಿಕೆಟ್ ಇಲ್ಲ?
ಬಿಜೆಪಿಯ 195 ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಹಲವಾರು ಸಂಸದರನ್ನು ಬದಲಾಯಿಸಲಾಗಿದೆ. ಇವರಲ್ಲಿ ದೆಹಲಿ ಸಂಸದರಾದ ರಮೇಶ್ ಬಿಧುರಿ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಫೈರ್‌ಬ್ರಾಂಡ್ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದ್ದಾರೆ.
ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ ಆದರೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ನಾಯಕತ್ವವನ್ನು ಮುಜುಗರಕ್ಕೀಡು ಮಾಡಿದ ಅಭ್ಯರ್ಥಿಗಳನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇತ್ತೀಚೆಗೆ ಪಕ್ಷದ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಕೂಡ ಸಂಸದರಿಗೆ ಹೇಳಿಕೆಗಳನ್ನು ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದರು. ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದರು.
ಅನಂತ್ ಕುಮಾರ್ ಹೆಗಡೆ ಹೇಳಿದ್ದೇನು?
ಸಂವಿಧಾನ ಬದಲಾವಣೆ ಮಾಡಲು ತರಲು 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದರು. ಹಿಂದೂಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಸಂವಿಧಾನವನ್ನು ಬದಲಾಯಿಸಿದೆ ಎಂದು ಆರೋಪಿಸಿದರು.
ಕರ್ನಾಟಕದ ಬಿಜೆಪಿ ಘಟಕ ಅನಂತ್ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ "ಸಂವಿಧಾನದ ಕುರಿತು ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು ಮತ್ತು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ಬಿಜೆಪಿ ಪುನರುಚ್ಚರಿಸುತ್ತದೆ ಹೆಗ್ಡೆಯವರ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆ ಕೇಳುತ್ತದೆ" ಎಂದು ಹೇಳಿದೆ.
ಬಿಜೆಪಿ ನಾಯಕ ಗೌರವ್ ಭಾಟಿಯಾ ಕೂಡ ಹೆಗ್ಡೆಯವರ ಮಾತುಗಳು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. "ಪಕ್ಷವು ಈ ಹೇಳಿಕೆಯನ್ನು ಗಮನಿಸಿದೆ ಮತ್ತು ಸ್ಪಷ್ಟೀಕರಣವನ್ನು ಕೇಳಿದೆ" ಎಂದು ಹೇಳಿದ್ದಾರೆ.












Click it and Unblock the Notifications