ದೇವಿಗೆ ನಾಲಿಗೆಯನ್ನೇ ಕೊಟ್ಟ ಆನಂದ್ ಸಿಂಗ್ ಅಭಿಮಾನಿ!
ಹೊಸಪೇಟೆ, ಜ. 25: ಆತನ ಮಾತು ತೊದಲುತ್ತಿತ್ತು. ಖಾಸಗಿ ವಾಹಿನಿಯ ನಿರೂಪಕಿ ಕೇಳುವ ಪ್ರಶ್ನೆಗೆ ಉತ್ತರ ನೀಡಲು ತಡವರಿಸುತ್ತಿದ್ದ. ಹರಕೆ ತೀರಿಲ್ಲ, ನಾನು ಹರಕೆ ತೀರಸಬೇಕು ಎಂದು ಎಂದು ಪದೇ ಪದೇ ಹೇಳುತ್ತಿದ್ದ. ಅಷ್ಟಕ್ಕೂ ಇದೇನು ತೊಟ್ಟಿಲು ನೀಡುವ, ಅಥವಾ ತುಲಾಭಾರ ಮಾಡಿಸುವ ಹರಕೆಯಲ್ಲ. ನಾಲಿಗೆಯನ್ನೇ ಕತ್ತರಿಸಿಕೊಳ್ಳುವ ವಿಚಿತ್ರ ಹರಕೆ!
ಹೌದು.. ಇಂಥದ್ದೊಂದು ಹರಕೆ ತೀರಿಸಲು ಮುಂದಾದವ ಆಸ್ಪತ್ರೆ ಸೇರಿದ್ದು ಚೇತರಿಸಿಕೊಳ್ಳುತ್ತಿದ್ದಾನೆ. ಶಾಸಕ ಆನಂದ್ ಸಿಂಗ್ ಜೈಲಿನಿಂದ ಬಿಡುಗಡೆಯಾದರೆ ನಾಲಿಗೆ ಕತ್ತರಿಸಿಕೊಳ್ಳುತ್ತೇನೆ ಎಂದು ಕೊಪ್ಪಳದ ಹುಲೇಗಮ್ಮ ದೇವಿಗೆ ಹರಕೆ ಹೊತ್ತಿದ್ದ ಕಾರಿಗನೂರು ಗ್ರಾಮದ ಲಾರಿ ಚಾಲಕ ಮುರಳಿ (38) ಹಾಗೇ ಮಾಡಿಕೊಂಡು ಆಪತ್ತು ತಂದುಕೊಂಡಿದ್ದಾನೆ.[ಬೇಲೇಕೇರಿ ಪ್ರಕರಣ : ಶಾಸಕ ಆನಂದ್ ಸಿಂಗ್ ಗೆ ಜಾಮೀನು]

ಜಯಲಲಿತಾ ಜೈಲು ಸೇರಿದ್ದಾಗ 25ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡರು, ನೂರಾರು ಜನ ಜೀವ ತೆಗೆದುಕೊಳ್ಳಲು ಯತ್ನ ನಡೆಸಿದರು. ಇಂಥ ಅತಿರೇಕದ ವರ್ತನೆಗೆ ಈಗ ಹೊಸಪೇಟೆಯೂ ಸಾಕ್ಷಿಯಾಗಿದೆ.
ಆನಂದ್ ಸಿಂಗ್ ಬಿಡುಗಡೆಯಾಗುತ್ತಿದ್ದಂತೆ ದೇವಾಲಯಕ್ಕೆ ತೆರಳಿ ನಾಲಿಗೆ ಕತ್ತರಿಸಿಕೊಳ್ಳಲು ಮುಂದಾಗಿದ್ದ ಮುರಳಿಯನ್ನು ಪೊಲೀಸರು ಮತ್ತು ಮನೆಯವರು ಮನವೊಲಿಸಿ ವಾಪಸ್ ಕರೆತಂದಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಮುರಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಲಿಗೆ ಕತ್ತರಿಸಿಕೊಂಡಿದ್ದು ಆಸ್ಪತ್ರೆ ಸೇರಿದ್ದಾನೆ.[ಬೇಲೇಕೇರಿ ಪ್ರಕರಣ, ಶಾಸಕ ಆನಂದ್ ಸಿಂಗ್ ಬಂಧನ]
ಮುರಳಿಯನ್ನು ಆನಂದ್ ಸಿಂಗ್ ಸಂಬಂಧಿಕರು ಸಂಪರ್ಕ ಮಾಡಿದ್ದು ಇಂಥ ಅತಿರೇಕದ ವರ್ತನೆ ತೋರಬಾರದು ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ನಾಯಕನ ಮೇಲಿನ ಅಂಧಾಭಿಮಾನಕ್ಕೆ ಮುರಳಿ ತನ್ನ ನಾಲಿಗೆಯನ್ನೇ ಬಲಿ ನೀಡಿದ್ದಾನೆ.












Click it and Unblock the Notifications