ಸಂದರ್ಶನ: ಪದ್ಮ ಪ್ರಶಸ್ತಿ ವಿಜೇತ ತೂಗು ಸೇತುವೆ ಸರದಾರ ಗಿರೀಶ್ ಭಾರದ್ವಾಜ್

By: ಸಂದರ್ಶನ: ಬಾಲರಾಜ್ ತಂತ್ರಿ
Subscribe to Oneindia Kannada

ದಕ್ಷಿಣಕನ್ನಡ ಸುಳ್ಯ ಮೂಲದ, ತೂಗು ಸೇತುವೆಗಳ ಸರದಾರ ಎಂದೇ ಹೆಸರಾಗಿರುವ ಗಿರೀಶ್ ಭಾರದ್ವಾಜ್ ಅವರಿಗೆ 2017ನೇ ಸಾಲಿನ ದೇಶದ ಪರಮೋಚ್ಚ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಈ ಸಂದರ್ಭದಲ್ಲಿ ಅವರ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಂತಿದೆ.

ಪದ್ಮ ಪ್ರಶಸ್ತಿ ಪಡೆದ ನಿಮಗೆ ಒನ್ ಇಂಡಿಯಾ ಸಂಸ್ಥೆಯ ಸಮಸ್ತ ಸಿಬ್ಬಂದಿ ಮತ್ತು ನಮ್ಮ ಓದುಗರ ಕಡೆಯಿಂದ ಅಭಿನಂದನೆಗಳು ಸರ್.

an exclusive interview with padma award 2017 winner girish bharadwaj

ಪ್ರ: ತೂಗು ಸೇತುವೆಗಳ ಸರದಾರ ಎಂದೇ ನಿಮ್ಮ ಕರೆಯಲಾಗುತ್ತದೆ, ಈ ಪರಿಕಲ್ಪನೆ ನಿಮಗೆ ಹೇಗೆ ಬಂತು?
ಭಾರದ್ವಾಜ್ : ಇದು ನನ್ನ ಪರಿಕಲ್ಪನೆಯಲ್ಲ. ಅಮೆರಿಕಾ ಮುಂತಾದ ಕಡೆ ಹಿಂದೆನೇ ತೂಗು ಸೇತುವೆ ಇತ್ತು. 1989ರಲ್ಲಿ ಕುಶಾಲನಗರದಲ್ಲಿ ಆಪ್ತರಾದ ನಾರಾಯಣ್ ಎನ್ನುವುವರ ಜೊತೆ ಸೇರಿ ಈ ಯೋಜನೆಯನ್ನು ಮೊದಲ ಬಾರಿ ಕಾರ್ಯಗತಗೊಳಿಸಲಾಯಿತು.

ಇದಾದ ನಂತರ ಪಯಸ್ವಿನಿ ನದಿಗೆ. ಹೆಚ್ಚಾಗಿ ಸರಕಾರದ ಅನುದಾನ ಇಲ್ಲದೇ ನಡೆಯುವಂತಹ ಕೆಲಸ ಇದಾಗಿತ್ತು. ಕುಶಾಲನಗರದಲ್ಲಿನ ತೂಗು ಸೇತುವೆ ಯಶಸ್ವಿಯಾದ ನಂತರ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಇದು ಹೆಚ್ಚಿನ ಮಹತ್ವ ಪಡೆಯಿತು.['ತೂಗು ಸೇತುವೆಗಳ ಸರದಾರ'ನಿಗೆ ಒಲಿದ ಪದ್ಮಶ್ರೀ]

ಪ್ರ: ತೂಗು ಸೇತುವೆಯ ಬಗ್ಗೆ ಸ್ವಲ್ಪ ವಿವರಣೆ ನೀಡ್ತೀರಾ?
ಭಾರದ್ವಾಜ್ : ನದಿ ಅಥವಾ ಕೆರೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಮರದ ಸಾಮಾನುಗಳನ್ನು ಬಳಸಿ ನಿರ್ಮಿಸುವಂತಹ ತೂಗೊಯ್ಯಾಲೆಯಂತಹ ಸೇತುವೆ ಇದಾಗಿದೆ. ಸೇತುವೆಯ ಮೇಲೆ ಜನ ಸಂಚಾರವನ್ನು ಗಮನದಲ್ಲಿ ಇಟ್ಟುಕೊಂಡು ಈ ಸೇತುವೆ ನಿರ್ಮಾಣ ಮಾಡಲಾಗುತ್ತದೆ.

ಜೊತೆಗೆ ಅಧಿಕ ಎಂದರೆ ಮುನ್ನೂರು ಮೀಟರ್ ಗಿಂತ ಹೆಚ್ಚು ಉದ್ದದ ಸೇತುವೆ ನಿರ್ಮಿಸುವುದು ಸುರಕ್ಷಿತೆಯ ದೃಷ್ಟಿಂದ ಒಳ್ಳೆಯದಲ್ಲ. ಕಾಂಕ್ರೀಟ್, ಸ್ನಿಫ್ಫರ್ಸ್, ಬೇಲಿ ತಂತಿ,ರಬ್ಬರ್ ಪ್ಯಾಡ್ ಮುಂತಾದವುಗಳನ್ನು ಬಳಸಿ ಈ ಸೇತುವೆ ನಿರ್ಮಾಣ ಮಾಡಲಾಗುವುದು.

an exclusive interview with padma award 2017 winner girish bharadwaj

ಪ್ರ: ಇದುವರೆಗೆ ಎಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೀರಾ? ನಿಮ್ಮ ಈ ವೃತ್ತಿ ಜೀವನದಲ್ಲಿ ನಿಮಗೆ ಕಷ್ಟಕರವಾದ ಯಾವುದಾದರೂ ಸನ್ನಿವೇಶ ಎದುರಾಗಿತ್ತಾ?
ಭಾರದ್ವಾಜ್: ಇದುವರೆಗೆ ಅಂದಾಜು 230 ತೂಗು ಸೇತುವೆಯನ್ನು ನಿರ್ಮಿಸಿದ್ದೇವೆ. ಹಲವು ಬಾರಿ ಕ್ಲಿಷ್ಟಕರವಾದ ಸನ್ನಿವೇಶ ಎದುರಿಸಿದ್ದೇವೆ. ಒಂದು ಬಾರಿ ಕಾಂಕ್ರೀಟ್ ಪಿಲ್ಲರ್ ನಿರ್ಮಿಸುವಾಗ ತೊಂದರೆ ಎದುರಾಗಿತ್ತು. ನಾನು ಮೂಲತ: ಮೆಕ್ಯಾನಿಕಲ್ ಇಂಜಿನಿಯರ್, ಸಿವಿಲ್ ಇಂಜಿನಿಯರಿಗೆ ಸಂಬಂಧ ಪಟ್ಟ ಪುಸ್ತಕವನ್ನು ರೆಫರ್ ಮಾಡಿ ಪರಿಹಾರ ಕಂಡುಕೊಂಡಿದ್ದುಂಟು.

ಪ್ರ: ಕರ್ನಾಟಕ, ಆಂಧ್ರ, ಒರಿಸ್ಸಾ ಮತ್ತು ಕೇರಳದಲ್ಲಿ ತೂಗು ಸೇತುವೆ ನಿರ್ಮಿಸಿದ್ದೀರಾ. ದೇಶದ ಇತರ ಭಾಗಗಳಿಂದಲೂ ಈ ಸೇತುವೆ ನಿರ್ಮಿಸಲು ನಿಮಗೆ ಆಫರ್ ಬಂದಿತ್ತಾ?
ಭಾರದ್ವಾಜ್: ಈ ನಾಲ್ಕು ರಾಜ್ಯಗಳನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ಸೇತುವೆ ನಿರ್ಮಿಸಿಲ್ಲ. ದೂರವಾಣಿ ಕರೆಗಳು ಬರುತ್ತಲೇ ಇರುತ್ತವೆ, ಶ್ರೀಲಂಕಾದಿಂದ ಒಂದು ಪ್ರಾಜೆಕ್ಟಿಗೆ ಕರೆ ಬಂದಿತ್ತು. ಚೆನ್ನೈನಲ್ಲೂ ಪ್ರಾಜೆಕ್ಟ್ ಸಂಬಂಧ ಮಾತುಕತೆ ನಡೆದಿತ್ತು ಆದರೆ ಸುನಾಮಿ ಅಪ್ಪಳಿಸಿದ ನಂತರ ತೂಗು ಸೇತುವೆ ಪ್ರಾಜೆಕ್ಟನ್ನು ಅವರು ಕೈಬಿಟ್ಟಿದ್ದರು.

ಪ್ರ: ಸಾಮಾನ್ಯವಾಗಿ ತೂಗು ಸೇತುವೆಗೆ ತಗಲುವ ಖರ್ಚು ಮತ್ತು ಸಮಯ ಎಷ್ಟು?
ಭಾರದ್ವಾಜ್: ನೆಲಮಟ್ಟದಿಂದ ಇಷ್ಟು ಅಡಿಯ ಮೇಲೆ ಈ ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ. ಜೊತೆಗೆ ಸೇತುವೆಯನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ, ಅಂದಾಜು ಎಷ್ಟು ಜನ ಸೇತುವೆಯನ್ನು ಬಳಸುತ್ತಾರೆ ಎನ್ನುವುದರ ಮೇಲೆ ಅಂದಾಜು ಲೆಕ್ಕ ಹೇಳಬಹುದು.

ಅಂದಾಜು ನೂರು ಮೀಟರಿಗೆ 35-40 ಸಾವಿರ ರೂಪಾಯಿ ವೆಚ್ಚ ತಗುಲಬಹುದು ಮತ್ತು 30-40ದಿನಗಳ ಅವಧಿಯಲ್ಲಿ ಇದನ್ನು ನಿರ್ಮಿಸಬಹುದು.

ಪ್ರ: ನಿಮ್ಮ ಸಂಸ್ಥೆಯಲ್ಲಿ ಎಷ್ಟು ಜನ ಉದ್ಯೋಗಿಗಳು ಇದ್ದಾರೆ, ಮತ್ತು ಯಾವ ನಗರದಿಂದ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿರುವುದು?
ಭಾರದ್ವಾಜ್: ದಕ್ಷಿಣಕನ್ನಡ ಜಿಲ್ಲೆ ಸುಳ್ಯದಲ್ಲಿ ಜನರಲ್ ಫ್ಯಾಬ್ರಿಕೇಶನ್ಸ್ ಎನ್ನುವ ಫ್ಯಾಕ್ಟರಿಯನ್ನು ಹೊಂದಿದ್ದೇನೆ, ಇದು ನನ್ನ ಜೀವನ ನಡೆಯಲು. ತೂಗು ಸೇತುವೆ ನನ್ನ ಮಹತ್ವಾಕಾಂಕ್ಷೆಯ ಕೆಲಸ. ಒಟ್ಟು 40-45 ಉದ್ಯೋಗಿಗಳು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರ: ತೂಗು ಸೇತುವೆ ಇನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣ ಆಗಬೇಕೇ, ನಿಮ್ಮ ಅಭಿಪ್ರಾಯ?
ಭಾರದ್ವಾಜ್: ಒಮ್ಮೆ ಮಧ್ಯಪ್ರದೇಶ ಸರಕಾರದಿಂದ ಕರೆಬಂದಿತ್ತು. ತೂಗು ಸೇತುವೆಯಿಂದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ. ಅಬ್ಧುಲ್ ಕಲಾಂ ಅವರು ತಮ್ಮ ಪುಸ್ತಕವೊಂದರಲ್ಲಿ ಹಳ್ಳಿ ಅಭಿವೃದ್ದಿಯಾದರೆ, ದೇಶ ಉದ್ದಾರ ಆದಂತೆ ಎಂದಿದ್ದರು, ಮೋದಿಯವರೂ ಈ ಮಾತನ್ನೂ ಪುನರುಚ್ಚಿಸಿದ್ದಾರೆ.

ತೂಗು ಸೇತುವೆ ಕಡಿಮೆ ಅವಧಿಯಲ್ಲಿ, ಕನಿಷ್ಠ ಮೊತ್ತದಲ್ಲಿ ಮಾಡಬಹುದಾದ ಯೋಜನೆ, ಇದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗಬೇಕು ಎನ್ನುವುದು ನನ್ನ ಅಭಿಮತ.

ಪ್ರ: ಸೇತುವೆ ನಿರ್ಮಾಣದಿಂದ ಬಹಳಷ್ಟು ಊರುಗಳನ್ನು ಬೆಸೆದಿದ್ದೀರಿ, ಮನಸ್ಸುಗಳನ್ನೂ ಬೆಸೆದ ಉದಾಹರಣೆ ಇದೆಯೇ?
ಭಾರದ್ವಾಜ್: ನಾವು ನಿರ್ಮಿಸಿದ ಸೇತುವೆಗಳಿಂದ ಹಳ್ಳಿಗಳು ಸಂಪರ್ಕ ಸಾಧಿಸಿವೆ, ಜನರನ್ನು ಬೆಸೆಯುವ ಮಹತ್ಕಾರ್ಯದ ಕೆಲಸ ಇದೆಂದು ನಾನು ನಂಬಿದ್ದೇನೆ.

ಅನೇಕ ಹಳ್ಳಿಗಳಲ್ಲಿ ಜನರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಸ್ವಂತ ಹಣವನ್ನು ಹಾಕಿ ಸೇತುವೆ ನಿರ್ಮಿಸಿಕೊಟ್ಟಿದ್ದೇನೆ. ಸರ್ವೇ, ವಿನ್ಯಾಸ, ತಾಂತ್ರಿಕ ಸಲಹೆಗೆ ನಾನು ಫೀಸ್ ತೆಗೆದುಕೊಳ್ಳುವುದಿಲ್ಲ. ಇನ್ನು ಹಳ್ಳಿಗಳು ಒಂದಾದ ಮೇಲೆ, ಎರಡು ಊರಿನ ಮನಸ್ಸುಗಳೂ ಬೆಸೆಯುತ್ತವೆ ಅಲ್ಲವೇ..

ಪ್ರ: ಖ್ಯಾತಿ ಪಡೆದವರಿಗೆ ಸಾಮಾನ್ಯವಾಗಿ ಪದ್ಮ ಪ್ರಶಸ್ತಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು. ಆದರೆ ಎಲೆಮರೆಕಾಯಿಯಂತೆ ದುಡಿಯುವವರನ್ನು ಗುರುತಿಸಿ ಕೇಂದ್ರ ಸರಕಾರ ಈ ಬಾರಿ ಪ್ರಶಸ್ತಿ ನೀಡಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯ?

ಭಾರದ್ವಾಜ್: ನನ್ನನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದಾಗ ನಂಬಲು ಸಾಧ್ಯವಾಗಲಿಲ್ಲ. ಹೇಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎನ್ನುವುದರ ಬಗ್ಗೆ ಕುತೂಹಲವೂ ಇತ್ತು.

ಕೇಂದ್ರ ಸರಕಾರ ಕಮಿಟಿ ರಚಿಸಿ, ಕಮಿಟಿ ವರದಿ ಆಧರಿಸಿ ಹೆಸರನ್ನು ಅಂತಿಮ ಮಾಡಲಾಯಿತು ಎಂದು ಕೇಳಲ್ಪಟ್ಟೆ, ಮೋದಿ ಸರಕಾರ ನಮ್ಮ ಕಿರು ಸಾಧನೆಯನ್ನು ಗುರುತಿಸಿದ್ದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ತೂಗು ಸೇತುವೆ ನಿರ್ಮಾಣಗೊಂಡಾಗ ಜನರು ತೋರಿಸುವ ಪ್ರೀತಿ, ಆದರ, ಗೌರವ ಎಲ್ಲಕ್ಕಿಂತ ಹೆಚ್ಚು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An exclusive interview with Padma award 2017 winner Girish Bharadwaj. Hails from Sullia, Dakshina Kannada in Karnataka, Girish so far constructed 230+ suspension bridges across 4 states and got 2017 Padma award for Social Service category.
Please Wait while comments are loading...