ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡಾಡ್ತಿದ್ದಾರೆ: ಸ್ವಪಕ್ಷದ ನಾಯಕರಿಗೆ ಟಾಂಗ್ ಕೊಟ್ಟ ಹಿಂದೂ ಹುಲಿ
ಉತ್ತರ ಕನ್ನಡ,ಮಾರ್ಚ್ 05: ರಾಜ್ಯ ಬಿಜೆಪಿಯಲ್ಲಿ ಲೋಕಸಭಾ ಚುನಾವಣಾ ಟಿಕೆಟ್ ಗಾಗಿ ಸಾಕಷ್ಟು ಜನರು ಲಾಬಿ ನಡೆಸುತ್ತಿದ್ದಾರೆ. ಹಿಂದುತ್ವದ ಭದ್ರಕೋಟೆಯಾದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕಾಗಿ ಮೂವರು ಘಟಾನುಘಟಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ.
ಹೌದು, ಉತ್ತರ ಕನ್ನಡ ಲೋಕಸಭಾ ಬಿಜೆಪಿ ಟಿಕೆಟ್ಗಾಗಿ ಮೂವರು ನಾಯಕರ ನಡುವೆ ಪೈಪೋಟಿ ನಡೆಸಿದ್ದು, ಈ ಬಾರಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಇಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಉತ್ತರ ಕನ್ನಡ ಟಿಕೆಟ್ ಗಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಹರಿಪ್ರಕಾಶ್ ಕೋಣೆಮನೆ ಕಸರತ್ತು ನಡೆಸುತ್ತಿದ್ದು, ಇದೀಗ ಸಪಕ್ಷದ ನಾಯಕರ ವಿರುದ್ಧವೇ ಹಾಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಟಾಂಗ್ ನೀಡಿದ್ದಾರೆ.
ಈ ಕುರಿತು ಸೋಮವಾರ ಮಾತನಾಡಿದ ಅವರು, ಎಷ್ಟೋ ಜನರು ನಮಗೆ ಟಿಕೆಟ್ ಸಿಕ್ಕಿದೆ ಎಂದು ಓಡಾಡುತ್ತಿದ್ದಾರೆ. ಬಿಜೆಪಿಯಷ್ಟು ಕಾಂಗ್ರೆಸ್ನಲ್ಲಿಲ್ಲ, ಅವರಲ್ಲಿ ಸ್ವಲ್ಪ ಕನ್ಫ್ಯೂಸ್ ಇದೆ. ಆದರೆ ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧ ಟಾಂಗ್ ಕೊಟ್ಟಿದ್ದಾರೆ.
ಎಲ್ಲರೂ ನನಗೆ ಟಿಕೆಟ್ ಸಿಕ್ಕಿದೆ, ನನಗೆ ಟಿಕೆಟ್ ಸಿಕ್ಕಿದೆ ಅಂತಿದ್ದಾರೆ. ನನ್ನ ಬಳಿ ಟಿಕೆಟ್ ಇಲ್ಲ, ನಮ್ಮ ಹೈಕಮಾಂಡ್ ಟಿಕೆಟ್ ಕೊಡುತ್ತದೆ. ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ನನಗೂ ಕೂಡ ಗೊತ್ತಿಲ್ಲ. ಬಿಜೆಪಿಯಷ್ಟು ಕಾಂಗ್ರೆಸ್ನಲ್ಲಿಲ್ಲ, ಅವರಲ್ಲಿ ಸ್ವಲ್ಪ ಕನ್ಫ್ಯೂಸ್ ಇದೆ. ಆದರೆ ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡ್ತಿದ್ದಾರೆ ಎಂದು ಹೇಳಿದರು.
ನನ್ನನ್ನು 6 ಬಾರಿ ಗೆಲ್ಲಿಸಿದ್ದೀರಾ ಇದಕ್ಕಿಂತ ಜಾಸ್ತಿ ಇನ್ನೇನು ಬೇಕು? ಎಂದು ಪ್ರಶ್ನಿಸಿದ ಅನಂತ್ ಕುಮಾರ್ ಹೆಗಡೆ, ಇಷ್ಟು ವರ್ಷಗಳ ಕಾಲ ನನ್ನನ್ನು ಗೆಲ್ಲಿಸಿದಕ್ಕೆ ನಿಮಗೆಲ್ಲ ಧನ್ಯವಾದಗಳು. ನನಗೆ ರಾಜಕೀಯ ಬೇಡ ಎಂದು ಸುಮ್ಮನಿದ್ದೆ. ಆದರೆ ಭಟ್ಕಳ, ಕಾರವಾರದಿಂದ ಬಂದು ನನಗೆ ಒತ್ತಾಯ ಮಾಡಿದ್ರು. ಯಾರೆ ಸ್ಪರ್ಧಿಸಿದ್ರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಉತ್ತರ ಕನ್ನಡ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರ್ಯಕರ್ತರಿಗೆ ಕರೆ ನೀಡಿದರು.
ಇನ್ನು ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಸಹ ಇದೊಂದು ಬಾರಿ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಇತ್ತ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ ಹರೀಶ್ ಪ್ರಕಾಶ್ ಕೋಣೆಮನೆ ಸಹ ಟಿಕೆಟ್ ಸಿಗುವ ವಿಶ್ವಾಸವನ್ನ ಹೊಂದಿದ್ದಾರೆ. ಇನ್ನು ಅನಾರೋಗ್ಯದ ಕಾರಣದಿಂದ ರಾಜಕೀಯ ಕ್ಷೇತ್ರದಿಂದ ಸ್ವಲ್ಪ ದೂರದಲ್ಲಿದ್ದ ಹೆಗಡೆಯವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಆ್ಯಕ್ಟೀವ್ ಆಗಿದ್ದು, ಈ ಬಾರಿ ಹಿಂದುತ್ವದ ಭದ್ರಕೋಟೆಯಾದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications